ADVERTISEMENT

‘ನಾತಿಚರಾಮಿ’ ಕುರಿತು ಕೊಂಚ ಭಯವೂ ಇದೆ

ಪದ್ಮನಾಭ ಭಟ್ಟ‌
Published 23 ಡಿಸೆಂಬರ್ 2018, 19:51 IST
Last Updated 23 ಡಿಸೆಂಬರ್ 2018, 19:51 IST
‘ನಾತಿಚರಾಮಿ’ ಚಿತ್ರದಲ್ಲಿ ಶ್ರುತಿ ಹರಿಹರನ್
‘ನಾತಿಚರಾಮಿ’ ಚಿತ್ರದಲ್ಲಿ ಶ್ರುತಿ ಹರಿಹರನ್   

‘ನಾತಿಚರಾಮಿ’ ಸಿನಿಮಾದಲ್ಲಿ ನಿಮಗೆ ತುಂಬ ಇಷ್ಟವಾದ ಅಂಶಗಳು ಯಾವವು?

ಕೆಲವು ಸಲ ನಾವು ಹಣಕ್ಕೋಸ್ಕರ ಇಲ್ಲವೇ ಕಮರ್ಷಿಯಲ್‌ ವ್ಯಾಲ್ಯೂಗೋಸ್ಕರ ಸಿನಿಮಾ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಈ ಸಿನಿಮಾವನ್ನು ನಾನು ಒಪ್ಪಿಕೊಳ್ಳಲು ವೈಯಕ್ತಿಕ ಕಾರಣಗಳಿವೆ. ಈ ಸಿನಿಮಾದಲ್ಲಿನ ಹೆಣ್ಣು ಅನುಭವಿಸುವ ಪ್ರತಿಯೊಂದು ಘಟನೆಯನ್ನೂ ನಾನು ನಿಜಜೀವನದಲ್ಲಿ ನನ್ನ ಆಪ್ತರೊಬ್ಬರು ಅನುಭವಿಸಿದ್ದನ್ನು ನೋಡಿದ್ದೇನೆ. ಹಾಗಾಗಿ ಆ ಕಥೆಗೆ, ಅದರ ನಾಯಕಿ ಗೌರಿ ಮಹೇಶ್ ಪಾತ್ರ ತುಂಬ ಆಪ್ತ ಅನಿಸಿತು.

ಈ ಚಿತ್ರದ ನಾಯಕಿ, ಮದುವೆ ಎಂಬ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿಕೊಂಡಿರುವ, ತನ್ನ ಗಂಡನನ್ನು ತುಂಬ ಪ್ರೀತಿಸುವ ಸರಳ ಮಹಿಳೆ. ಗಂಡ ತೀರಿ ಹೋದ ನಂತರ ಮದುವೆ ಎಂಬ ವ್ಯವಸ್ಥೆಯ ಅರ್ಥ ಏನು ಎಂಬ ಶೋಧನೆಯಲ್ಲಿ ಅವಳು ಇದ್ದಾಳೆ. ಇಂದಿನ ಕಾಲದಲ್ಲಿ ಮದುವೆ ಎಂಬ ವ್ಯವಸ್ಥೆಯ ನಿಜವಾದ ಅರ್ಥವೇನು ಎಂದು ನಮ್ಮೊಳಗಡೆಯೇ ಕೇಳಿಕೊಳ್ಳುವಂತೆ ಮಾಡುವ ಸಿನಿಮಾ ಇದು. ಹಾಗಾಗಿ ಇದು ಇಂದಿನ ನಮ್ಮ ಕಾಲಮಾನದ ದೃಷ್ಟಿಯಿಂದಲೂ ತುಂಬ ಮಹತ್ವದ ಸಿನಿಮಾ.

ADVERTISEMENT

ಇದುವರೆಗೆ ಸಿನಿಮಾ ಮಾಧ್ಯಮದಲ್ಲಿ ಅಭಿವ್ಯಕ್ತಿಗೊಳ್ಳದ, ಶೋಧನೆಗೊಳಪಡದ ಸಾಕಷ್ಟು ವಿಷಯಗಳು ಈ ಸಿನಿಮಾದಲ್ಲಿವೆ. ನಮ್ಮ ತಂದೆ ತಾಯಿ ಜತೆಗೂ ಮಾತನಾಡಲಾಗದಂಥ ಎಷ್ಟೋ ವಿಷಯಗಳಿರುತ್ತವೆ. ಪರಮ ಆಪ್ತರ ಎದುರು ಮಾತ್ರ ಹೇಳಿಕೊಳ್ಳಬಹುದಾದಂಥ ಎಷ್ಟೋ ವಿಷಯಗಳನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದೇವೆ.

ಇದುವರೆಗಿನ ಮಹಿಳಾಪ್ರಧಾನ ಸಿನಿಮಾಗಳಿಗಿಂತ ಈ ಸಿನಿಮಾ ಹೇಗೆ ಭಿನ್ನ?

ಮೊದಲನೆಯದಾಗಿ ಈ ಚಿತ್ರದ ನಾಯಕಿ ಮಾಡರ್ನ್‌ ಹುಡುಗಿ. ಈವತ್ತಿನ ಕಾಲದಲ್ಲಿ ಬೆಂಗಳೂರಿನಂಥ ಮಹಾನಗರದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೆಣ್ಣು. ಮಹತ್ವಾಕಾಂಕ್ಷೆ ಇರುವ ಹೆಣ್ಣು. ಪ್ರಗತಿಪರ ಚಿಂತನೆ ಇರುವಂಥ ಹೆಣ್ಣು. ಈ ಚಿತ್ರದಲ್ಲಿ ಅವಳೊಂದು ಪ್ರಶ್ನೆ ಕೇಳುತ್ತಾಳೆ; ‘ನಾವು ಹೆಣ್ಣುಮಕ್ಕಳು, ನಮ್ಮ ಬಯಕೆಗಳನ್ನು ಎಷ್ಟೇ ಸೂಕ್ಷ್ಮವಾಗಿ ಹೇಳಿಕೊಂಡೂ ನಾವು ಚೀಪ್‌ ಆಗ್ತೀವಲ್ವಾ?‘ ಎಂದು. ಅಂದರೆ ಒಂದು ಹೆಣ್ಣು ಅವಳ ಬಯಕೆಗಳನ್ನು ಯಾವ ರೀತಿಯಲ್ಲಿಯೇ ವ್ಯಕ್ತಪಡಿಸಿದರೂ ಅವಳನ್ನು ಸಮಾಜ ಕೀಳಾಗಿಯೇ ನೋಡುತ್ತದೆ. ಯಾಕೆ ಹೀಗೆ? ಈ ಚಿತ್ರದ ನಾಯಕಿ ಇಂಥ ಹಲವು ಮಹತ್ವದ ಪ್ರಶ್ನೆಗಳನ್ನು ನಿರಂತರವಾಗಿ ಕೇಳುತ್ತಲೇ ಇರುತ್ತಾಳೆ. ಇದು ನನಗೆ ಈ ಚಿತ್ರದ ವಿಶೇಷ ಅನಿಸುತ್ತಿದೆ. ಅಲ್ಲದೇ ಈ ಚಿತ್ರದ ಕಥೆಯನ್ನು ಬರೆದಿರುವುದೂ ಒಬ್ಬ ಹೆಣ್ಣು (ಸಂಧ್ಯಾರಾಣಿ). ಹಾಗಾಗಿ ಇನ್ನಷ್ಟು ಸೂಕ್ಷ್ಮವಾಗಿ ಬಂದಿದೆ. ಬರೀ ನನ್ನ ಪಾತ್ರ ಅಷ್ಟೇ ಅಲ್ಲ, ಶರಣ್ಯಾ ಅವರ ಪಾತ್ರವೂ ಅಷ್ಟೇ ಮುಖ್ಯವಾಗಿದ್ದು. ಅವರು ಗೃಹಿಣಿಯಾಗಿ ನಟಿಸಿದ್ದಾರೆ. ಅವಳು ಅಷ್ಟೇ ಮಹತ್ವದ ಪ್ರಶ್ನೆಗಳನ್ನು ಎತ್ತುತ್ತಾರೆ.

ನಿರ್ದೇಶಕ ಮಂಸೋರೆ ಅವರ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಮಂಸೋರೆ ಅವರು ತುಂಬ ಸತ್ವಶಾಲಿ ಸ್ತ್ರೀವಾದಿ. ಅವರಿಗೆ ಹೆಣ್ಣುಮಕ್ಕಳ ಮೇಲೆ ಗೌರವ ಇದೆ ಅಷ್ಟೇ ಅಲ್ಲ, ಹೆಣ್ಣುಮಕ್ಕಳ ಮನಸ್ಸನ್ನು ತಿಳಿದುಕೊಳ್ಳುವ ಕುತೂಹಲವೂ ಇದೆ. ಹಾಗಾಗಿಯೇ ಅವರು ‘ನಾತಿಚರಾಮಿ’ಯಂಥ ಸಿನಿಮಾ ಮಾಡಲು ಸಾಧ್ಯವಾಗಿದೆ. ಅವರಿಗಿರುವ ಸೂಕ್ಷ್ಮ ಸಂವೇದನೆ ಬೆಳೆಸಿಕೊಂಡವರು ತುಂಬ ಅಪರೂಪ.

ಅವರು ತುಂಬ ಉದಾರ ಮನಸ್ಸಿನ ನಿರ್ದೇಶಕ ಕೂಡ ಹೌದು. ಸ್ಕ್ರಿಪ್ಟ್‌ ಹಂತದಿಂದ ಶೂಟಿಂಗ್‌ ಸೆಟ್‌ನವರೆಗೂ ನಾವು ಅವರ ಜತೆ ತುಂಬ ಚರ್ಚಿಸುತ್ತಿದ್ದೆವು. ಅವರು ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆ ಪ್ರಕ್ರಿಯೆ ನನಗೆ ತುಂಬ ಇಷ್ಟವಾಯ್ತು. ತುಂಬ ಕಡಿಮೆ ಜನರ ಜತೆ ಇಂಥ ಚರ್ಚೆಗಳು ನಡೆಸಲು ಸಾಧ್ಯ.

‘ನಾತಿಚರಾಮಿ’ಯಲ್ಲಿ ಶ್ರುತಿ ಹರಿಹರನ್, ಸಂಚಾರಿ ವಿಜಯ್

ಇಂಥದ್ದೊಂದು ಪಾತ್ರ ಮಾಡುವಾಗ ನಟಿಯಾಗಿ ಒಂದಿಷ್ಟು ಸಿದ್ಧತೆ ಬೇಕಲ್ಲವೇ?

ಎಲ್ಲಕ್ಕಿಂತ ಮೊದಲು ನಾನು ಈ ಪಾತ್ರಕ್ಕೆ ಸರಂಡರ್‌ ಆದೆ. ಪಾತ್ರ ಏನು ಬಯಸುತ್ತಿದೆಯೋ ಅವುಗಳಿಗೆ ನನ್ನನ್ನು ನಾನು ಪೂರ್ತಿಯಾಗಿ ಒಪ್ಪಿಸಿಕೊಂಡೆ. ಆ ಶರಣಾಗತಿಯ ಪ್ರಕ್ರಿಯೆಯಲ್ಲಿಯೇ ಅರ್ಥೈಸಿಕೊಳ್ಳುವಿಕೆಯೂ ಇತ್ತು.

ಇಂಥ ಪಾತ್ರಗಳಲ್ಲಿ ನಟಿಸುವಾಗ ಒಂದು ಪ್ಯಾಟರ್ನ್‌ ಇರುವುದಿಲ್ಲ. ಇದು ಟಿಪಿಕಲ್‌ ಹೀರೊಯಿನ್‌ ಥರದ ಪಾತ್ರ ಅಲ್ಲವಾದ್ದರಿಂದ ನಾನು ಚೆನ್ನಾಗಿ ಕಾಣಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಮೊದಲೇ ಹೇಳಿದ ಹಾಗೆಯೇ ಆ ಪಾತ್ರ ನನ್ನ ಬದುಕಿಗೆ ತುಂಬ ಹತ್ತಿರವಾದ ಪಾತ್ರ. ಹಾಗಾಗಿ ಗೌರಿ ಮಹೇಶ್ ಪಾತ್ರದಲ್ಲಿ ನಟಿಸುವುದು ನನಗೆ ಹೆಚ್ಚು ಸುಲಭವಾಯಿತು.

ಈ ಪಾತ್ರಕ್ಕೆ ತುಂಬ ಸಟಲ್‌ ಆದ ಇಮೋಶನ್ಸ್‌ ಬೇಕಾಗಿತ್ತು. ಕೆಲವೊಮ್ಮೆ ನನಗೇ ಗೊಂದಲ ಆಗುತ್ತಿತ್ತು. ಇಷ್ಟು ಕಮ್ಮಿ ಎಕ್ಸ್‌ಪ್ರೆಶನ್ ಸಾಕಾಗುತ್ತಾ ಇಲ್ಲವಾ ಅಂತ. ಒಂದೇ ಒಂದು ನೋಟದಲ್ಲಿ ಅವಳು ತನ್ನ ಇಡೀ ಇಮೋಶನ್‌ ಅನ್ನು ದಾಟಿಸಬೇಕು. ಆದರೆ ನಿರ್ದೇಶಕ ಮಂಸೋರೆ ಮೊದಲೇ ‘ಜಾಸ್ತಿ ಡೈಲಾಗ್‌ಗಳು ಇರುವುದಿಲ್ಲ. ಬದಲಿಗೆ ನೀವು ಭಾವನೆಯನ್ನು ಕಣ್ಣಿನಲ್ಲಿಯೇ ತೋರಿಸಬೇಕಾಗುತ್ತದೆ’ ಎಂದಿದ್ದರು. ಕಣ್ಣಿನಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಮಾಡಬೇಕು ಎಂದರೆ ನೀವು ಪ್ರಾಮಾಣಿಕವಾಗಿ ಆ ಭಾವನೆಗಳನ್ನು ಅನುಭವಿಸಬೇಕಾಗುತ್ತದೆ. ಸೆಟ್‌ಗೆ ಹೋಗಿ ಆ ಪಾತ್ರದೊಳಗೆ ಪೂರ್ತಿಯಾಗಿ ಇಳಿದು ಪಾತ್ರವನ್ನೇ ಧ್ಯಾನಿಸಿ ನಟಿಸಿದ್ದೇನೆ.

‘ನಾತಿಚರಾಮಿ’ ಮಹಿಳೆ ತನ್ನ ಕುರಿತಾದ ಸಮಾಜದ ದೃಷ್ಟಿಕೋನವನ್ನು ಪ್ರಶ್ನಿಸುತ್ತದೆ; ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಇಂಥ ಪ್ರಶ್ನೆಗಳನ್ನು ಎತ್ತಿದ್ದೀರಿ. ಮಹಿಳೆ ತನಗೆ ಅನಿಸಿದ್ದನ್ನು ಮುಕ್ತವಾಗಿ ಹೇಳುವ ವಾತಾವರಣ ನಮ್ಮ ಸಮಾಜದಲ್ಲಿ ಇದೆ ಅನಿಸುತ್ತದೆಯೇ?

ನನಗೆ ‘ಮೀ ಟೂ’ ಅಭಿಯಾನದಲ್ಲಿ ಆಗಿರುವ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಸಮಾಜ ಹೆಣ್ಣಿನ ಮನಸ್ಸನ್ನು ಕೇಳಿಸಿಕೊಳ್ಳುವುದಕ್ಕೆ ಇನ್ನೂ ಸಿದ್ಧವಾಗಿಲ್ಲ ಎಂದೇ ಅನಿಸುತ್ತದೆ. ಸಮಾಜ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಸಿದ್ಧವಾಗಿಲ್ಲ ಎಂದಾಕ್ಷಣ ಹೆಣ್ಣು ಬಾಯಿ ಮುಚ್ಚಿಕೊಂಡಿರಬೇಕು ಎಂದು ಖಂಡಿತ ಅಲ್ಲ. ಬದಲಾವಣೆ ಅನ್ನುವುದು ಆಗಲೇ ಬೇಕು. ಅದೂ ಹೆಣ್ಣಿನ ಮೂಲಕ, ಅವಳ ಮಾತಿನ ಮೂಲಕವೇ ಆಗಬೇಕು. ಅದು ಖಂಡಿತ ಆಗಿಯೇ ಆಗುತ್ತದೆ. ಆ ಸಕಾರಾತ್ಮಕ ನಂಬಿಕೆಯಲ್ಲಿಯೇ ನಾನು ಈಗಲೂ ಇದ್ದೇನೆ. ಈ ಸಿನಿಮಾವೂ ಅಂಥ ಹೆಣ್ಣಿನ ಪರವಾಗಿಯೇ ಧ್ವನಿಯನ್ನು ಎತ್ತುತ್ತದೆ.

ನಿಜ ಹೇಳಬೇಕು ಎಂದರೆ ನನಗೆ ಮತ್ತು ನಿರ್ದೇಶಕ ಮಂಸೋರೆ ಅವರಿಗೂ ‘ನಾತಿಚರಾಮಿ‘ ಸಿನಿಮಾದ ಕುರಿತು ಒಂಚೂರು ಭಯವೂ ಇದೆ. ಈ ಸಿನಿಮಾದ ಪಾತ್ರ ನನ್ನ ವೈಯಕ್ತಿಕ ಜೀವನದ ಸಂದರ್ಭದ ಮೇಲೆ ಬೀರಬಹುದಾದ ಪರಿಣಾಮದ ಕುರಿತು ಇರುವ ಭಯ ಅದು. ನಾನು ಯಾಕೆ ಹೀಗೆ ಹೇಳ್ತಿದ್ದೀನಿ ಎಂಬುದು ನೀವು ಸಿನಿಮಾ ನೋಡಿದ ಮೇಲೆ ತಿಳಿಯುತ್ತದೆ.ಪ್ರಗತಿಪರ ಮನಸ್ಸುಳ್ಳವರು ಖಂಡಿತವಾಗಿಯೂ ಈ ಸಿನಿಮಾವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆದರೆ ಹೆಣ್ಣು ದಿಟ್ಟವಾಗಿ ಮಾತನಾಡುವುದನ್ನು ವಿರೋಧಿಸುವಂಥ ಮನಸ್ಥಿತಿಯ ವ್ಯಕ್ತಿಗಳಿಗೆ ‘ನಾತಿಚರಾಮಿ’ ಸಿನಿಮಾದಲ್ಲಿ ತೊಂದರೆಗಳು ಕಾಣಿಸಬಹುದು. ಆದರೆ ಏನೂ ಮಾಡಲು ಸಾಧ್ಯವಿಲ್ಲ. ಅದು ನಡೆಯುತ್ತಲೇ ಇರುತ್ತದೆ.

ನಿರ್ದೇಶನದಲ್ಲಿಯೂ ನಿಮಗೆ ಒಲವಿದೆ. ಯಾವಾಗ ನಿರ್ದೇಶಕಿಯಾಗುತ್ತೀರಿ?

ಇನ್ನೂ ಕಥೆ ಬರೆಯುತ್ತಿದ್ದೇನೆ. ಮೊದಲು ಒಂದು ಕಿರುಚಿತ್ರ ಮಾಡಲು ಸಿದ್ಧತೆ ನಡೆಸಿದ್ದೇನೆ. ಇನ್ನೊಂದೆರಡು ಮೂರು ತಿಂಗಳಲ್ಲಿ ಕಿರುಚಿತ್ರ ಮಾಡುತ್ತೇನೆ. ನಂತರ ಪೂರ್ಣಪ್ರಮಾಣದ ನಿರ್ದೇಶಕಿ ಆಗುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.