ಹೈದರಾಬಾದ್: ಮೊಮ್ಮಗನನ್ನು ಹೊಂದುವ ಬಯಕೆ ಕುರಿತು ನಟ ಚಿರಂಜೀವಿ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಚಿರಂಜೀವಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಅವರು ತಮ್ಮ ಮೊಮ್ಮಕ್ಕಳೊಂದಿಗೆ ಇರುವ ಚಿತ್ರವನ್ನು ಪ್ರದರ್ಶಿಸಲಾಯಿತು.
ಆಗ ಚಿರಂಜೀವಿ, ‘ನಾನು ಹುಡುಗಿಯರ ಹಾಸ್ಟಲ್‌ನ ವಾರ್ಡನ್ ಎಂಬಂತೆ ಭಾಸವಾಗುತ್ತದೆ. ಮನೆ ಪೂರ್ತಿ ಹೆಣ್ಣುಮಕ್ಕಳಿದ್ದಾರೆ. ಈ ಬಾರಿ ನನ್ನ ಮಗ ಚರಣ್ (ನಟ ರಾಮ್ ಚರಣ್) ನಮ್ಮ ಕುಟುಂಬದ ಘನತೆ ಕಾಪಾಡಲು ಗಂಡುಮಗುವನ್ನು ಹೊಂದುತ್ತಾನೆ ಎಂದು ನಂಬಿದ್ದೇನೆ’ ಎಂದು ಮಾತನಾಡಿದ್ದರು.
‘ಅವನಿಗೆ(ರಾಮ್‌ಚರಣ್) ಮತ್ತೆ ಹೆಣ್ಣು ಮಗು ಹುಟ್ಟಬಹುದೆಂಬ ಭಯವಿದೆ’ ಎಂದೂ ಹೇಳಿದ್ದರು.
ಚಿರಂಜೀವಿ ಅವರ ಈ ಹೇಳಿಕೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು, ನಿಮ್ಮಂತವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲವೇ? ಎಂದು ಕೇಳಿದ್ದಾರೆ.
‘ಲಿಂಗ ತಾರತಮ್ಯದಂತಹ ಹೇಳಿಕೆಗಳು 2025ರಲ್ಲಿಯೂ ಕೇಳಿಬರುತ್ತಿರುವುದು ದುರಾದೃಷ್ಟಕರ. ಅದರಲ್ಲೂ ಚಿರಂಜೀವಿಯಂತಹ ಮೇರು ನಟರು ತಮ್ಮ ಪರಂಪರೆಯನ್ನು ಉಳಿಸಿಕೊಂಡು ಹೋಗಲು ಗಂಡು ಮಗುಗಾಗಿ ಆಸೆ ಪಡುತ್ತಿರುವುದು ಕೇಳಿ ಇನ್ನಷ್ಟು ಖೇದವಾಗಿದೆ. ನಿಜಕ್ಕೂ ಇಂತಹ ಮನಸ್ಥಿತಿ ಬದಲಾಗಬೇಕಿದೆ’ ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಚಿರಂಜೀವಿ ಅವರಿಗೆ ರಾಮ್‌ಚರಣ್ ಅಲ್ಲದೇ ಶ್ರೀಜಾ ಮತ್ತು ಸುಶ್ಮಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀಜಾ ಅವರಿಗೆ ನವಿಕ್ಷಾ ಮತ್ತು ನಿವೃತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರೆ, ಸುಶ್ಮಿತಾ ಅವರಿಗೆ ಸಮರ ಮತ್ತು ಸಂಹಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ರಾಮ್‌ಚರಣ್ ಮತ್ತು ಉಪಾಸಾನ ದಂಪತಿಗೆ 2023ರಲ್ಲಿ ಹೆಣ್ಣು ಮಗು ಹುಟ್ಟಿದ್ದು, ಕ್ಲಿನ್ ಖಾರಾ ಎಂದು ನಾಮಕರಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.