ADVERTISEMENT

ಅವಕಾಶ ಸಿಗದಿದ್ದರೇನಂತೆ, ಹೋರಾಟ ಬಿಡಲೊಲ್ಲೆ: ಶರ್ಮಾನ್‌ ಜೋಶಿ

ಎರಡು ದಶಕ ಪೂರೈಸಿದರೂ ಶರ್ಮಾನ್‌ ಜೋಶಿಗೆ ಸಿಗದ ಮನ್ನಣೆ

ರಾಹುಲ ಬೆಳಗಲಿ
Published 17 ಜೂನ್ 2020, 11:40 IST
Last Updated 17 ಜೂನ್ 2020, 11:40 IST
ಶರ್ಮಾನ್ ಜೋಶಿ
ಶರ್ಮಾನ್ ಜೋಶಿ   

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬಾಲಿವುಡ್‌ನಲ್ಲಿ ಸಿಗದ ಅವಕಾಶ, ಖಿನ್ನತೆ, ಪ್ರೇಮ ವೈಫಲ್ಯ, ವ್ಯಕ್ತಪಡಿಸಲಾಗದ ನೋವು ಹೀಗೆ ಒಂದೊದೇ ಕಾರಣಗಳು ಈಗ ಬೆಳಕಿಗೆ ಬರುತ್ತಿವೆ. ಆದರೆ, ನಿಖರ ಕಾರಣ ಸುಶಾಂತ್‌ಗೆ ಮಾತ್ರ ಗೊತ್ತು ಮತ್ತು ಅವರೊಂದಿಗೆ ಅದು ಮಣ್ಣೂ ಆಯಿತು.

ಆದರೆ, ಅವರಂತೆಯೇ ಬಾಲಿವುಡ್‌ನಲ್ಲಿ ಅವಕಾಶ ವಂಚಿತರಾದವರು ಮತ್ತು ಚಿತ್ರೋದ್ಯಮದ ಪ್ರಭಾವಿಗಳಿಂದ ದಮನಕ್ಕೆ ಒಳಗಾದವರ ಸಂಖ್ಯೆ ಕಡಿಮೆಯೇನಿಲ್ಲ. ಎಷ್ಟೇ ಏಳುಬೀಳುಗಳು ಎದುರಾದರೂ ಮತ್ತು ಪೆಟ್ಟು ಬಿದ್ದರೂ ತಮ್ಮ ಹೋರಾಟದಿಂದ ಅವರು ನುಣುಚಿಕೊಂಡಿಲ್ಲ, ಅಂಥವರಲ್ಲಿ ಶರ್ಮನ್ ಜೋಶಿ ಕೂಡ ಒಬ್ಬರು.

ರಂಗಭೂಮಿಯ ಹಿನ್ನೆಲೆಯುಳ್ಳ ಗುಜರಾತಿ ಕುಟುಂಬದಲ್ಲಿ ಜನಿಸಿದ ಶರ್ಮಾನ್ ಜೋಶಿ ಬಾಲಿವುಡ್‌ಗೆ ಲಗ್ಗೆಯಿಟ್ಟು 20 ವರ್ಷಗಳ (1999–ಗಾಡ್‌ ಮದರ್‌) ಮೇಲಾಗಿವೆ. ಆದರೆ, ಈವರೆಗೆ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಅವಕಾಶ ದೊರೆತಿಲ್ಲ. ಸಿಕ್ಕರೂ ಅದನ್ನು ಸಮರ್ಪಕವಾಗಿ ಬಾಚಿಕೊಳ್ಳಲು ಸಾಧ್ಯವಾಗಿಲ್ಲ.

ADVERTISEMENT

ಅನುಭವಿ ನಟ ಅಲ್ಲದೇ ರಂಗಭೂಮಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದರೂ ಶರ್ಮಾನ್‌ಗೆ ಪೂರ್ಣಪ್ರಮಾಣದ ನಾಯಕನ ಪಾತ್ರ ಸಿಕ್ಕಿದ್ದು ತುಂಬಾನೇ ಕಡಿಮೆ. ಪೋಷಕ ಪಾತ್ರದಲ್ಲಿ ಇಲ್ಲವೇ ನಾಯಕನ ಗೆಳೆಯ ಅಥವಾ ಸಹೋದರ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡ ಅವರು ಅದರಲ್ಲೇ ಸಂತೃಪ್ತಿ ಹೊಂದಿದ್ದಾರೆ.

ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ ನಾಟಕಗಳಲ್ಲಿ ಅಭಿನಯಿಸಿದ ಶರ್ಮಾನ್ ಬಾಲಿವುಡ್‌ನ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಗಳಿಸಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ನಿರ್ದೇಶಕರು, ನಿರ್ಮಾಪಕರು ಅಲ್ಲದೇ ಚಿತ್ರೋದ್ಯಮದ ‘ಗಾಡ್‌ ಫಾದರ್‌’ಗಳ ಸಂಪರ್ಕದಲ್ಲೂ ಇದ್ದರೂ ಅವರಿಗೆ ಚಿತ್ರಗಳಲ್ಲಿ ಅತಿಥಿಯಾಗಿ ಕೆಲವೇ ನಿಮಿಷಗಳಲ್ಲಿ ಬಂದು ಹೋಗುವ ಅಥವಾ ಅಪಹಾಸ್ಯಕ್ಕೆ ಒಳಗಾಗುವ ಪಾತ್ರಗಳು ಸಿಕ್ಕವೇ ಹೊರತು ಗಂಭೀರವಾದವು ಸಿಗಲಿಲ್ಲ.

ದೊಡ್ಡ ಮಟ್ಟದ ಅವಕಾಶ ಸಿಗದಿದ್ದರೇನಂತೆ, ಹುಡುಕಿಕೊಂಡು ಬಂದ ಸಣ್ಣಪುಟ್ಟ ಪಾತ್ರಗಳನ್ನಾದರೂ ಯಾಕೆ ಬಿಡಬೇಕೆಂದು ಅವರು ದೊರೆತ ಸಣ್ಣಪುಟ್ಟ ರೋಲ್‌ಗಳನ್ನೇ ನಿಭಾಯಿಸಿದರು. ಬೃಹತ್ ತಾರಾಗಣ ಮತ್ತು ಪ್ರಭಾವಿ ನಾಯಕರು ಇದ್ದರೂ ಚಿತ್ರಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದರು. ‘ರಂಗ್ ದೇ ಬಸಂತಿ’, ‘ಗೋಲ್‌ಮಾಲ್‌’, ‘ಲೈಫ್‌ ಇನ್ ಎ ಮೆಟ್ರೊ’, ‘ತ್ರಿ ಇಡಿಯಟ್ಸ್’, ‘ಮಿಶನ್ ಮಂಗಲ್’ ಮುಂತಾದ ಚಿತ್ರಗಳಲ್ಲಿನ ಅವರ ಪಾತ್ರ ಮರೆಯಲು ಆಗುವುದಿಲ್ಲ.

‘ಕಾಶಿ ಇನ್ ಸರ್ಚ್ ಆಫ್ ಗಂಗಾ’, ‘ತ್ರಿ ಸ್ಟೋರೀಸ್’ ಚಿತ್ರದಲ್ಲಿ ಅವರಿಗೆ ಶರ್ಮಾನ್‌ಗೆ ಪ್ರಧಾನ ಪಾತ್ರ ಸಿಕ್ಕಿತಾದರೂ ಅದರ ಬಗ್ಗೆ ಸಣ್ಣಪ್ರಮಾಣದ ಚರ್ಚೆಯೂ ಆಗಲಿಲ್ಲ. ಆದರೆ, ಹಾಗಂತ ಅವರು ನಿರಾಸೆಯಾಗಲಿಲ್ಲ. ‘ಬಾಲಿವುಡ್‌ನಲ್ಲಿ ಉಳಿಯುವೆ, ಹೋರಾಟ ಮಾಡುವೆ’ ಎಂಬ ಮನೋಬಾವ ಅವರದ್ದು. ಅವರ ಅಭಿನಯದ ‘ಫೌಜಿ ಕಾಲಿಂಗ್’, ‘ಬಬ್ಲೂ ಬೇಚಾರಾ’, ‘ಮುಂಬೈ ಸಾಗಾ’ ಇನ್ನೂ ತೆರೆ ಕಾಣಬೇಕಿದೆ.

ಅವಕಾಶಗಳ ಕೊರತೆ ನಡುವೆ ಉಮೇದು ಬಿಟ್ಟು ಕೊಡದ ಶರ್ಮಾನ್‌ ಬಾಲಿವುಡ್‌ ಮತ್ತು ತಮ್ಮ ಪಾತ್ರಗಳ ಬಗ್ಗೆ ಹೇಳುವುದಿಷ್ಟು: ‘ಬಾಲಿವುಡ್‌ನಲ್ಲಿ ಏನನ್ನೂ ಮತ್ತು ಯಾರನ್ನೂ ನೆಂಚಿಕೊಳ್ಳಲು ಆಗದು. ಯಾವಾಗ ಏನು ಘಟಿಸಬೇಕು, ಅವು ಘಟಿಸುತ್ತವೆ. ನನಗೆ ಯಾವುದೆಲ್ಲ ಕೆಲಸ ಬರುತ್ತವೋ, ಅದನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸುವೆ. ನನಗೆ ಅವು ಸಿಗದಿದ್ದರೆ, ಅವುಗಳ ಬಗ್ಗೆ ಯೋಚನೆಯೂ ಕೂಡ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.