ಕಾಲಿವುಡ್‌ನಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರು ಪೊಲೀಸ್ ಪಾತ್ರದ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ.
ವಿಶಾಲ್ ಅಭಿನಯದಲ್ಲಿ 2018ರಲ್ಲಿ ಬಿಡುಗಡೆಗೊಂಡಿದ್ದ ‘ಇರುಂಬು ತಿರೈ’ ಸಿನಿಮಾದ ಸಿಕ್ವೆಲ್ ‘ಇರುಂಬು ತಿರೈ 2’ ಸಿನಿಮಾದಲ್ಲಿ ಶ್ರದ್ಧಾ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವುದು ಈಗ ಹೊಸ ಸುದ್ದಿ.
ಪಿ.ಎಸ್. ಮಿತ್ರನ್ ‘ಇರುಂಬು ತಿರೈ’ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ವಿಶಾಲ್ ಜೊತೆ ಅರ್ಜುನ್ ಸರ್ಜಾ, ಸಮಂತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಸೈಬರ್ ಲೋಕದ ವಂಚನಾ ಜಾಲದ ಕಥೆ ಹೊಂದಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಈ ಚಿತ್ರದ ಮೂಲಕ ನಿರ್ದೇಶಕರು ಮಾಡಿದ್ದರು. ವಿಶಾಲ್ ಇದರಲ್ಲಿ ಸೇನಾಧಿಕಾರಿಯ ಪಾತ್ರದಲ್ಲಿ ಮಿಂಚಿದ್ದರು.
ಈ ಸಿನಿಮಾದ ಭರ್ಜರಿ ಯಶಸ್ಸಿನಿಂದಾಗಿ ‘ಇರುಂಬು ತಿರೈ 2’ ನಿರ್ಮಾಣವಾಗುತ್ತಿದೆ. ಶ್ರದ್ಧಾ ಅವರು ಕನ್ನಡದ ‘ಯು ಟರ್ನ್’ ಚಿತ್ರದಲ್ಲಿನ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಸದ್ಯ ತೆಲುಗು, ತಮಿಳಿನಲ್ಲಿ ಬಹುಬೇಡಿಕೆಯ ನಟಿ.
ತಮ್ಮ ವಿಭಿನ್ನ ನಟನೆಯ ಮೂಲಕ ತಮಿಳು ಪ್ರೇಕ್ಷಕರ ಮನಗೆದ್ದಿರುವ ಅವರು, ವಿಜಯ್ ಸೇತುಪತಿ, ಮಾಧವನ್ ಮುಖ್ಯಭೂಮಿಕೆಯಲ್ಲಿದ್ದ ‘ವಿಕ್ರಂ ವೇದಾ’ ಸಿನಿಮಾದಲ್ಲೂ ನಟಿಸಿದ್ದರು. ಈ ಚಿತ್ರದ ನಟನೆ ಶ್ರದ್ಧಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಮಲಯಾಳ ಚಿತ್ರನಟ ನಿವಿನ್ ಪೌಲಿ ಅಭಿನಯದಲ್ಲಿ ಮೂಡಿಬಂದಿದ್ದ ‘ರಿಕ್ಕಿ’ ತಮಿಳು ಸಿನಿಮಾದಲ್ಲೂ ಶ್ರದ್ಧಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದೀಗ ಪೊಲೀಸ್ ಪಾತ್ರದಲ್ಲಿ ಅವರ ಅಭಿನಯ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.