ADVERTISEMENT

ಶಿವಾಜಿ ಕಂಡು ಜನರು ತಬ್ಬಿಬ್ಬು!

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
ರಾಧಿಕಾ ಚೇತನ್‌ ಮತ್ತು ರಮೇಶ್‌ ಅರವಿಂದ್
ರಾಧಿಕಾ ಚೇತನ್‌ ಮತ್ತು ರಮೇಶ್‌ ಅರವಿಂದ್   

ಅದು ಮೈಸೂರಿನ ಅರಮನೆ ಪ್ರದೇಶ. ಇದ್ದಕ್ಕಿದ್ದಹಾಗೆ ನಟ ರಮೇಶ್‌ ಅರವಿಂದ್‌ ಪೊಲೀಸ್‌ ವೇಷಧಾರಿಯಾಗಿ ಬಂದಾಗ ಅಲ್ಲಿದ್ದವರು ಒಮ್ಮೆಲೆ ತಬ್ಬಿಬ್ಬು. ಇದು ‘ಶಿವಾಜಿ ಸೂರತ್ಕಲ್‌–ದಿ ಕೇಸ್ ಆಫ್‌ ರಣಗಿರಿ ರಹಸ್ಯ’ ಚಿತ್ರದ ಶೂಟಿಂಗ್‌ ಎಂದು ಜನರಿಗೆ ಅರಿಯಲು ಬಹುಹೊತ್ತು ಬೇಕಾಯಿತಂತೆ.

ಚಂದನವನದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ ಇದು. ಇದರಲ್ಲಿ ರಮೇಶ್‌ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ಶಿವಾಜಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ರಾಧಿಕಾ ಚೇತನ್ ಅವರದು ಶಿವಾಜಿಯ ಪತ್ನಿ ಜನನಿಯ ಪಾತ್ರ.

ಶಿವಾಜಿ ಒಬ್ಬ ಅಪೂರ್ವ ಪತ್ತೇದಾರಿ ಮತ್ತು ದಕ್ಷ ಪೋಲೀಸ್ ಅಧಿಕಾರಿ. ಅಪರಾಧ ವಿಭಾಗದ ಫೇಮಸ್‌ ಅಧಿಕಾರಿ. ಜನನಿ ನ್ಯಾಯಕ್ಕಾಗಿ ಹೋರಾಡುವ ವಕೀಲೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರಮೇಶ್‌ ಹಾಗೂ ರಾಧಿಕಾ ಚೇತನ್‌ ನಡುವಿನ ಬಾಂಧವ್ಯ ಕುರಿತ ಒಂದು ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ.

ADVERTISEMENT

ಮೈಸೂರಿನಲ್ಲಿ ನಡೆದ ಚಿತ್ರೀಕರಣದ ಬಗ್ಗೆ ನಿರ್ದೇಶಕ ಆಕಾಶ್‌ ಶ್ರೀವತ್ಸ ವಿವರಿಸುವುದು ಹೀಗೆ: ‘ಲೈವ್‌ ಆಗಿ ಶೂಟಿಂಗ್‌ ಮಾಡುವುದು ಅಪೂರ್ವ ಅನುಭವ. ಮೊದಲಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ಜನರಿಗೆ ತಿಳಿದಿರಲಿಲ್ಲ. ರಮೇಶ್ ಅರವಿಂದ್ ಅವರ ಹೊಸ ಅವತಾರ ನೋಡಿ ಜನರು ಸೋಜಿಗಪಟ್ಟರು’ ಎಂದು ನೆನಪಿನ ಸುರುಳಿಗೆ ಜಾರುತ್ತಾರೆ.

‘ಮೊದಲ ಟೇಕ್‌ನಲ್ಲಿಯೇ ಎಲ್ಲವನ್ನೂ ಮುಗಿಸುವ ಅನಿವಾರ್ಯತೆ ನನಗೆ ಎದುರಾಗಿತ್ತು. ಎರಡನೆಯ ಟೇಕ್‌ಗೆ ಬಿಡುವು ಇರುತ್ತಿರಲಿಲ್ಲ. ಏಕೆಂದರೆ ಎಲ್ಲರೂ ರಮೇಶ್ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲು ದುಂಬಾಲು ಬೀಳುತ್ತಿದ್ದರು’ ಎಂದು ವಿವರಿಸುತ್ತಾರೆ.

‘ಮೈಸೂರಿನ ಚಾಮುಂಡೇಶ್ವರಿ ದೇಗುಲ, ಮೈಸೂರು ಅರಮನೆ, ಕೆ.ಆರ್. ಸರ್ಕಲ್ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ. ಚಿತ್ರದ ದೃಶ್ಯಗಳು ವಿಶೇಷವಾಗಿ ಮೂಡಿಬರಲೆಂದು ವಿಭಿನ್ನ ರೀತಿಯ ಲೆನ್ಸಿಂಗ್ ಮಾಡಲಾಗಿದೆ’ ಎನ್ನುವುದು ಅವರ ವಿವರಣೆ.

ಈ ಚಿತ್ರಕ್ಕೆ ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಗುರುಪ್ರಸಾದ್‌ ಎಂ.ಜಿ. ಅವರದ್ದು.

ಜೂಡಾ ಸ್ಯಾಂಡಿಸಂಗೀತ ಸಂಯೋಜಿಸಿದ್ದಾರೆ. ಅಭಿಜಿತ್‌ ವೈ.ಆರ್ ಮತ್ತು ಆಕಾಶ್ ಶ್ರೀವತ್ಸಚಿತ್ರಕಥೆಯ ಹೊಣೆ ಹೊತ್ತಿದ್ದಾರೆ. ಸಾಹಿತ್ಯ ರಚನೆ ಜಯಂತ ಕಾಯ್ಕಿಣಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.