ADVERTISEMENT

ಶೇರ್‌ನಿ ಸಿನಿಮಾ ವಿಮರ್ಶೆ: ಎರಡು ಹೆಣ್ಣುಹುಲಿಗಳ ನೀರಸ ಕಥನ

ವಿಶಾಖ ಎನ್.
Published 18 ಜೂನ್ 2021, 12:23 IST
Last Updated 18 ಜೂನ್ 2021, 12:23 IST
ಶೇರ್‌ನಿ ಚಿತ್ರದಲ್ಲಿ ವಿದ್ಯಾ ಬಾಲನ್
ಶೇರ್‌ನಿ ಚಿತ್ರದಲ್ಲಿ ವಿದ್ಯಾ ಬಾಲನ್   

ಚಿತ್ರ: ಶೇರ್‌ನಿ

(ಹಿಂದಿ–ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡಿದೆ)

ನಿರ್ಮಾಣ: ಟಿ–ಸೀರೀಸ್

ADVERTISEMENT

ನಿರ್ದೇಶನ: ಅಮಿತ್ ಮಸುರ್ಕರ್‌

ತಾರಾಗಣ: ವಿದ್ಯಾ ಬಾಲನ್, ಬ್ರಿಜೇಂದ್ರ ಕಾಲಾ, ಶರತ್ ಸಕ್ಸೇನಾ, ವಿಜಯ್ ರಾಝ್‌, ನೀರಜ್ ಕಬಿ, ಮುಕುಲ್ ಛಡ್ಡಾ, ಇಳಾ ಅರುಣ್.

ಸರ್ಕಾರಿ ವ್ಯವಸ್ಥೆಯ ಹುಳುಕಿನ ಮೇಲೆ ಬೆಳಕು ಚೆಲ್ಲಿ ‘ನ್ಯೂಟನ್’ ಚಿತ್ರದ ಮೂಲಕ ‘ಡಾರ್ಕ್ ಕಾಮಿಡಿ’ ಹೊಮ್ಮಿಸಿದ್ದ ನಿರ್ದೇಶಕ ಅಮಿತ್ ಮಸುರ್ಕರ್ ಹದಕ್ಕೆ ಬೇಕಾದಷ್ಟು ಪಲ್ಯವೇ ಇಲ್ಲದ ‘ಪಪ್ಸ್’ ಅನ್ನು ‘ಶೇರ್‌ನಿ’ ರೂಪದಲ್ಲಿ ಕೊಟ್ಟಿದ್ದಾರೆ.

ಚಿತ್ರದಲ್ಲಿ ಎರಡು ಹೆಣ್ಣುಹುಲಿಗಳಿವೆ. ಒಂದು ಕಾಡಿನದ್ದು, ಇನ್ನೊಂದು ಅರಣ್ಯ ಇಲಾಖೆಯ ಅಧಿಕಾರಿ ಪಾತ್ರದ ರೂಹಿನದ್ದು. ವೃತ್ತಿಧರ್ಮದ ಕುದಿಬಿಂದುವಿನ ದೃಷ್ಟಿಯಲ್ಲಿ ಅವಳು ಮಾನಸಿಕವಾಗಿ ಹುಲಿ. ಅರಣ್ಯದಲ್ಲಿ ಎರಡು ಪುಟಾಣಿ ಮರಿಗಳನ್ನು ಪೋಷಿಸುತ್ತಾ ಉದರ ನಿಮಿತ್ಥಂ ಅಡ್ಡಾಡುತ್ತಾ ಹಳ್ಳಿಜನರ ಕೆಂಗಣ್ಣಿಗೆ ಗುರಿಯಾಗುವ ಅಸಲಿ ಹೆಣ್ಣುಹುಲಿ ಪುರುಷ ಪ್ರಧಾನ ಸರ್ಕಾರಿ–ರಾಜಕೀಯ ವ್ಯವಸ್ಥೆಗೆ ಬಲಿಯಾಗುತ್ತದೆ. ನಾಯಕಿಯ ವೃತ್ತಿಬದುಕಿನಲ್ಲಿ ಆಗುವುದೂ ಅದೇ. ಕಾಡಿನ ನಡುವೆ ಕೆಲಸ ಮಾಡುತ್ತಾ ಜಿಗಿತ ಕಾಣಬೇಕೆಂದು ಬಯಸುವ ಅವಳು ಕೊನೆಗೆ ಮೃತ ಪ್ರಾಣಿಗಳ ಮ್ಯೂಸಿಯಂನಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪರಿಸರ ಸಂರಕ್ಷಣೆಯ ಸವಾಲು, ಅಭಿವೃದ್ಧಿಯ ಆಮಿಷ–ಇವೆರಡರ ನಡುವೆ ಇರುವ ಸರ್ಕಾರಿ ವ್ಯವಸ್ಥೆ ರಾಜಕೀಯದ ಸಂಕೀರ್ಣ ವಸ್ತುವನ್ನು ನಿರ್ದೇಶಕರು ಎತ್ತಿಕೊಂಡಿದ್ದಾರೆ.

ವಸ್ತುವಿಷಯದ ದೃಷ್ಟಿಯಿಂದ ಅಪರೂಪದ್ದೂ, ಮುಖ್ಯವೂ ಆದ ಈ ಚಿತ್ರದಲ್ಲಿ ಸಿನಿಮೀಯ ರಸಾಸ್ವಾದವಿಲ್ಲ. ಸಣ್ಣ ಪುಟ್ಟ ವಿವರಗಳಲ್ಲೇ ವ್ಯಂಗ್ಯವನ್ನೂ ಕಟ್ಟಿಕೊಡಲು ಹೊರಡುವ ನಿರ್ದೇಶಕರು, ಅಲ್ಲಲ್ಲಿ ಸಾಕ್ಷ್ಯಚಿತ್ರದಂತಹ ದೃಶ್ಯಗಳನ್ನು ಉಳಿಸಿಬಿಟ್ಟಿದ್ದಾರೆ. ಸಹಜ ಧ್ವನಿಗಳನ್ನೇ ಹೆಚ್ಚಾಗಿ ಬಳಸಿಕೊಂಡು ‘ರಿಯಲಿಸ್ಟಿಕ್ ಸಿನಿಮಾ’ ಕೊಡಬೇಕೆಂಬ ಅವರ ಉಮೇದಿಗೆ ಕೂಡ ಅಂಥ ದೃಶ್ಯಗಳು ಇಂಧನವಾಗಿ ಒದಗಿಬಂದಿಲ್ಲ.

ಹುಲಿ ದಾಳಿಯಿಂದ ಗ್ರಾಮಸ್ಥನು ಮೃತಪಟ್ಟಾಗ ಅಲ್ಲಿನ ವಿರೋಧ ಪಕ್ಷದ ಮುಖಂಡನೊಬ್ಬ ಒಡನಾಡಿಗಳೊಂದಿಗೆ ಅರಣ್ಯ ಇಲಾಖೆ ಕಚೇರಿಗೆ ನುಗ್ಗುತ್ತಾನೆ. ಅವರಿಂದ ತಪ್ಪಿಸಿಕೊಂಡು ಕಚೇರಿಯ ಕೋಣೆಗಳಲ್ಲೇ ಅರಣ್ಯ ಇಲಾಖೆ ಮುಖ್ಯಸ್ಥ ಜೂಟಾಟ ಆಡುವ ದೃಶ್ಯವೊಂದು ‘ಕಾಮಿಕ್ ರಿಲೀಫ್’ ಅಷ್ಟೆ ಅಲ್ಲದೆ ನಮ್ಮ ವ್ಯವಸ್ಥೆಗೆ ಹಿಡಿಯುವ ವ್ಯಂಗ್ಯದ ಕನ್ನಡಿಯೂ ಆಗಿದೆ. ಐಟಂ ಹಾಡುಗಳನ್ನು ಹಾಡುತ್ತಾ ಸಂದಿಗ್ಧ ಪರಿಸ್ಥಿತಿಯಲ್ಲೂ ತನ್ನದೇ ಲೋಕದಲ್ಲಿ ಇರುವ ಆ ಮುಖ್ಯಸ್ಥ ವ್ಯವಸ್ಥೆಯ ಉಡಾಫೆಯ ಪ್ರತಿನಿಧಿ.

ರಾಕೇಶ್ ಹರಿದಾಸ್ ಸಿನಿಮಾಟೊಗ್ರಫಿ ಚಿತ್ರದ ಹೈಲೈಟ್. ಸಹಜತೆ ಹಾಗೂ ಭಾವಕ್ಕೆ ಒತ್ತುಕೊಟ್ಟ ಅವರ ಬೆಳಕಿನ ಸಂಯೋಜನೆ ಅರ್ಥವತ್ತಾಗಿದೆ. ವಿದ್ಯಾ ಬಾಲನ್ ಪಾತ್ರವನ್ನು ಜೀವಿಸಿದ್ದಾರೆ. ಅವರಿಗಿಂತ ಅಭಿನಯದಲ್ಲಿ ಹೆಚ್ಚು ಅಂಕ ಗಿಟ್ಟಿಸುವುದು ಬಿಜೇಂದ್ರ ಕಾಲಾ. ಅರಣ್ಯ ಇಲಾಖೆಯ ಮುಖ್ಯಸ್ಥನ ‘ಕ್ಯಾರಿಕೇಚರ್’ ಪಾತ್ರಕ್ಕೆ ಅವರು ಸವರಿರುವ ಅಭಿನಯದ ಗಂಧವನ್ನು ಆಘ್ರಾಣಿಸಿಯೇ ಅನುಭವಿಸಬೇಕು.

ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಅಸಹಾಯಕತೆಯೇ ಪೂರ್ಣವಿರಾಮವಾಗಬೇಕಿಲ್ಲ. ನಿಜ ಬದುಕಿನಲ್ಲಿ ಅದು ಹಾಗೆಯೇ ಇರಬಹುದು. ಆದರೆ, ಸಿನಿಮಾದಲ್ಲಾದರೂ ಆಶಾವಾದದ ದೃಷ್ಟಿಕೋನ ಮೂಡಿಸಲು ಸಾಧ್ಯವಿದೆ. ಈ ಚಿತ್ರದಲ್ಲಿ ನಿರ್ದೇಶಕರು ಯಾಕೋ, ಅದಕ್ಕೂ ಬೆನ್ನುಮಾಡಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.