ADVERTISEMENT

ಶ್ಯಾನೆ ಟಾಪ್‌ ಆಗವ್ಳೆ...

​ಪ್ರಜಾವಾಣಿ ವಾರ್ತೆ
Published 21 ಮೇ 2019, 9:44 IST
Last Updated 21 ಮೇ 2019, 9:44 IST
ಅಧಿತಿ ಪ್ರಭುದೇವ
ಅಧಿತಿ ಪ್ರಭುದೇವ   

‘ಶ್ಯಾನೆ ಟಾಪ್‌ ಆಗವ್ಳೆ ನಮ್‌ ಹುಡುಗಿ ಶಾನೆ ಟಾಪ್‌ ಆಗವ್ಳೆ...’ ಇದು ಜೂನ್‌ ಅಥವಾ ಜುಲೈನಲ್ಲಿ ತೆರೆಗೆ ಬರಲಿರುವ‘ಸಿಂಗ’ ಸಿನಿಮಾದ ಹಾಡು. ಈ ಹಾಡಿಗೆ ಚಿರು ಸರ್ಜಾ ಜತೆಗೆ ನೀಳಕಾಯ ದೇಹ ಸಿರಿಯಿಂದಸೊಂಟಬಳುಕಿಸುವ ಸುಂದರಿ ಅದಿತಿ ಪ್ರಭುದೇವ ಅವರು ಹುಡುಗರ ಎದೆಯಲ್ಲಿಪ್ರೇಮ ಜ್ವರ ಹರಡಬಹುದು.ಈ ಹಾಡು ಸಿನಿಮಾ ಬಿಡುಗಡೆಗೂ ಮೊದಲೇ ವೈರಲ್‌ ಕೂಡ ಆಗಿದೆ. ಅದಿತಿ ಅವರು ತಮ್ಮ ಮೊಬೈಲ್‌ ಕಾಲರ್‌ ಟೋನ್‌ಗೂ ಇದೇ ಹಾಡನ್ನು ಇಟ್ಟುಕೊಂಡಿದ್ದಾರೆ. ‘ಶೂಟಿಂಗ್‌ ಆರಂಭಿಸುವ ಮೊದಲೇ ಈ ಹಾಡಿನ ಮೇಲೆ ತುಂಬಾ ಹೋಪ್ಸ್‌ ಇಟ್ಟುಕೊಂಡಿದ್ದೆವು. ಇದರಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದೇನೆ’ ಎಂದು ನಗುತ್ತಲೇಅದಿತಿ ‘ಸಿನಿಮಾ ಪುರವಣಿ’ಯೊಂದಿಗೆ ಮಾತಿಗಿಳಿದರು.

‘ನಾವು ಯಾರಿಗೆ ಕಮ್ಮಿ ಇದ್ದೀವಿ. ಒಳ್ಳೆಯ ಹೈಟು, ಪರ್ಸಾನಾಲಿಟಿ ಮೆಂಟೈನ್‌ ಮಾಡಿರ್ತೀವಿ. ಒಳ್ಳೆಯ ಭಾಷೆಮಾತಾಡ್ತೀವಿ. ಆಟಿಟ್ಯೂಡ್‌ ತೋರಿಸುವುದಿಲ್ಲ. ಮನೆ ಮಗಳಂತೆ ಇರ್ತೀವಿ. ನಮ್ಮ ಕನ್ನಡದ ಹುಡುಗಿಯರಿಗೆ ನಿರ್ದೇಶಕರು ಹೆಚ್ಚು ಅವಕಾಶ ಕೊಡಬೇಕು. ದೊಡ್ಡ ದೊಡ್ಡ ಸಿನಿಮಾಗಳಿಗೆನಮ್ಮ ಚಿತ್ರರಂಗದ ನಿರ್ದೇಶಕರು ಏಕೆ ಬೇರೆ ಭಾಷೆಯ ನಟಿಯರನ್ನು ಕರೆತರಬೇಕು ಸರ್‌?’ ಎನ್ನುವ ಪ್ರಶ್ನೆಯನ್ನು ಅವರು ಮುಂದಿಡುತ್ತಾರೆ. ‘ಹಾಗೆ ನೋಡಿದರೆ ಸದ್ಯಕ್ಕೆ ನಾನು ತುಂಬಾ ಲಕ್ಕಿ. ಒಳ್ಳೊಳ್ಳೆ ಪಾತ್ರಗಳು ಸಿಗುತ್ತಿವೆ’ ಎನ್ನುವ ಮಾತನ್ನು ಹೇಳಲು ಅವರು ಮರೆಯಲಿಲ್ಲ.

ಕಿರುತೆರೆಯಿಂದಲೇ ತನ್ನ ಪ್ರತಿಭೆ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಟ್ಟ ಈ ನಟಿಯಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.ಸದ್ಯ ಏಕ ಕಾಲಕ್ಕೆ ರಂಗನಾಯಕಿ ಮತ್ತು ಬ್ರಹ್ಮಚಾರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ದಯಾಳ್‌ ಪದ್ಮನಾಭ್‌ ನಿರ್ದೇಶನದಲ್ಲಿ ಚಿತ್ರೀಕರಣವಾಗುತ್ತಿರುವ ‘ರಂಗನಾಯಕಿ’ಯೂ ನಾಯಕಿ ಪ್ರಧಾನ ಸಿನಿಮಾ. ಇದರಲ್ಲಿ ಅತ್ಯಾಚಾರಕ್ಕೆ ಒಳಗಾಗುವ ಯುವತಿಯೊಬ್ಬಳು ಆಘಾತದಿಂದ ಹೇಗೆ ಹೊರಬರುತ್ತಾಳೆ, ಬದುಕನ್ನು ಹೇಗೆ ಎದುರಿಸುತ್ತಾಳೆ ಎನ್ನುವ ಕಥಾಹಂದರ ಹೊಂದಿದೆಯಂತೆ. ಈ ಸಿನಿಮಾ ಸಮಾಜಕ್ಕೊಂದು ಗಟ್ಟಿ ಸಂದೇಶ ನೀಡಲಿದೆ ಎನ್ನುವುದು ಅದಿತಿ ಅಭಿಮತ. ಇನ್ನೂ ನಿರ್ದೇಶಕ ಚಂದ್ರಮೋಹನ್‌ ಅವರ ನಿರ್ದೇಶನದ ‘ಬ್ರಹ್ಮಚಾರಿ’ ಸಿನಿಮಾದಲ್ಲಿ ಫುಲ್‌ ಕಾಮಿಡಿ, ಜತೆಗೆ ಒಂದು ಒಳ್ಳೆಯ ಸಂದೇಶ ನೀಡುವ ಜತೆಗೆ ಗುಡ್‌ ಎಂಟರ್‌ಟೈನ್‌ ಮೆಂಟ್‌ ಇರಲಿದೆಯಂತೆ.

ADVERTISEMENT

‘ಬಜಾರ್‌’ ಸಿನಿಮಾ ಒಳ್ಳೆಯ ಟಾಕ್‌ ಹುಟ್ಟುಹಾಕಿತು. ಆ ಸಿನಿಮಾ ಸಕ್ಸಸ್‌ ಕೊಡದಿದ್ದರೆ ನನಗೆ ಇಷ್ಟೊಂದು ಅವಕಾಶಗಳೇ ಸಿಗುತ್ತಿರಲಿಲ್ಲ. ಮನೆಯಲ್ಲೇ ಕೂತಿರಬೇಕಾಗುತ್ತಿತ್ತು. ಒಳ್ಳೆಯ ಓಪನಿಂಗ್‌ ಸಿಕ್ಕಿತು. ‌ಹೆಸರು ತಂದುಕೊಟ್ಟಿತು. ಕನ್ನಡದ ಒಬ್ಬ ನಟಿ ಇದ್ದಾಳೆ. ಅವಳನ್ನು ನಂಬಿ, ಅವಕಾಶ ಕೊಡಬಹುದು ಎನ್ನುವುದನ್ನು ಈ ಸಿನಿಮಾ ತೋರಿಸಿಕೊಟ್ಟಿತು. ‘ಬಜಾರ್‌’ನ ಹೀರೊ ಹೊಸ ಹುಡುಗನಾದರೂ ಒಳ್ಳೆಯ ಪರ್ಫಾಮೆನ್ಸ್‌ ನೀಡಿದ್ದಾರೆ.ನಿರ್ದೇಶಕ ಸಿಂಪಲ್‌ ಸುನಿ ಅವರೂ ಅಷ್ಟೇ ಒಳ್ಳೆಯ ಸಿನಿಮಾ ಕೊಟ್ಟರು.ಸೂಪರ್‌ ಸ್ಟಾರ್‌ಗಳ ಸಿನಿಮಾವೇ ಹೆಚ್ಚು ದಿನ ನಡೆಯುತ್ತಿಲ್ಲ. ಒಂದೇ ವಾರಕ್ಕೆ ಥಿಯೇಟರ್‌ಗಳಿಂದ ಹೋಗುತ್ತಿವೆ. ಅಂಥದರಲ್ಲಿ ನಮ್ಮ ‘ಬಜಾರ್‌’ ರಿಲೀಸ್‌ ಆದ ಒಂದೇ ದಿನಕ್ಕೆ ಸೋರಿಕೆಯಾಗಿ ಪೈರೆಸಿಗೆ ಸಿಕ್ಕಿತುಎನ್ನುವ ಬೇಸರವನ್ನು ಅದಿತಿ ತೋಡಿಕೊಂಡರು.

‘ಸಿಂಗ’ ಚಿತ್ರೀಕರಣ ಮುಗಿದ್ದಿದ್ದು, ಡಬ್ಬಿಂಗ್‌ ಕೂಡ ಆಗಿದೆಯಂತೆ. ‘ತೋತಾಪುರಿ’ ಕೂಡ ನೂರು ದಿನಗಳ ಚಿತ್ರೀಕರಣ ಪೂರೈಸಿದ್ದು, 40 ದಿನಗಳ ಶೂಟಿಂಗ್‌ ಬಾಕಿ ಇದೆಯಂತೆ. ಈ ನಾಲ್ಕು ಸಿನಿಮಾಗಳಲ್ಲಿ ನಾಲ್ಕು ವಿಭಿನ್ನ ಪಾತ್ರಗಳು ಸಿಕ್ಕಿವೆ. ಇವು ಸಿನಿ ಕೆರಿಯರ್‌ನಲ್ಲಿ ಇನ್ನಷ್ಟು ಒಳ್ಳೆಯ ಪಾತ್ರಗಳನ್ನು ಕೊಡಲಿವೆ ಎನ್ನುವುದನ್ನು ಅದಿತಿ ಅವರ ನಿರೀಕ್ಷೆ.

ಬರೀ ಗ್ಲಾಮರ್‌ಗೆ ಸೀಮಿತವಾದ ಮತ್ತು ಒಂದೇ ರೀತಿಯ ಪಾತ್ರಗಳನ್ನು ಮಾಡಲು ನನಗೆ ಬೋರು. ವಿಭಿನ್ನ ಪಾತ್ರಗಳನ್ನು ಬಯಸುತ್ತಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್‌ಗಳನ್ನು ಎದುರು ನೋಡುತ್ತಿದ್ದೇನೆ. ಬೇರೆಯ ಭಾಷೆಗಳಲ್ಲಿ ನಟಿಸುವ ಅವಕಾಶಗಳು ಇದ್ದರೂ ಹೋಗಲು ಮನಸಿಲ್ಲ. ಕನ್ನಡದಲ್ಲೇ ನೆಲೆ ನಿಲ್ಲಬೇಕು. ಇನ್ನು ಐದಾರು ವರ್ಷಗಳು ನಮ್ಮವು. ಅಷ್ಟರೊಳಗೆ ಎಷ್ಟು ಸಾಧ್ಯವೋ ಅಷ್ಟೂ ಕನ್ನಡ ಸಿನಿಮಾಗಳಲ್ಲೇ ನಟಿಸಬೇಕು ಎಂದುಕೊಂಡಿದ್ದೇನೆ ಎಂದು ಬೆಣ್ಣೆದೋಸೆ ಹೊಯ್ದಂತೆಯೇ ಮಾತು ಆಡಿದರು ಮೂಲ ದಾವಣಗೆರೆಯವರಾದ ಅದಿತಿ ಪ್ರಭುದೇವ.

ಅದಿತಿ ಅವರು ನಡೆದು ಬಂದ ಹಾದಿಯ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿರುವುದು ಅವರ ಮಾತಿನಲ್ಲೇ ಕಾಣಿಸುತ್ತದೆ. ಸೀರಿಯಲ್‌ ಎಂದರೆ ಕೆಲವರು ಕಡೆಗಣಿಸುವಂತೆ ಮಾತನಾಡುತ್ತಾರೆ. ನಮ್ಮ ತಂದೆ–ತಾಯಿ ಚಪ್ಪಲಿ ಹೊಲೆಯುವವರೇ ಆಗಲಿ, ಬಟ್ಟೆ ಹೊಲೆಯುವವರೇ ಆಗಿರಲಿ. ನಮ್ಮ ತಂದೆತಾಯಿಯನ್ನು ಯಾರಾದರೂ ಬೈದರೆ, ಹೀಗಳದರೆ ಸಿಟ್ಟು ಬರುತ್ತದೆ. ಸೀರಿಯಲ್‌ ನನಗೆ ಅನ್ನ ಕೊಟ್ಟಿದೆ. ಆ್ಯಕ್ಟಿಂಗ್‌ ಹೇಳಿಕೊಟ್ಟಿದೆ. ಸೀರಿಯಲ್‌ ಮತ್ತು ಟಿ.ವಿ ನನಗೆ ಶಾಲೆ ಇದ್ದಂತೆ.ದರ್ಶನ್‌, ಯಶ್‌, ರಾಧಿಕಾ ಪಂಡಿತ್‌, ರಚಿತಾ ಅವರಾದಿಯಾಗಿ ಬಹುತೇಕ ತಾರೆಯರು ಕಿರುತೆರೆಯ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ. ಅದು ರಂಗಭೂಮಿ ಇದ್ದಂತೆಎನ್ನುತ್ತಾರೆ ಅದಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.