ADVERTISEMENT

ಶಿವರಾಜ್‌ಕುಮಾರ್‌ ಬಣ್ಣದ ಬದುಕಿಗೆ 34 ವರ್ಷದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 9:57 IST
Last Updated 19 ಫೆಬ್ರುವರಿ 2020, 9:57 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

‘ಕನ್ನಡದಲ್ಲಿ ನಡೆಯುತ್ತಿರುವ ಹೊಸ ಬಗೆಯ ಪ್ರಯೋಗಗಳಲ್ಲಿ ಭಾಗಿಯಾಗಲು ನನಗೂ ಅವಕಾಶ ಸಿಗುತ್ತಿದೆ; ಅದು ತುಂಬಾ ಖುಷಿಯ ವಿಷಯ. ಸಾಮಾನ್ಯ ಮಾದರಿ ಸಿನಿಮಾ ಮಾಡುವುದು ಬೇರೆ; ಪ್ರಯೋಗಗಳಿಗೆ ಒಡ್ಡಿಕೊಳ್ಳುವ ತೃಪ್ತಿಯೇ ಬೇರೆ’

–ನಟ ಶಿವರಾಜ್‌ಕುಮಾರ್‌ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತುಗಳಿವು. ಸ್ಟಾರ್‌ನಟರು ಇಮೇಜ್‌ಗಳಿಗೆ ಜೋತು ಬೀಳುವುದೇ ಹೆಚ್ಚು. ಆದರೆ, ಇಂದಿಗೂ ಶಿವಣ್ಣ ಯಾವುದೇ ಇಮೇಜ್‌ ಅಂಟು ಕೊಂಡವರಲ್ಲ. ಪ್ರಯೋಗಗಳಿಗೆ ಸದಾ ಒಗ್ಗಿಕೊಳ್ಳುತ್ತಲೇ ಅವರು ವೃತ್ತಿಬದುಕಿನಲ್ಲಿ 34 ವಸಂತ ಪೂರೈಸಿದ್ದಾರೆ.

ಅವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ‘ಆನಂದ್‌’. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಸಿಂಗೀತಂ ಶ್ರೀನಿವಾಸರಾವ್‌. ಪ್ರಥಮ ಚಿತ್ರವೇ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆಯಿತು. ಆ ನಂತರ ಅವರು ನಟಿಸಿದ ‘ರಥಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಸಿನಿಮಾಗಳ ಯಶಸ್ಸು ಅವರಿಗೆ ‘ಹ್ಯಾಟ್ರಿಕ್ ಹೀರೊ’ ಪಟ್ಟವನ್ನು ಕಾಯಂಗೊಳಿಸಿತು.

ADVERTISEMENT

1995ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರ ಶಿವಣ್ಣ ಅವರ ವೃತ್ತಿಬದುಕಿನ ದೊಡ್ಡ ಮೈಲಿಗಲ್ಲು. ಇದರಲ್ಲಿನ ಅವರ ನಟನೆಗೆ ರಾಜ್ಯ ಸರ್ಕಾರದ ‘ಅತ್ಯುತ್ತಮ ನಟ’ ಪ್ರಶಸ್ತಿಯೂ ಲಭಿಸಿತು. ಹಿರಿಯ ಹಾಗೂ ಹೊಸ ನಿರ್ದೇಶಕರ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. 2005ರಲ್ಲಿ ಬಿಡುಗಡೆಗೊಂಡ ಪ್ರೇಮ್‌ ನಿರ್ದೇಶನದ ‘ಜೋಗಿ’ ಸಿನಿಮಾ ಸೂಪರ್‌ಹಿಟ್‌ ಆಯಿತು. ಇದರಲ್ಲಿನ ಶಿವಣ್ಣ ಅವರ ‘ಮಾದೇಶ’ನ ಪಾತ್ರ ಜನಮನ್ನಣೆಗಳಿಸಿತು.

ಎರಡು ವರ್ಷದ ಹಿಂದೆ ತೆರೆಕಂಡ ದುನಿಯಾ ಸೂರಿ ನಿರ್ದೇಶನದ ‘ಟಗರು’ ಅವರ ವೃತ್ತಿಬದುಕಿನ ಅತ್ಯುತ್ತಮ ಸಿನಿಮಾಗಳ ಪೈಕಿ ಒಂದಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಇದು ದೊಡ್ಡ ಯಶಸ್ಸು ಪಡೆಯಿತು. ಪ್ರಸ್ತುತ ಶಿವಣ್ಣ ಅವರು ಎ. ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬುಧವಾರ ಹೊಸ ಚಿತ್ರ ‘ಆರ್‌ಡಿಎಕ್ಸ್‌’ ಸಿನಿಮಾ ಸೆಟ್ಟೇರಿದೆ. ಇದಕ್ಕೆ ರವಿ ಅರಸ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದು ಅವರ 123ನೇ ಚಿತ್ರ. ಇದಾದ ಬಳಿಕ ‘ಭೈರತಿ ರಣಗಲ್ಲು’ ಚಿತ್ರದಲ್ಲಿ ಅವರು ಅಭಿನಯಿಸಲಿದ್ದಾರೆ.

‘ಇಂದಿಗೆ ಈ ಚಿತ್ರರಂಗದಲ್ಲಿ ನನ್ನ ಕೆಲಸ ಶುರು ಮಾಡಿ 34 ವರ್ಷಗಳಾದವು. ನಿಮ್ಮ ಪ್ರೋತ್ಸಾಹಕ್ಕೆ ಅಭಿಮಾನಕ್ಕೆ ಚಿರಋಣಿ. ಇಂದು ನನ್ನ 123ನೇ ಸಿನಿಮಾದ ಮುಹೂರ್ತ ನೆರವೇರಿತು. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ’ ಎಂದು ಶಿವರಾಜ್‌ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.