ADVERTISEMENT

ಪವಾಡಗಳ ಮೂಲಕ ಪರಿವರ್ತನೆಯ ಸಂದೇಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST

ಮೌನೇಶ್ವರ ಸ್ವಾಮಿಗಳು ಉತ್ತರ ಕರ್ನಾಟಕ ಭಾಗದಲ್ಲಿ ತುಂಬ ಪ್ರಸಿದ್ಧರು. ಅವರ ಜೀವನ, ಪವಾಡಗಳು ಅಲ್ಲಿ ಜನಜನಿತ. ಅದನ್ನೇ ಇಟ್ಟುಕೊಂಡು ‘ಶ್ರೀ ಮೌನೇಶ್ವರ ಮಹಾತ್ಮೆ’ ಎಂಬ ಸಿನಿಮಾ ರೂಪಿಸಿದ್ದಾರೆ ಭೀಮರಾಜ್‌ ವಸ್ತ್ರದ್‌. ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಇದೇ ತಿಂಗಳು 18ಕ್ಕೆ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ ಚಿತ್ರತಂಡ.

‘ಈ ಸಿನಿಮಾದ ಬಗ್ಗೆ ನಮಗೆ ಕೃತಜ್ಞತೆಯ ಭಾವ ಇದೆ. ಭಕ್ತಿ ಎನ್ನುವುದು ನಾಗರಕತೆಯನ್ನು ಬೆಳೆಸುವ ಮಾರ್ಗಗಳಲ್ಲೊಂದು. ಶರಣ– ಸಂತರು ಇದ್ದಲ್ಲಿಗೆ ಹೋದಾಗ ನಮಗೂ ಸದ್ಗುಣಗಳು ಬರುತ್ತವೆ. ಕೆಟ್ಟವರ ಮನಸ್ಸೂ ಪರಿವರ್ತಿತ ಆಗುತ್ತದೆ. ಮೌನೇಶ್ವರರೂ ಹಾಗೆ ಮನಃಪರಿವರ್ತನೆ ಮಾಡಬಲ್ಲ ಶರಣ. ಹದಿನಾರನೇ ಶತಮಾನದಲ್ಲಿ ಅವರು ಬದುಕಿದ್ದರು’ ಎಂದು ವಿವರಿಸಿದರು ನಿರ್ದೇಶಕರು.

ಉತ್ತರ ಕರ್ನಾಟಕ ಭಾಗದಲ್ಲಿ ಮೌನೇಶ್ವರರ ಭಕ್ತರು ಸಾಕಷ್ಟಿದ್ದಾರೆ. ಹಾಗಾಗಿ ಆ ಭಾಗದಲ್ಲಿಯೇ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಉತ್ತರ ಕರ್ನಾಟಕದ ಸುಮಾರು ಐವತ್ತರಿಂದ ಅರವತ್ತು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ADVERTISEMENT

‘ಬಹುಪಾಲು ಚಿತ್ರೀಕರಣ ಉತ್ತರ ಕರ್ನಾಟಕದಲ್ಲಿಯೇ ಮಾಡಿದ್ದೇವೆ. ಕೆಲವು ಕಲಾವಿದರೂ ಆ ಭಾಗದವರೇ. ಆರಂಭದಲ್ಲಿ ಮೌನೇಶ್ವರರ ಕುರಿತಾಗಿ ಹಾಡು ಬರೆಯುತ್ತಿದ್ದೆ. ಕ್ಯಾಸೆಟ್ ಮಾಡಿದೆ. ನಂತರ ಮೌನೇಶ್ವರರ ಮಹಿಮೆಯನ್ನು ಸಿನಿಮಾ ಮಾಡುವ ಆಸೆ ಹುಟ್ಟಿತು. ಉತ್ತಮವಾದ ಬೆಂಬಲವೂ ಸಿಕ್ಕಿ ಸಿನಿಮಾ ರೂಪುಗೊಂಡಿದೆ. ಮೌನೇಶ್ವರರ ಪವಾಡಗಳ ಮೂಲಕ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಐಹಿಕ ಬದುಕಿನಲ್ಲಿದ್ದುಕೊಂಡೇ ಪಾರಮಾರ್ಥವನ್ನು ಸಾಧಿಸುವುದು ಹೇಗೆ ಎಂಬುದನ್ನು ಸಿನಿಮಾದ ಮೂಲಕ ಹೇಳಹೊರಟಿದ್ದೇವೆ’ ಎಂದು ಭೀಮರಾಜ್‌ ವಿವರಿಸುತ್ತಾರೆ.

ಮಹೇಶ್ ಕುಮಾರ್ ಮೌನೇಶ್ವರರ ಪಾತ್ರದಲ್ಲಿ ನಟಿಸಿದ್ದಾರೆ. ‘ಇದು ಭಕ್ತಿಪ್ರಧಾನ ಚಿತ್ರ. ಮೌನೇಶ್ವರರ ಬಾಲ್ಯಜೀವನ ಮತ್ತು ಪವಾಡಗಳನ್ನು ನಿರ್ದೇಶಕರು ತೆರೆಯ ಮೇಲೆ ತರಲು ಪ್ರಯತ್ನಿಸಿದ್ದಾರೆ. ಸಿನಿಮಾ ಚೆನ್ನಾಗಿ ಬಂದಿದೆ’ ಎಂದರು.

ಶಿವಕುಮಾರ ಆರಾಧ್ಯ ಕೂಡ ಈ ಚಿತ್ರದಲ್ಲಿ ಮೌನೇಶ್ವರರ ಭಕ್ತನ ಪಾತ್ರದಲ್ಲಿ ನಟಿಸಿದ್ದಾರೆ. ‘ಇದು ಅಧ್ಯಾತ್ಮದ ಮಹತ್ವವನ್ನು ಸಾರುವ ಚಿತ್ರ. ಅವರು ಯಾದಗಿರಿಯ ತಿಂತಣಿ ಎಂಬ ಸ್ಥಳದವರು. ಆ ಭಾಗದ ಬಹುಪಾಲು ಜನರಿಗೆ ಈ ಗುರುಗಳ ಬಗ್ಗೆ ಗೊತ್ತಿದೆ. ಅವರು ಮಹಾನ್ ತಪಸ್ವಿಗಳು’ ಎಂದರು.

ಮಾಸ್ಟರ್ ಚಿನ್ಮಯ್, ಬಾಲ ಮೌನೇಶ್ವರನಾಗಿ ಕಾಣಿಸಿಕೊಂಡಿದ್ದಾನೆ. ‘ನನಗೆ ನಿರ್ದೇಶಕರು ತುಂಬ ಮಾರ್ಗದರ್ಶನ ಮಾಡಿದ್ದಾರೆ. ಈ ಪಾತ್ರದ ಮೂಲಕ ನಾನುಮೌನೇಶ್ವರ ಬದುಕಿನ ಬಗ್ಗೆ ತಿಳಿದುಕೊಂಡೆ. ಈ ಪಾತ್ರ ನಿರ್ವಹಿಸಿರುವ ಕುರಿತು ಹೆಮ್ಮೆ ಪಡುತ್ತೇನೆ’ ಎಂದು ಚಿನ್ಮಯ್ ಹೇಳಿದ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಷೋ ಮೂಲಕ ಪ್ರಸಿದ್ಧರಾಗಿರುವ ಮಿಮಿಕ್ರಿ ರಾಜು ಕೂಡ ಈ ಸಿನಿಮಾದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದ್ರಶೇಖರ ವಸ್ತ್ರದ್ ಹಣ ಹೂಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಜಯಪ್ರಕಾಶ್ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.