ಬೆಂಗಳೂರು: ಹೊಸಬರು ನಟಿಸಿರುವ 'ವಲವಾರ' ಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ವೀಕ್ಷಿಸಿದ ನಟ ಶಿವರಾಜ್ ಕುಮಾರ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಚಿತ್ರ ಕುರಿತು ಮಾತನಾಡಿರುವ ಶಿವಣ್ಣ, ‘ನಾನು ವಲವಾರ ಚಿತ್ರ ನೋಡುವಾಗ ಯಾರೋ ಗೊತ್ತಿರುವ ವ್ಯಕ್ತಿ ಪಕ್ಕದಲ್ಲೇ ಕೂತು ಕಥೆ ಹೇಳಿದ ಅನುಭವ ನೀಡಿತು. ಕುಂಡೇಸಿ, ಅವನ ತಾಯಿ, ತಮ್ಮ 'ತಂದೆ' ತರಾನೇ ಆಡೋ ಅಪ್ಪ, ಸ್ನೇಹಿತ ಯದುಕುಮಾರ ಮತ್ತು ಅವನ ಹಸು ಗೌರ. ಇವರೆಲ್ಲರೂ ನಿಮಗೆ ಪರಿಚಯ ಇಲ್ಲದಿದ್ದರೂ ಸಿನಿಮಾ ಮುಗಿಯೋ ಅಷ್ಟರಲ್ಲಿ ಹತ್ತಿರವಾಗಿಬಿಡುತ್ತಾರೆ. ಸುತನ್ ಗೌಡ ಹಾಗೂ ಇಡೀ ತಂಡಕ್ಕೆ ಶುಭವಾಗಲಿ. ವಲವಾರ ಈಗ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ, ಆದಷ್ಟು ಬೇಗ ನೋಡಿ. ಹೊಸ ತಂಡಕ್ಕೆ ನಿಮ್ಮ ಬೆಂಬಲ ಸದಾ ಇರಲಿ’ ಎಂದು ಶುಭಹಾರೈಸಿದ್ದಾರೆ.

ಕುಂಡೇಸಿ ಪಾತ್ರದಲ್ಲಿ ಮಾಸ್ಟರ್ ವೇದಿಕ್ ಕುಶಾಲ್, ಕೊಸುಡಿ ಪಾತ್ರದಲ್ಲಿ ಮಾಸ್ಟರ್ ಶಯಣ್, ತಾಯಿ ಪಾತ್ರದಲ್ಲಿ ಹರ್ಷಿತಾ ಗೌಡ ಹಾಗೂ ತಂದೆಯ ಪಾತ್ರದಲ್ಲಿ ಮಾಲತೇಶ್ ನಟಿಸಿದ್ದಾರೆ.
ಜಾಡೇಜ (ಹುಂಜ), ಗೌರ (ಹಸು) ಇವರು ಕೂಡ ಕುಂಡೇಸಿ ಕುಟುಂಬದ ಸದಸ್ಯರೇ ಆಗಿರುತ್ತಾರೆ. ಹೀಗೊಂದು ದಿನ ಕೊಸುಡಿ ತುಂಬು ಗರ್ಭಿಣಿ ಗೌರನ ಕರೆದುಕೊಂಡು ಹಳ್ಳದ ಹತ್ತಿರ ಹೋಗುತ್ತಾನೆ. ಬಳಿಕ ಹಸು ಕಾಣೆ ಆಗುತ್ತದೆ. ಈ ಕಾರಣದಿಂದ ಕೊಸುಡಿ ಮನೆ ಬಿಟ್ಟು ಹೋಗುತ್ತಾನೆ. ಮತ್ತೆ ಕುಟುಂಬಕ್ಕೆ ಸೇರಿಕೊಳ್ಳುತ್ತಾನಾ, ಇವನ ಮೇಲೆ ಅಪ್ಪನಿಗೆ ಪ್ರೀತಿ ಮೂಡುತ್ತಾ ಎಂಬುವುದೇ ವಲವಾರ ಚಿತ್ರದ ಕಥೆ.
‘ವಲವಾರ’ ಚಿತ್ರವನ್ನು ಜೆ. ಗಿರಿಧರ್, ಅನಿರುದ್ಧ್ ಗೌತಮ್ ನಿರ್ಮಾಣ ಮಾಡಿದ್ದು, ಸುತನ್ ಗೌಡ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕದ್ರಿ ಮಣಿಕಾಂತ್ ಅವರ ಸಂಯೋಜನೆ, ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.