ನಟ ಜಾನ್ ಅಬ್ರಹಾಂ ಅವರ ‘ಸತ್ಯಮೇವ ಜಯತೇ 2’ ಸಿನಿಮಾ 2020ರ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.
2018ರ ಸ್ವಾತಂತ್ರ್ಯೋತ್ಸವದ ದಿನದಂದು ಬಿಡುಗಡೆಯಾದ, ಜಾನ್ ಅಬ್ರಹಾಂ, ಮನೋಜ್ ಬಾಜಪೇಯಿ ಅಭಿನಯದ ‘ಸತ್ಯಮೇವ ಜಯತೇ’ ಚಿತ್ರದ ಮುಂದಿನ ಅವತರಣಿಕೆ ಇದು. ಈ ಚಿತ್ರದ ಸೀಕ್ವೆಲ್ ಬಗ್ಗೆ ಕೆಲ ದಿನಗಳಿಂದ ಗಾಳಿಸುದ್ದಿ ಹಬ್ಬಿತ್ತು. ಈಗ ಈ ಹೊಸ ಸಿನಿಮಾದ ಪೋಸ್ಟರ್‌ವೊಂದನ್ನು ನಟ ಜಾನ್ ಅಬ್ರಹಾಂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಿನಿಮಾದ ಬಿಡುಗಡೆ ದಿನವನ್ನೂ ಘೋಷಿಸಿದ್ದಾರೆ. ಮೊದಲ ಚಿತ್ರವನ್ನು ನಿರ್ದೇಶಿಸಿದ ಮಿಲಾಪ್ ಮಿಲಾನ್ ಜವೇರಿ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.
ಈ ಚಿತ್ರದಲ್ಲಿ ದಿವ್ಯಾ ಖೋಸ್ಲಾ ಕುಮಾರ್ ನಾಯಕಿಯಾಗಿ ನಟಿಸಲಿದ್ದು, ಇವರು ಸಿನಿಮಾದ ನಿರ್ಮಾಪಕ ಭೂಷಣ್‌ಕುಮಾರ್ ಅವರ ಪತ್ನಿ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸುವ ಬಗ್ಗೆ ದಿವ್ಯಾ ‘ಜಾನ್ ಹಾಗೂ ನಿರ್ದೇಶಕ ಮಿಲಾಪ್ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಚಿತ್ರದಲ್ಲಿ ನಾಯಕಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಇದು ನನಗೆ ಸಿಕ್ಕ ದೊಡ್ಡ ಅವಕಾಶ. ‘ಸತ್ಯಮೇವ ಜಯತೇ’ ಹಾಗೂ ‘ಬಾಟ್ಲಾ ಹೌಸ್’ನಲ್ಲಿ ಜಾನ್ ನಟನೆ ಅದ್ಭುತ. ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಈ ಚಿತ್ರವಲ್ಲದೇ ‘ಪಾಗಲ್‌ಪಂತಿ’, ‘ಮುಂಬೈ ಸಾಗಾ’ ಹಾಗೂ ಬೈಕ್ ರೇಸಿಂಗ್ ಕುರಿತಾದ ‘1911’ ಚಿತ್ರದಲ್ಲೂ ನಾಯಕನಾಗಿ ಜಾನ್ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಜಾನ್ ಅಬ್ರಹಾಂ ಜತೆ ಕಾಜಲ್ ಅಗರ್ವಾಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.