ADVERTISEMENT

ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ನಟ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 14:35 IST
Last Updated 18 ಡಿಸೆಂಬರ್ 2024, 14:35 IST
ಶಿವರಾಜ್‌ಕುಮಾರ್‌ 
ಶಿವರಾಜ್‌ಕುಮಾರ್‌    

ಬೆಂಗಳೂರು: ಅನಾರೋಗ್ಯದ ಕಾರಣದಿಂದ ನಟ ಶಿವರಾಜ್‌ಕುಮಾರ್‌ ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ(ಡಿ.18) ರಾತ್ರಿ ಅಮೆರಿಕಕ್ಕೆ ತೆರಳಿದ್ದಾರೆ. ಡಿ.24ರಂದು ಅಲ್ಲಿನ ಮಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.  

ಶಿವರಾಜ್‌ಕುಮಾರ್‌ ಅವರ ಜೊತೆಗೆ ಗೀತಾ ಶಿವರಾಜ್‌ಕುಮಾರ್‌ ಹಾಗೂ ನಿವೇದಿತಾ ಶಿವರಾಜ್‌ಕುಮಾರ್‌ ಅವರೂ ಅಮೆರಿಕಕ್ಕೆ ತೆರಳಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರೂ ಕುಟುಂಬವನ್ನು ಸೇರಿಕೊಳ್ಳಲಿದ್ದಾರೆ. ವೈದ್ಯರಾದ ಮುರುಗೇಶನ್‌ ಮನೋಹರನ್‌ ಅವರು ಶಿವರಾಜ್‌ಕುಮಾರ್‌ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. 

ಬುಧವಾರ ಮುಂಜಾನೆ ನಟರಾದ ಸುದೀಪ್‌, ವಿನೋದ್‌ ರಾಜ್‌ಕುಮಾರ್‌, ಹಲವು ನಿರ್ಮಾಪಕರು ಭೇಟಿಯಾಗಿ ಶಿವರಾಜ್‌ಕುಮಾರ್‌ ಅವರ ಆರೋಗ್ಯ ವಿಚಾರಿಸಿದರು. ನೂರಾರು ಅಭಿಮಾನಿಗಳು ಬುಧವಾರ ಸಂಜೆ ಶಿವರಾಜ್‌ಕುಮಾರ್‌ ಅವರ ನಿವಾಸದ ಬಳಿ ಸೇರಿದ್ದರು. ಅಭಿಮಾನಿಗಳನ್ನು, ಕುಟುಂಬದ ಸದಸ್ಯರನ್ನು ನೋಡಿ ಶಿವರಾಜ್‌ಕುಮಾರ್‌ ಒಂದು ಕ್ಷಣ ಭಾವುಕರಾದರು.   

ADVERTISEMENT

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಇಲ್ಲಿದ್ದುಕೊಂಡೇ ಪಡೆದ ಚಿಕಿತ್ಸೆಯ ವರದಿ ಸಕಾರಾತ್ಮಕವಾಗಿದೆ. ಆದರೂ ಆತಂಕ ಇದ್ದೇ ಇರುತ್ತದೆ. ಕುಟುಂಬಸ್ಥರನ್ನು, ಅಭಿಮಾನಿಗಳನ್ನು ನೋಡಿ ದುಃಖ ಉಮ್ಮಳಿಸಿತು ಅಷ್ಟೆ. ನಾನು ಬಹಳ ಭರವಸೆಯಿಂದ ಇದ್ದೇನೆ. ಡಿ.24ಕ್ಕೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಐದು ವಾರಗಳ ಕಾಲ ನಾನು ಅಮೆರಿಕದಲ್ಲಿ ಇರಲಿದ್ದೇನೆ. ಎಲ್ಲರ ಆಶೀರ್ವಾದ ಇದೆ. ಜ.25ಕ್ಕೆ ಅಮೆರಿಕದಿಂದ ಹೊರಡಲಿದ್ದು, ಜ.26ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದೇನೆ. ಈಗಲೇ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ವರ್ಷಾಂತ್ಯಕ್ಕೆ ಬಿಡುಗಡೆಗೊಳ್ಳಲಿರುವ ‘ಯುಐ’ ಹಾಗೂ ‘ಮ್ಯಾಕ್ಸ್‌’ ಸಿನಿಮಾಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.