ADVERTISEMENT

‘ದೇವರು ಸ್ಕ್ರೀನ್‌ಪ್ಲೇ ಮೊದಲೇ ಬರೆದಿಟ್ಟಿರುತ್ತಾನೆ’: ನಟ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 12:40 IST
Last Updated 14 ನವೆಂಬರ್ 2021, 12:40 IST
ಶಿವರಾಜ್‌ಕುಮಾರ್‌
ಶಿವರಾಜ್‌ಕುಮಾರ್‌   

ಬೆಂಗಳೂರು: ‘ಅಪ್ಪುಗೂ ಭಜರಂಗಿ–2 ಸಿನಿಮಾ ನೋಡುವ ಆಸೆ ಇತ್ತು. ಅ.29ಕ್ಕೆ ಮನೆಯಲ್ಲೇ ಈ ಚಿತ್ರ ನೋಡುತ್ತೇನೆ ಎಂದಿದ್ದ. ಇವತ್ತು ಅವನ ಅಭಿಮಾನಿಗಳು ಸಿನಿಮಾ ನೋಡಿದ್ದು, ಅವರು ನೋಡಿದರೆ ಅಪ್ಪುವೇ ಸಿನಿಮಾ ನೋಡಿದಂತೆ..’

ಹೀಗೆನ್ನುತ್ತಾ ಗದ್ಗದಿತರಾಗಿದ್ದು ನಟ ಶಿವರಾಜ್‌ಕುಮಾರ್‌. ಅ.29ರಂದು ಭಜರಂಗಿ–2 ಸಿನಿಮಾ ಬಿಡುಗಡೆಯಾಗಿತ್ತು. ಅದೇ ದಿನ ಮಧ್ಯಾಹ್ನ ನಟ ಪುನೀತ್‌ ರಾಜ್‌ಕುಮಾರ್‌ ಹೃದಯಸ್ತಂಭನದಿಂದ ನಿಧನರಾಗಿದ್ದರು. ಹೀಗಾಗಿ ಅಂದೇ ಅಭಿಮಾನಿಗಳ ಜೊತೆಗೂಡಿ ಸಿನಿಮಾ ನೋಡಲು ನಿರ್ಧರಿಸಿದ್ದಶಿವರಾಜ್‌ಕುಮಾರ್‌ ಏಕಾಏಕಿ ವಿಕ್ರಮ್‌ ಆಸ್ಪತ್ರೆಗೆ ದೌಡಾಯಿಸಿದ್ದರು. ಭಾನುವಾರ (ನ.14) ಸಿನಿಮಾ ಬಿಡುಗಡೆಯಾಗಿ ಎರಡು ವಾರದ ಬಳಿಕ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೂಡಿ ಮೊದಲ ಬಾರಿಗೆ ಭಜರಂಗಿ–2 ಸಿನಿಮಾವನ್ನು ಶಿವರಾಜ್‌ಕುಮಾರ್‌ ವೀಕ್ಷಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಿನಿಮಾದಲ್ಲಿನ ಕೆಲ ಡೈಲಾಗ್‌ಗಳು ನಿಜಜೀವನಕ್ಕೂ ಅನಿರೀಕ್ಷಿತವಾಗಿ ಹೋಲಿಕೆಯಾಗತೊಡಗುತ್ತವೆ.ದೇವರು ಸ್ಕ್ರೀನ್‌ಪ್ಲೇಯನ್ನು ಮೊದಲೇ ಬರೆದಿಟ್ಟಿರುತ್ತಾನೆ. ಜೀವನ ನಮ್ಮ ಕೈಯಲ್ಲಿ ಹಾಗೆ ಮಾತನಾಡಿಸುತ್ತದೆ. ಜೀವನ ಯಾವತ್ತೂ ಶಾಶ್ವತ ಅಲ್ಲ. ವಿಚಾರಗಳು ಶಾಶ್ವತ’ ಎಂದರು.

ADVERTISEMENT

‘ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ. ನಾನು ಈಗ ಸಿನಿಮಾ ನೋಡುತ್ತಿದ್ದೇನೆ. ಇದಕ್ಕೆ ಕಾರಣ ನಿಮಗೆಲ್ಲ ಗೊತ್ತಿದೆ. ಈ ಕಾರಣ ಹೇಳಿದರೆ ನನಗೂ, ಪ್ರತಿಯೊಬ್ಬರಿಗೂ ನೋವಾಗುತ್ತದೆ. ಅಪ್ಪುವನ್ನು ಎಲ್ಲರೂ ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಅಪ್ಪು ನಮ್ಮಲ್ಲೇ ಇದ್ದಾನೆ. ಚಿತ್ರದ ಇಡೀ ತಾಂತ್ರಿಕ ವರ್ಗಕ್ಕೆ ನಾನು ಇದರ ಯಶಸ್ಸಿನ ಕೀರ್ತಿ ನೀಡುತ್ತೇನೆ. ಚೆನ್ನಾಗಿರುವ ಸಿನಿಮಾಗಳನ್ನು ಅಭಿಮಾನಿಗಳು ಯಾವತ್ತೂ ಕೈಬಿಡಲ್ಲ. ಗುಣಮಟ್ಟದ ಸಿನಿಮಾ ಮಾಡಿದ್ದೇವೆ ಎಂಬ ಹೆಮ್ಮೆ ಇದೆ’ ಎಂದರು.

‘ನನ್ನ 125ನೇ ಸಿನಿಮಾವನ್ನು ಹರ್ಷ ಅವರೇ ನಿರ್ದೇಶಿಸುತ್ತಿದ್ದು, ಮಹಿಳಾ ಪ್ರೇಕ್ಷಕರಿಗಾಗಿಯೇ ಈ ಸಿನಿಮಾ ಮಾಡುತ್ತಿದ್ದೇವೆ. ಇದರ ಸಂದೇಶವೂ ಸುಂದರವಾಗಿದೆ. ಭೈರಾಗಿ ಸಿನಿಮಾದ ಕೊಂಚ ಚಿತ್ರೀಕರಣ ಬಾಕಿ ಇದ್ದು, ಇದಾದ ಕೂಡಲೇ ‘ವೇದ’ ಚಿತ್ರದ ಶುರುಮಾಡಲಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.