ADVERTISEMENT

ಶಶಿ ಕಪೂರ್ ದೊಡ್ಡತನ...

ಮಂಜುಶ್ರೀ ಎಂ.ಕಡಕೋಳ
Published 18 ಮಾರ್ಚ್ 2019, 6:02 IST
Last Updated 18 ಮಾರ್ಚ್ 2019, 6:02 IST
   

‘ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಫಿ ಕಲಿತ ಮೇಲೆ ಸಿನಿಮಾದಲ್ಲಿ ಕೆಲಸ ಮಾಡಬೇಕೆಂದು ಮುಂಬೈಗೆ (1965) ಹೋದೆ. ಅಲ್ಲಿ ಮೈಸೂರಿನವರಾದ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಈ ನಡುವೆ ಚಂದ್ರಕಾಂತ ಷಾ ಅವರ ‘ವೀರ ಅಭಿಮನ್ಯು’ ಸಿನಿಮಾಕ್ಕೆ ಸಹಾಯಕ ಛಾಯಾಗ್ರಾಹಕನಾದೆ.

ಆ ಸಿನಿಮಾದಲ್ಲಿ ಹಿಂದಿಯ ಖ್ಯಾತನಟ ಶಶಿಕಪೂರ್ ನಾಯಕ. ತಮಿಳುನಟಿ ಸಾವಿತ್ರಿ ನಾಯಕಿ. ನಟ ದಾರಾಸಿಂಗ್ ಪ್ರಮುಖ ಪಾತ್ರದಲ್ಲಿದ್ದರು. ಸಿನಿಮಾ ಶೂಟಿಂಗ್‌ಗಾಗಿ ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದೆವು. ಒಂದು ದಿನ ಕೆಲಸ ಮುಗಿಯುವುದು ರಾತ್ರಿ 1 ಗಂಟೆಯಾಯ್ತು. ಎಲ್ಲರೂ ಹೊರಟುನಿಂತರು. ನಾನು ದಾದರ್‌ಗೆ ಹೋಗಬೇಕಿತ್ತು. ನನ್ನ ಬಳಿ ವಾಹನವಿರಲಿಲ್ಲ. ಆಗ ಶಶಿಕಪೂರ್ ಅವರ ಮೇಕಪ್ ಮ್ಯಾನ್ ಶ್ಯಾಮ್, ‘ನೀನು ಹೇಗೆ ಹೋಗ್ತೀಯಾ’ ಅಂತ ಕೇಳಿದ್ರು. ನಾನು ರಾತ್ರಿ ಇಲ್ಲೇ ಮಲಗಿದ್ದು ಬೆಳಿಗ್ಗೆ ಟ್ರೈನ್ ಹಿಡ್ಕೊಂಡು ದಾದರ್‌ಗೆ ಹೋಗ್ತೀನಿ ಅಂದೆ. ಅದಕ್ಕವನು ತಡಿ ಶಶಿಕಪೂರ್ ಕೂಡಾ ದಾದರ್ ಮೇಲೆಯೇ ಹೋಗೋದು ಅವರು ಕಾರಿನಲ್ಲಿ ಡ್ರಾಪ್ ಕೊಡುತ್ತಾರಾ ಕೇಳ್ತೀನಿ ಅಂದ. ಇದಕ್ಕೆ ಶಶಿ ಸಾಬ್ ಒಪ್ಪಿದರು.

ಆಗ ನಾನಿನ್ನೂ ಕೆಲಸಕ್ಕೆ ಸೇರಿ ಎರಡ್ಮೂರು ತಿಂಗಳಷ್ಟೇ. ಶಶಿಕಪೂರ್ ಆ ಕಾಲಕ್ಕೇ ಖ್ಯಾತನಟ. ನನ್ನಂಥ ಹೊಸಬನನ್ನು ಅವರ ಕಾರಿನಲ್ಲಿ ಅದೂ ಅವರ ಪಕ್ಕದಲ್ಲೇ ಕೂರಿಸಿಕೊಂಡರು! ಅವರಿಗೆ ಸ್ಟಾರ್ ನಟ ಎನ್ನುವ ಅಹಂ ಒಂದಿಷ್ಟೂ ಇರಲಿಲ್ಲ. ದಾದರ್ ಹತ್ತಿರ ಇಳಿಸಿಹೋದರು.

ADVERTISEMENT

***

ಅದು ‘ಪತಂಗ್’ ಸಿನಿಮಾ ಶೂಟಿಂಗ್. ಅಲ್ಲಿ ಕ್ಯಾಮೆರಾಮನ್ ಆಗಿದ್ದ ರಾಜೇಂದ್ರ ಮಲೋನಿ ನನ್ನನ್ನು ಸಹಾಯಕ್ಕೆ ಸೇರಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಶಶಿಕಪೂರ್ ನಾಯಕ. ಒಮ್ಮೆ ಸೀನ್‌ವೊಂದಕ್ಕೆ ಹಗಲಿನಲ್ಲೇ ಸೆಟ್ ಲೈಟ್ ಹಾಕಿಬಿಟ್ಟಿದ್ದರು. ಅದು ಹಗಲು–ರಾತ್ರಿಯ ದೃಶ್ಯ ಎಂದು ಸಹಾಯಕ ನಿರ್ದೇಶಕ ನಮಗೆ ಹೇಳಿರಲೇ ಇಲ್ಲ. ಶೂಟಿಂಗ್ ಮುಗಿದ್ಮೇಲೆ ಅನುಮಾನ ಬಂದು ಸೆಟ್‌ನಲ್ಲಿದ್ದವರನ್ನು ಕೇಳಿದಾಗ ಅವರು ನನ್ನ ಮೇಲೆ ರೇಗಿಬಿಟ್ಟರು. ಆಗ ಶಶಿಕಪೂರ್ ಅವರು ಈ ರೀತಿ ಆಗಿದ್ದು ಆಕಸ್ಮಿಕ. ಅದಕ್ಕೆ ಯಾಕೆ ಅವರ ಮೇಲೆ ರೇಗುತ್ತೀರಿ. ಮತ್ತೊಮ್ಮೆ ಶೂಟಿಂಗ್ ಮಾಡಿದರಾಯಿತು ಬಿಡಿ ಅಂದ್ರು. ಅದು ಅವರ ದೊಡ್ಡತನ.

***

ಕನ್ನಡದಲ್ಲಿ ‘ಊರ್ವಶಿ’ ಸಿನಿಮಾ ಪ್ರೊಡ್ಯೂಸ್ ಮಾಡಿದ್ದೆ. ಆಗ ನನ್ನ ಸಿನಿಮಾ ಚಿತ್ರೀಕರಣವಾಗುತ್ತಿದ್ದ ಸ್ಟುಡಿಯೊದಲ್ಲೇ ಶಶಿಕಪೂರ್ ಅವರ ಸಿನಿಮಾದ ಶೂಟಿಂಗ್ ಕೂಡಾ ನಡೆದಿತ್ತು. ಅಲ್ಲಿ ಮೇಕಪ್ ಮ್ಯಾನ್ ಶ್ಯಾಮ್ ಸಿಕ್ಕ. ಶಶಿಕಪೂರ್ ಅವರನ್ನು ಮಾತನಾಡಿಸಿಕೊಂಡು ಬರೋಣ ಅಂತ ಹೋದೆ. ಆಗವರು, ಇಷ್ಟ ಚಿಕ್ಕವಯಸ್ಸಿನಲ್ಲೇ ನಿರ್ಮಾಣಕ್ಕೆ ಇಳಿದಿದ್ದೀಯಾ ಅಂತ ಗದರಿದರು. ಅಲ್ಲಿಗೆ ಬಂದ ತಮ್ಮ ಸ್ನೇಹಿತರಿಗೆಲ್ಲಾ ನನ್ನನ್ನು ಪರಿಚಯಿಸಿದರು. ‘ಸಿನಿಮಾ ಲಾಸ್ ಆದರೆ, ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನಿನಗೆ ನೀಡಲಿ’ ಎಂದು ಹಾರೈಸಿ ಕಳಿಸಿದ್ದರು.

ಶಶಿಕಪೂರ್ ಒಬ್ಬ ಜಂಟಲ್ ಮ್ಯಾನ್. ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ಅವರಿಗೆ ಸಂಗೀತ, ಸಿನಿಮಾದ ಬಗ್ಗೆ ಒಳ್ಳೆಯ ಅಭಿರುಚಿಯಿತ್ತು. ಅವರ ಜತೆಗೆ ಎರಡು ಸಿನಿಮಾಗಳಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.

ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಲ್ಲಿ ಬಿ.ಎಸ್. ಬಸವರಾಜ್ ಅವರದ್ದು ದೊಡ್ಡಹೆಸರು. 80ರ ದಶಕದಲ್ಲಿ ಸ್ಟಾರ್ ಕ್ಯಾಮೆರಾಮನ್ ಎಂದೇ ಖ್ಯಾತರಾಗಿದ್ದ ಡಿ.ವಿ.ರಾಜಾರಾಂ ಅವರ ಶಿಷ್ಯರಾದ ಬಸವರಾಜ್, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಮೂರು ಸಿನಿಮಾಗಳಿಗೆ (ಮಾನಸ ಸರೋವರ, ಧರಣಿ ಮಂಡಳ ಮಧ್ಯದೊಳಗೆ, ಅಮೃತಘಳಿಗೆ) ಕ್ಯಾಮೆರಾಮನ್ ಆಗಿದ್ದವರು. ನಿರ್ದೇಶಕ ಸಿದ್ದಲಿಂಗಯ್ಯ ಅವರ ಬಹುತೇಕ ಸಿನಿಮಾಗಳಿಗೆ ಕ್ಯಾಮೆರಾಮನ್ ಆಗಿದ್ದ ಬಸವರಾಜ್ ಒರಿಯಾ, ಕನ್ನಡ, ತಮಿಳು, ತೆಲುಗಿನಲ್ಲಿ 120ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರಂಥ ದಿಗ್ಗಜರೊಂದಿಗೆ ಕೆಲಸ ಮಾಡಿದವರು ಬಸವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.