ADVERTISEMENT

ಗಾಯಕ ಸೋನು ನಿಗಮ್ ಮೇಲೆ ಹಲ್ಲೆ: FIR ದಾಖಲು– ಶಿವಸೇನಾ ಶಾಸಕನ ಮಗನ ಗೂಂಡಾಗಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2023, 9:52 IST
Last Updated 21 ಫೆಬ್ರುವರಿ 2023, 9:52 IST
ಸೋನು ನಿಗಮ್
ಸೋನು ನಿಗಮ್   

ಮುಂಬೈ: ಸೋಮವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯೊಂದರಲ್ಲೇ ಜನಪ್ರಿಯ ಗಾಯಕ ಸೋನು ನಿಗಮ್ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

ಮುಂಬೈನ ಚಂಬುರ್ ಎಂಬಲ್ಲಿ ಸ್ಥಳೀಯ ಶಿವಸೇನಾ ಶಾಸಕ ಪ್ರಕಾಶ್ ಪಾಠೇರ್‌ಪೇಕರ್ ಅವರು ಮನರಂಜನಾ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಾಡಲು ಸೋನು ನಿಗಮ್ ಹಾಗೂ ಅವರ ತಂಡ ಬಂದಿತ್ತು. ಕಾರ್ಯಕ್ರಮ ಮುಗಿಸಿ ಸೋನು ನಿಗಮ್ ವೇದಿಕೆ ಇಳಿಯುತ್ತಿದ್ದರು.

ಈ ವೇಳೆ ಶಾಸಕ ಪ್ರಕಾಶ್ ಅವರ ಮಗ ಸ್ವಪ್ನಿಲ್ ಪಾಠೇರ್‌ಪೇಕರ್ ಅವರು ಸೋನು ನಿಗಮ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ, ಅವಸರದಲ್ಲಿದ್ದ ಸೋನು ನಿಗಮ್ ಮೆಟ್ಟಿಲಿಳಿದು ಹೊರಟಿದ್ದರು. ಇದಕ್ಕೆ ಕುಪಿತಗೊಂಡ ಸ್ವಪ್ನಿಲ್ ಅವರು ಸಿಟ್ಟಿನಿಂದ ಸೋನು ನಿಗಮ್ ಅವರನ್ನು ತಳ್ಳಿ, ಅವಾಚ್ಯವಾಗಿ ನಿಂದಿಸಿದ್ದಾರೆ.

ADVERTISEMENT

ತಕ್ಷಣವೇ ಸ್ಥಳಕ್ಕೆ ಬಂದ ಸೋನು ನಿಗಮ್ ಬಾಡಿ ಗಾರ್ಡ್‌ಗಳ ಮೇಲೂ ದಾಳಿ ಮಾಡಿದ ಸ್ವಪ್ನಿಲ್, ಬಾಡಿಗಾರ್ಡ್‌ಗಳು ಏಳು ಅಡಿಗೂ ಹೆಚ್ಚು ದೂರ ಹೋಗಿ ಬೀಳುವಂತೆ ತಳ್ಳಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದರು.

ಇದರಿಂದ ಕುಪಿತಗೊಂಡ ಸೋನು ನಿಗಮ್ ಅವರು ಚಂಬುರ್‌ ಪೊಲೀಸ್ ಠಾಣೆಯಲ್ಲಿ ಸ್ವಪ್ನಿಲ್ ವಿರುದ್ಧ ದೂರು ನೀಡಿದ್ದಾರೆ. ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಸೋನು ನಿಗಮ್ ಹಾಗೂ ಅವರ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಹೊಂದಿದ್ದಾರೆ.

ಈ ಘಟನೆ ಬಗ್ಗೆ ಬಿಜೆಪಿ ಮುಖಂಡರು ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು ಇದು ಶಿವಸೇನಾದ ಗೂಂಡಾಗಿರಿ ಸಂಸ್ಕೃತಿ ಎಂದು ಆರೋಪಿಸಿದ್ದಾರೆ. ಪ್ರಕಾಶ್ ಪಾಠೇರ್‌ಪೇಕರ್ ಅವರು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಬಣದ ಶಾಸಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.