ADVERTISEMENT

‘ವಿಜ್ಞಾನಿ ಮಾಧವನ್‌’ಗೆ ಡಬಲ್‌ ಖುಷಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 20:15 IST
Last Updated 28 ಜನವರಿ 2019, 20:15 IST
‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ನಲ್ಲಿ ಆರ್. ಮಾಧವನ್‌ ನೋಟ
‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ನಲ್ಲಿ ಆರ್. ಮಾಧವನ್‌ ನೋಟ   

ಇಸ್ರೊ ನಿವೃತ್ತ ವಿಜ್ಞಾನಿ ಎಸ್. ನಂಬಿ ನಾರಾಯಣನ್‌ವೃತ್ತಿ ಬದುಕು ಮತ್ತು ಎದುರಿಸಿದ ಸವಾಲುಗಳನ್ನು ವಸ್ತುವಾಗುಳ್ಳ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ.

ಕಳೆದ ವರ್ಷ ಟೀಸರ್‌ ಬಿಡುಗಡೆಯಾದಾಗ ಚಿತ್ರದ ವಸ್ತುವಿನ ನೆಪದಲ್ಲಿ, ವಿಜ್ಞಾನಿ ನಂಬಿ ಅವರ ಸಾಧನೆ ಮತ್ತು ಎದುರಿಸಿದ ಸವಾಲುಗಳನ್ನು ಮೆಲುಕು ಹಾಕುವಂತಾಗಿತ್ತು. ನಂಬಿ ಅವರ ಪಾತ್ರ ಮಾಡುತ್ತಿರುವ ನಟ ಆರ್.ಮಾಧವನ್‌ ಇತ್ತೀಚೆಗೆಚಿತ್ರೀಕರಣ ಸೆಟ್‌ನಿಂದ ಹಾಕಿದ ಫೋಟೊವಂತೂ ದೊಡ್ಡ ಸಂಚಲನವನ್ನೇ ಮಾಡಿದೆ. ಇದಕ್ಕೆ ಕಾರಣ ನಂಬಿ ಅವರ ಗೆಟಪ್‌ನಲ್ಲಿ ಮಾಧವನ್‌ ಕಾಣಿಸಿಕೊಂಡಿರುವ ರೀತಿ.

ಬರೋಬ್ಬರಿ 14 ಗಂಟೆ ಮೇಕಪ್‌ಮ್ಯಾನ್‌ ಎದುರು ಕುಳಿತು ಸಂಪೂರ್ಣ ರೂಪಾಂತರ ಮಾಡಿಕೊಂಡು ‘ನಂಬಿ ನಾರಾಯಣನ್‌’ ಪ್ರತಿರೂಪವಾದ ಫೋಟೊ ಅದು. 27ರ ಹರೆಯದಿಂದ 70ರವರೆಗಿನ ವಿಜ್ಞಾನಿಯ ಜೀವನಕತೆಯನ್ನು ಈ ಚಿತ್ರ ಒಳಗೊಂಡಿದೆ. ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ ತಮಿಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ತೆರೆಕಾಣಲಿದೆ.

ADVERTISEMENT

ಈ ಚಿತ್ರದಲ್ಲಿ ಮಾಧವನ್‌ ನಿರ್ದೇಶಕರ ಟೋಪಿಯನ್ನೂ ಧರಿಸಲಿದ್ದಾರೆ. ಇದಕ್ಕೆ ಕಾರಣ ಪ್ರತಿಭಾವಂತ ನಿರ್ದೇಶಕ ಅನಂತ ಮಹದೇವನ್‌ ಟೋಪಿಯನ್ನು ಕೆಳಗಿಟ್ಟಿರುವುದು. ‘ರಾಕೆಟ್ರಿ..’ ಸಿನಿಮಾ ನನ್ನ ಮನಸ್ಸಿಗೆ ಹತ್ತಿರವಾದುದು. ಹಾಗಾಗಿ, ಮಹತ್ವದ ಹಂತ ತಲುಪಿರುವ ಈ ಹಂತದಲ್ಲಿ ಚಿತ್ರೀಕರಣವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಯಾಕೆಂದರೆ, ನಂಬಿ ನಾರಾಯಣನ್ ಅವರ ವಾಸ್ತವ ಕತೆಯನ್ನು ಜಗತ್ತಿಗೆ ಹೇಳುವುದು ಇನ್ನಷ್ಟು ವಿಳಂಬವಾಗಬಾರದು. ಈ ಕಾರಣಕ್ಕಾಗಿ ನಾನು ನಿರ್ದೇಶಕರ ಸ್ಥಾನವನ್ನು ತುಂಬುತ್ತಿದ್ದೇನೆ’ ಎಂದು ಮಾಧವನ್‌ ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ಅನಂತ್‌ ನನಗೆ ಕಥೆ ಹೇಳಿದಾಗಲೇ ಚಿತ್ರಕತೆಯನ್ನು ಆವಾಹಿಸಿಕೊಂಡಿದ್ದರಂತೆ ಮಾಧವನ್‌.‘ಅನ್ಯಾಯಕ್ಕೊಳಗಾದ ವ್ಯಕ್ತಿಯ ಕತೆ ಎಂಬಂತೆ ನಾನು ಇದನ್ನು ಪರಿಭಾವಿಸಿದ ಕಾರಣ ತಕ್ಷಣ ಸ್ಪಂದಿಸಿದ್ದೆ’ ಎಂದು ಮಾಧವನ್‌ ಈ ಹಿಂದೆ ಹೇಳಿಕೊಂಡಿದ್ದರು.

ಇಸ್ರೊ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್‌ ಅವರು ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ ಎಂಬ ಸುಳ್ಳು ಆರೋಪವನ್ನು ಎದುರಿಸಿದ್ದರು. ಪ್ರಕರಣದ ಸಂಬಂಧ ಅವರು ಜೈಲುವಾಸವನ್ನೂ ಅನುಭವಿಸಿದ ಬಳಿಕ ಆರೋಪಮುಕ್ತರಾಗಿದ್ದರು.ಅನಂತ್‌ ಈ ಕತೆಯನ್ನು ವಿವರಿಸಿದ ಬೆನ್ನಲ್ಲೇ ಮಾಧವನ್‌, ಚಿತ್ರ ಕತೆಯನ್ನು ಬರೆಯಲಾರಂಭಿಸಿದ್ದರು.

ವಿಜ್ಞಾನಿಯ ಗೆಟಪ್‌ಗಾಗಿ ಮಾಧವನ್‌ ಹಲವು ರೂಪಾಂತರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿವೃತ್ತಿ ನಂತರದ ನಂಬಿ ನಾರಾಯಣನ್‌ ಗೆಟಪ್‌ಗಾಗಿ ಅವರು ಇಷ್ಟುದ್ದದ ಗಡ್ಡ ಮತ್ತು ಮೀಸೆ ಬೆಳೆಸಿಕೊಂಡಿದ್ದಾರೆ.

ಪದ್ಮಭೂಷಣ ತಂದ ಖುಷಿ

ಕಾಕತಾಳೀಯ ಎಂಬಂತೆ ಈ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ನಂಬಿ ನಾರಾಯಣನ್‌ ಪಾತ್ರರಾಗಿದ್ದಾರೆ. ಇದು ಮಾಧವನ್‌ ಮತ್ತು ಇಡೀ ಚಿತ್ರತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ. ಮಾಧವನ್‌ ಸೇರಿದಂತೆ ಎಲ್ಲರೂ ನಂಬಿ ಅವರಿಗೆ ಆತ್ಮೀಯ ಸಂದೇಶಗಳನ್ನು ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.