ADVERTISEMENT

Sholay@50: ಬಾಲಿವುಡ್‌ಗೆ ‘ಗಬ್ಬರ್ ಸಿಂಗ್’ ಎಂಬ ಅದ್ಭುತ ಖಳನಾಯಕನ ನೀಡಿದ ಸಿನಿಮಾ

ಪಿಟಿಐ
Published 15 ಆಗಸ್ಟ್ 2025, 9:19 IST
Last Updated 15 ಆಗಸ್ಟ್ 2025, 9:19 IST
<div class="paragraphs"><p>ಶೋಲೆ ಚಿತ್ರದಲ್ಲಿ ಗಬ್ಬರ್‌ ಸಿಂಗ್ ಪಾತ್ರದಲ್ಲಿ ಅಮ್ಜದ್ ಖಾನ್</p></div>

ಶೋಲೆ ಚಿತ್ರದಲ್ಲಿ ಗಬ್ಬರ್‌ ಸಿಂಗ್ ಪಾತ್ರದಲ್ಲಿ ಅಮ್ಜದ್ ಖಾನ್

   

ನವದೆಹಲಿ: ‘ಕಿತನೇ ಆದ್ಮಿ ತೇ... ’ ಎನ್ನುತ್ತಾ ಡಕಾಯಿತರ ಗುಂಪಿನ ನಾಯಕನೊಬ್ಬ ಬಂಡೆಗಳ ಮೇಲೆ ಬೂಟಿನ ಸಪ್ಪಳ ಮಾಡುತ್ತಾ ತಂಡದ ಸದಸ್ಯ ಕಾಲಿಯಾಗೆ ಕೇಳುವ ಪ್ರಶ್ನೆ ಶೋಲೆ ಎಂಬ ಚಿತ್ರ ಮತ್ತು ಗಬ್ಬರ್‌ ಸಿಂಗ್ ಎಂಬ ಪಾತ್ರಕ್ಕೆ ಜೀವ ತುಂಬಿತು. ಆ ಡಕಾಯಿತನ ಪಾತ್ರ ನಿರ್ವಹಿಸಿದ ಅಮ್ಜದ್ ಖಾನ್‌ ಎಂಬ ನಟನ ಮೂಲಕ ಗಬ್ಬರ್‌ ಸಿಂಗ್ ಎಂಬ ಖಳನಾಯಕ ಹಿಂದಿ ಸಿನಿಮಾ ರಂಗದಲ್ಲೇ ಅಚ್ಚಳಿಯದೇ ಉಳಿಯಿತು.

50 ವರ್ಷಗಳನ್ನು ಪೂರೈಸಿದ ಶೋಲೆ (1975) ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿತು. ಕರ್ನಾಟಕದ ರಾಮನಗರದಲ್ಲಿ ಚಿತ್ರೀಕರಣಗೊಂಡ ರಮೇಶ್ ಸಿಪ್ಪಿ ನಿರ್ದೇಶಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯನ್ನು ಸೂರೆ ಮಾಡಿತ್ತು. ಚಿತ್ರಕಥೆ ಬರೆದ ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಅವರು ಒಬ್ಬ ಭಯಾನಕ ಡಕಾಯತ್‌ನನ್ನು ಸೃಷ್ಟಿಸಿದರು. ಆದರೆ ಇಂಥದ್ದೊಂದು ಮಹತ್ವದ ಪಾತ್ರಕ್ಕೆ ಹೊಸ ನಟನೊಬ್ಬನನ್ನು ಆಯ್ಕೆ ಮಾಡಿದ್ದೂ ಒಂದು ಇತಿಹಾಸ ಸೃಷ್ಟಿಗೆ ಕಾರಣವಾಯಿತು.

ADVERTISEMENT

ತಮ್ಮ ಮೊದಲ ಚಿತ್ರದಲ್ಲೇ ಗಬ್ಬರ್ ಸಿಂಗ್ ಎಂಬ ಪ್ರಮುಖ ಪಾತ್ರ ನಿರ್ವಹಿಸಿದ ಅಮ್ಜದ್ ಖಾನ್‌ ಅವರ ಪಾತ್ರ ಪ್ರೇಕ್ಷಕರಿಗೆ ಹೊಸ ಅನುಭೂತಿಯನ್ನು ನೀಡಿತು. ದಯೆಯೇ ಇಲ್ಲದ ಪಾತಕಿ, ಮತ್ತೊಬ್ಬರ ಜೀವ ತೆಗೆಯಲು ಹಿಂಜರಿಕೆಯೇ ಇಲ್ಲದ ನಿರ್ದಯಿ, ವಿಕೃತಿ, ಭಯಾನಕ ಹೀಗೆ ಕ್ರೌರ್ಯವನ್ನೇ ಆವಾಹಿಸಿಕೊಂಡು ಅಮ್ಜದ್ ಖಾನ್‌ ಅವರ ನಟನೆ, ಶೋಲೆ ಎಂದರೆ ಗಬ್ಬರ್, ಗಬ್ಬರ್ ಎಂದರೆ ಶೋಲೆ ಎಂಬಂತಾಗಿತ್ತು. 

‘ಗಬ್ಬರ್ ಎಂಬ ಪಾತ್ರ ಸೃಷ್ಟಿಯೇ ಅದ್ಭುತ. ಆ ಪಾತ್ರಕ್ಕೆ ಜೀವ ತುಂಬಿದ ನಟನೆಯೂ ಅಮೋಘ. ಆ ಕ್ರೂರ ಪಾತ್ರದಲ್ಲೂ ಹಾಸ್ಯದ ಸೆಳಕಿತ್ತು. ಅದನ್ನು ಸಲೀಮ್ ಮತ್ತು ಜಾವೇದ್ ಅವರು ನಯವಾಗಿ ಹೆಣೆದಿದ್ದರು. ತಮ್ಮ ಚೊಚ್ಚಲ ಚಿತ್ರದಲ್ಲೇ ಅದ್ಭುತವಾಗಿ ನಟಿಸಿದ್ದ ಅಮ್ಜದ್ ಖಾನ್, ಡಕಾಯಿತನಾಗಿ ಪರಕಾಯ ಪ್ರವೇಶ ಮಾಡಿದ್ದರು. ತಲೆಮಾರುಗಳು ಕಳೆದರೂ ಪಾತ್ರ ಅಚ್ಚಳಿಯದೇ ಜನಮಾನಸದಲ್ಲಿ ಉಳಿದಿದೆ ಎಂದರೆ, ಅದರ ಸಂಪೂರ್ಣ ಶ್ರೇಯ ಆ ಪಾತ್ರಕ್ಕೆ ಜೀವ ತುಂಬಿದ ನಟನಿಗೇ ಸಲ್ಲಬೇಕು’ ಎಂದು ಚಲನಚಿತ್ರ ಇತಿಹಾಸಕಾರ ಹಾಗೂ ಲೇಖಕ ಎಸ್‌.ಎಂ.ಎಂ. ಔಸಾಜಾ ಅಭಿಪ್ರಾಯಪಟ್ಟಿದ್ದಾರೆ.

‘ನಾಯಕ ನಟರಾದ ಜಯ್‌ (ಅಮಿತಾಭ್‌ ಬಚ್ಚನ್‌) ಮತ್ತು ವೀರು (ಧರ್ಮೇಂದ್ರ) ಅವರನ್ನು ಕರೆತರಲಾಗದ ತನ್ನ ತಂಡದ ಸದಸ್ಯರನ್ನುದ್ದೇಶಿಸಿ ಬಂಡೆಗಳ ಮೇಲೆ ಬೆಲ್ಟ್ ಅನ್ನು ಕಾಲಿಗೆ ಬಡಿಯುತ್ತಾ ಗಬ್ಬರ್‌, ‘ವೋ ದೋ ಥೆ ಔರ್ ತುಮ್ ತೀನ್‌... ಫಿರ್ ಭೀ ವಾಪಸ್‌ ಆಗಯೇ... ಖಾಲೀ ಹಾತ್‌... ಕ್ಯಾ ಸಮಜಕರ್‌ ಆಯೆ ಥೇ? (ಅವರು ಇಬ್ಬರು. ನೀವು ಇದ್ದದ್ದು ಮೂವರು. ಆದರೂ ಖಾಲಿ ಕೈಯಲ್ಲಿ ಬಂದಿದ್ದೀರಿ. ಏನಂದುಕೊಂಡು ಬಂದಿರಿ) ಎನ್ನತ್ತಲೇ ನಗುತ್ತಿದ್ದ ತನ್ನ ಸಹವರ್ತಿಗಳನ್ನೇ ಗುಂಡಿಟ್ಟು ಕೊಲ್ಲುವ ನಿರ್ದಯಿ ಡಕಾಯಿತನ ಆ ವಿಭಿನ್ನ ಮ್ಯಾನರಿಸಂಗೆ ಇಡೀ ಚಿತ್ರರಂಗವೇ ಮನಸೋತಿತ್ತು’ ಎಂದಿದ್ದಾರೆ.

ಚಿತ್ರದುದ್ದಕ್ಕೂ ಗಬ್ಬರ್ ಸಿಂಗ್ ಎಂಬ ಪಾತ್ರವು ರಾಮಘಡ ಎಂಬ ಊರಿನಲ್ಲಿ ಸೃಷ್ಟಿಸುವ ಭೀತಿ, ಕೊಲ್ಲುವ ರೀತಿ ಜನರ ಆತ್ಮವನ್ನೇ ಕಲಕುತ್ತದೆ. ಗಬ್ಬರ್‌ನ ಅಬ್ಬರ ಇಡೀ ಪರದೆಯನ್ನೇ ಆವರಿಸುತ್ತದೆ. ಬಸಂತಿ ಅಥವಾ ರಾಧಾ ಯಾರೂ ಗಣನೆಗೆ ಬಾರರು. ಆದರೆ ಚಿತ್ರ ಸಾಗುತ್ತಾ ಪಾತ್ರ ಪ್ರವೇಶವಾಗುತ್ತಿದ್ದಂತೆ ಇದು ಬಹು ತಾರಾಗಣದ ಚಿತ್ರ ಎಂದು ಭಾಸವಾಗುತ್ತದೆ.

ಗಬ್ಬರ್‌ ಪಾತ್ರ ಸೃಷ್ಟಿ ಹೇಗಾಯಿತು?

ಗಬ್ಬರ್‌ ಪಾತ್ರ ಸೃಷ್ಟಿಯ ಕುರಿತು ಚಿತ್ರಕಥೆಗಾರ ಸಲೀಂ ಖಾನ್ 2024ರಲ್ಲಿ ವಿಷಯ ಹಂಚಿಕೊಂಡಿದ್ದರು. ‘ನಮ್ಮ ತಂದೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯಾಗಿದ್ದರು. ಡಕಾಯತ್ ಗಬ್ಬರ್‌ ಸಿಂಗ್‌ ಕುರಿತ ಕಥೆಗಳನ್ನು ಅವರು ಹೇಳುತ್ತಿದ್ದರು. ಆತ ಜನರನ್ನು ಕೊಲ್ಲುತ್ತಿದ್ದ. ಅವರ ಮೂಗುಗಳನ್ನೂ ಕತ್ತರಿಸುತ್ತಿದ್ದ ಎಂದು ಅವರು ಹೇಳುವಾಗ ಆ ಪಾತ್ರದ ಕರಾಳ ಕಲ್ಪನೆ ಮನಸ್ಸಿನಲ್ಲಿ ಮೂಡುತ್ತಿತ್ತು. ನಿಜ ಜೀವನದ ಕೆಲ ಪಾತ್ರಗಳು ನಮ್ಮಲ್ಲಿ ಬಹಳಷ್ಟು ಪ್ರಭಾವ ಬೀರುತ್ತವೆ’ ಎಂದಿದ್ದರು.

ಈ ಪಾತ್ರಕ್ಕೆ ಮೊದಲು ಡ್ಯಾನಿ ಡೆನ್‌ಝೊಂಗ್ಪಾ ಆಯ್ಕೆ ಮಾಡಲಾಗಿತ್ತು. ಅವರು ನಟಿಸುವುದಾಗಿ ಸಹಿಯನ್ನೂ ಹಾಕಿದ್ದರು. ಆದರೆ ಫಿರೋಜ್ ಖಾನ್ ಅವರ ‘ಧರ್ಮಾತ್ಮ’ ಚಿತ್ರದಲ್ಲಿ ನಟಿಸಲು ಅವರು ವಿದೇಶಕ್ಕೆ ಹೋದರು. ಇದರಿಂದಾಗಿ ಶೋಲೆ ಚಿತ್ರದ ಚಿತ್ರೀಕರಣ ವಿಳಂಬವಾಯಿತು. ಆದರೆ ಇಲ್ಲಿ ಬಚ್ಚನ್ ಮತ್ತು ಸಂಜೀವ್ ಖನ್ನಾ ಅವರ ಪಾತ್ರಗಳ ಚಿತ್ರೀಕರಣವಾಗಬೇಕೆಂದರೆ ‘ಗಬ್ಬರ್‌‘ ಇರಲೇಬೇಕಾಗಿತ್ತು ಎಂದು ನೆನಪಿಸಿಕೊಂಡಿದ್ದರು.

ಗಬ್ಬರ್‌ ನಾನಾಗಬೇಕಿತ್ತು ಎಂದು ಅಮಿತಾಭ್‌ ಹೇಳಿದ್ದೇಕೆ?

ಗಬ್ಬರ್ ಪಾತ್ರ ಎಷ್ಟು ಸೊಗಸಾಗಿ ಸೃಷ್ಟಿಸಿದ್ದರೆಂದರೆ ಸ್ವತಃ ತಾವೇ ಆ ಪಾತ್ರ ನಿರ್ವಹಿಸಲು ಉತ್ಸುಕನಾಗಿದ್ದೆ ಎಂದು ಶೋಲೆ ಚಿತ್ರದ ನಾಯಕ ನಟ ಅಮಿತಾಭ್‌ ಹತ್ತು ವರ್ಷಗಳ ಹಿಂದೆ ಹೇಳಿದ್ದರು.

‘ನಾಟಕಗಳಲ್ಲಿ ಅಮ್ಜದ್ ಖಾನ್‌ ಅವರ ಅಭಿನಯ ಕಂಡಿದ್ದ ಸಲೀಂ ಮತ್ತು ಜಾವೇದ್ ಖಾನ್ ಅವರು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಅವರ ಹೆಸರು ಶಿಫಾರಸು ಮಾಡಿದ್ದರು. ಆದರೆ ಅಮ್ಜದ್ ಅವರು ಆ ಪಾತ್ರಕ್ಕೆ ಅಷ್ಟರ ಮಟ್ಟಿಗೆ ಜೀವ ತುಂಬುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಅವರ ಧ್ವನಿ ಅಷ್ಟಾಗಿ ಉತ್ತಮವಾಗಿರಲಿಲ್ಲ. ಆದರೆ ಅದೇ ಅವರ ಮತ್ತು ಆ ಪಾತ್ರದ ಹೆಗ್ಗುರುತಾಯಿತು’ ಎಂದು ಅಮಿತಾಬ್ ಹೇಳಿದ್ದಾರೆ.

‘ಹೆಸರಾಂತ ನಟ ಝಕಾರಿಯಾ ಖಾನ್‌ (ಜಯಂತ್) ಅವರ ಕಿರಿಯ ಮಗನಾದ ಅಮ್ಜದ್ ಖಾನ್ ಅವರು ಆ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟದಲ್ಲಿದ್ದರು. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ದೇಹಾಕೃತಿಯು ಈ ಪಾತ್ರಕ್ಕೆ ಹೆಚ್ಚು ಸೂಕ್ತ ಎಂದು ಸಲೀಂ ಖಾನ್‌ ಅವರ ಹೆಸರನ್ನು ಶಿಫಾರಸು ಮಾಡಿದ್ದರು’ ಎಂದು ’ಶೋಲೆ: ದಿ ಮೇಕಿಂಗ್ ಆಫ್ ಎ ಕ್ಲಾಸಿಕ್‌‘ನಲ್ಲಿ ಉಲ್ಲೇಖಿಸಲಾಗಿದೆ.

ಶೋಲೆ ನಂತರ ಅಮ್ಜದ್ ಖಾನ್ ಅವರು ಇಂಕಾರ್, ಸತ್ತಾ ಪೆ ಸತ್ತಾ, ಹಮ್‌ ಕಿಸಿಸೇ ಕಮ್‌ ನಹಿ, ನಸೀಬ್‌ ಚಿತ್ರಗಳಲ್ಲೂ ಅವರಿಗೆ ಖಳ ನಾಯಕ ಪಾತ್ರ ಅವರನ್ನು ಅರಸಿ ಬಂದವು. 

ಮಕ್ಕಳಾದಿಯಾಗಿ ಇಂದಿಗೂ ಗಬ್ಬರ್ ಪಾತ್ರಕ್ಕೆ ಮನಸೋಲದವರಿಲ್ಲ. ಆ ಸಂಭಾಷಣೆ, ವಿಲಕ್ಷಣ ನಗು ಹಾಗೂ ಮ್ಯಾನರಿಸಮ್ ಮೂಲಕ ಅಮ್ಜದ್ ಖಾನ್‌ ಇಂದು ಭೌತಿಕವಾಗಿ ಇಲ್ಲವಾದರೂ ಶೋಲೆಯ ಮೂಲಕ ಜೀವಂತವಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.