ADVERTISEMENT

ಸೆಲೆಬ್ರಿಟಿಗಳೊಂದಿಗೆ ‘ಇನ್‌ಸ್ಟಾ’ ಸಂವಾದ

ಡಬ್ಬಿಂಗ್‌ ಕಲಾವಿದೆ ಶ್ರೇಯಾ ಬಾಬು ಪ್ರಯೋಗ

ನೇಸರ ಕಾಡನಕುಪ್ಪೆ
Published 9 ಜುಲೈ 2020, 19:30 IST
Last Updated 9 ಜುಲೈ 2020, 19:30 IST
ಶ್ರೇಯಾ ಬಾಬು
ಶ್ರೇಯಾ ಬಾಬು   

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಏನು ಮಾಡುತ್ತಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ. ಮನೆಯಲ್ಲಿ ಕುಳಿತ ಅಭಿಮಾನಿಗಳಿಗೆ ಇಂಥದ್ದೊಂದು ಮಾಹಿತಿ ಸಿಕ್ಕಲ್ಲಿ ಸಮಯ ತಳ್ಳಲು ಅವಕಾಶವೂ ಸಿಗುತ್ತದೆ. ಇಂತಹ ಅವಕಾಶಕ್ಕೆ ವೇದಿಕೆ ಕಲ್ಪಿಸಿದ್ದು ಮೈಸೂರಿನವರಾದ ಡಬ್ಬಿಂಗ್‌ ಕಲಾವಿದೆ ಶ್ರೇಯಾ ಬಾಬು.

‘ಕೊರೊನಾ ಬಗ್ಗೆ ಭಯ ಮೂಡಿಸುವುದು, ನಕಾರಾತ್ಮಕ ವಿಚಾರಗಳನ್ನು ಹರಡುವುದೇ ಈಗ ಹೆಚ್ಚಾಗಿದೆ. ಅದರ ಬದಲಿಗೆ ಸಕಾರಾತ್ಮಕ ಮನಸ್ಥಿತಿ ಬೆಳೆಸಬೇಕು’ ಎಂದು ಅನೇಕ ನಟ, ನಟಿಯರು ಶ್ರೇಯಾ ಬಳಿ ವಿಚಾರ ಹಂಚಿಕೊಂಡಿದ್ದರು. ಚಿತ್ರರಂಗದವರೇ ಆದ ಶ್ರೇಯಾಗೆ ಆಗ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಕಾರ್ಯಕ್ರಮ ನಡೆಸುವ ಚಿಂತನೆ ಮೂಡಿತು.

ತಮ್ಮ shreyababu_official ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಲೈವ್ ಕಾರ್ಯಕ್ರಮ ಶುರು ಮಾಡಿದರು. ಲಾಕ್‌ಡೌನ್‌ ಅವಧಿಯಲ್ಲಿ ಶುರು ಮಾಡಿದ ಲೈವ್‌ ಕಾರ್ಯಕ್ರಮ ಲಾಕ್‌ಡೌನ್‌ ಸಡಿಲವಾದ ಮೇಲೂ ಮುಂದುವರೆದಿದೆ. ಇದುವರೆಗೂ ಬರೋಬ್ಬರಿ 75 ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾರೆ. ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ, ‘ರಂಗಿತರಂಗ’ ಖ್ಯಾತಿಯ ರಾಧಿಕಾ ನಾರಾಯಣ್‌, ‘ಸೋಜಿಗದ ಸೂಜಿಮಲ್ಲಿಗೆ’ ಖ್ಯಾತಿಯ ಗಾಯಕಿ ಅನನ್ಯಾ ಭಟ್‌, ಬಿಗ್‌ ಬಾಸ್‌ ಖ್ಯಾತಿಯ ಕಿಶನ್‌, ಚೈತ್ರಾ ವಾಸುದೇವನ್, ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಖ್ಯಾತಿಯ ಶ್ವೇತಾ ಶ್ರೀವಾತ್ಸವ – ಹೀಗೆ ಪಟ್ಟಿ ಹಿರಿದಾಗಿದೆ.

ADVERTISEMENT

ಕೇವಲ ನಟ, ನಟಿಯರಲ್ಲದೇ ರೇಡಿಯೋ ಜಾಕಿಗಳು, ವಾಗ್ಮಿಗಳು, ವೈದ್ಯರನ್ನೂ ತಮ್ಮ ಲೈವ್‌ ಕಾರ್ಯಕ್ರಮದಲ್ಲಿ ಸೇರಿಸಿಕೊಂಡಿದ್ದಾರೆ. ವಾರಕ್ಕೆ ಒಂದು ಅಥವಾ ಎರಡು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

‘ಸೆಲೆಬ್ರಿಟಿಗಳ ಲಾಕ್‌ಡೌನ್‌ ಡೈರಿ ಪರಿಚಯಿಸುತ್ತೇವೆ. ಅವರಿಂದಲೇ ಅವರ ದಿನಚರಿ ಹೇಳಿಸುತ್ತೇವೆ. ಜತೆಗೆ ಕೊರೊನಾ ಸೋಂಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅಭಿಮಾನಿಗಳಿಗೆ ಕಲಾವಿದರ ಬಾಯಿಂದ ಹೇಳಿಸುತ್ತೇವೆ. ಲೈವ್‌ ಚಾಟ್‌ ಪ್ರಶ್ನೋತ್ತರವೂ ಇರುತ್ತದೆ’ ಎನ್ನುತ್ತಾರೆ ಶ್ರೇಯಾ.

ಸಂಗೀತ ಗೋಷ್ಠಿ: ‘ಮೈಸೂರು ಎಕ್ಸ್‌ಪ್ರೆಸ್’ ಸಂಗೀತ ತಂಡದಿಂದ ಸಂಗೀತ ಗೋಷ್ಠಿಯ ಲೈವ್‌ ಕಾರ್ಯಕ್ರಮ ಆಯೋಜಿಸಿದ್ದರು. ಕೊರೊನಾ ಸಂಕಷ್ಟದಲ್ಲಿ ಮನಸಿಗೆ ಮುದ ನೀಡಿದರೆ ಒತ್ತಡ ನಿವಾರಣೆಯಾಗುವುದು ಎಂಬುದು ಇವರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.