ರಾಷ್ಟ್ರಪತಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಅಮೀರ್‌ಖಾನ್ ಮುಖಾಮುಖಿಯಾದರು
ಚಿತ್ರಕೃಪೆ: siddaramaiah
ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಿದ್ದು, ರಾಷ್ಟ್ರಪತಿ ಭವನದಲ್ಲಿ ಆಕಸ್ಮಿಕವಾಗಿ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಭೇಟಿಯಾಗಿದ್ದಾರೆ.
ಅಮೀರ್ ಅವರನ್ನು ಭೇಟಿಯಾದ ಬಗ್ಗೆ ಸಾಮಾಜಿಕ ಮಾಧ್ಯಕ ಎಕ್ಸ್‌ನಲ್ಲಿ ಪೋಟೊ ಹಂಚಿಕೊಂಡಿದ್ದಾರೆ. ‘ದೆಹಲಿಯಲ್ಲಿ ಇಂದು (ಮಂಗಳವಾರ) ರಾಷ್ಟ್ರಪತಿಗಳ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ವೇಳೆ ಬಾಲಿವುಡ್‌ನ ಸಂವೇದನಾಶೀಲ ನಟ, ನಿರ್ದೇಶಕ ಅಮೀರ್ ಖಾನ್ ಅವರು ಆಕಸ್ಮಿಕವಾಗಿ ಎದುರಾದರು. ಸಿನಿಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಧನಾತ್ಮಕ ಬದಲಾವಣೆಗೆ ತುಡಿಯುವ ಅವರೊಳಗಿನ ಸಮಾಜಮುಖಿ ವ್ಯಕ್ತಿತ್ವ ನಟನೆಯನ್ನು ಮೀರಿ ಜನರಿಗೆ ಅವರನ್ನು ಹೆಚ್ಚು ಆಪ್ತವಾಗಿಸಿದೆ. ಅವರ ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಹಾರೈಸಿ, ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದೆ’ ಎಂದು ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಅಮೀರ್ ಖಾನ್ ಅವರೊಂದಿಗೆ ಮುಗುಳ್ನಗೆಯೊಂದಿಗೆ ಕೈಕುಲುಕುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಸಿದ್ದರಾಮಯ್ಯ ಅವರು ದೆಹಲಿ ಭೇಟಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನೂ ಭೇಟಿಯಾಗಿದ್ದಾರೆ.
ಅಮೀರ್ ಖಾನ್ ನಟನೆಯ ‘ಸೀತಾರೇ ಜಮೀನ್ ಪರ್’ ಚಿತ್ರ ಇತ್ತೀಚೆಗೆ ತೆರೆಕಂಡಿದ್ದು, ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರ 2007ರಲ್ಲಿ ಬಿಡುಗಡೆಯಾಗಿದ್ದ ‘ತಾರೇ ಜಮೀನ್ ಪರ್’ ಸಿನಿಮಾದ ಸೀಕ್ವೆಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.