ADVERTISEMENT

ಪಂಜಾಬಿ ಗಾಯಕ ಮೂಸೆವಾಲಾ ಹತ್ಯೆ ಬೆನ್ನಲ್ಲೇ ನಟ ಸಲ್ಮಾನ್‌ ಖಾನ್ ಭದ್ರತೆ ಹೆಚ್ಚಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2022, 2:51 IST
Last Updated 1 ಜೂನ್ 2022, 2:51 IST
ಸಲ್ಮಾನ್‌ ಖಾನ್
ಸಲ್ಮಾನ್‌ ಖಾನ್    

ಮುಂಬೈ: ಪಂಜಾಬಿ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.

‘ಬೆದರಿಕೆ ಮಟ್ಟವನ್ನು ವಿಶ್ಲೇಷಿಸಿದ ಬಳಿಕ ಸಲ್ಮಾನ್‌ ಖಾನ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸುರಕ್ಷತೆ ದೃಷ್ಠಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಾವು ಸಲ್ಮಾನ್ ಖಾನ್‌ ಅವರ ಒಟ್ಟಾರೆ ಭದ್ರತೆಯನ್ನು ಹೆಚ್ಚಿಸಿದ್ದೇವೆ. ರಾಜಸ್ಥಾನದ ಗ್ಯಾಂಗ್‌ನಿಂದ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಸಲ್ಮಾನ್ ಅವರ ಅಪಾರ್ಟ್‌ಮೆಂಟ್ ಸುತ್ತ ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್‌ ಖಾನ್ ಅವರನ್ನು ಹತ್ಯೆ ಮಾಡಲು ಬಿಷ್ಣೋಯಿ ಸಂಚು ರೂಪಿಸಿದ್ದರು. ಕೃಷ್ಣ ಮೃಗವನ್ನು ಪವಿತ್ರ ಜೀವಿ ಎಂಬುದು ಬಿಷ್ಣೋಯ್‌ಗಳ ನಂಬಿಕೆಯಾಗಿದೆ. ಸಲ್ಮಾನ್, ಕೃಷ್ಣ ಮೃಗ ಬೇಟೆ ಪ್ರಕರಣದ ಆರೋಪಿಯಾಗಿರುವುದರಿಂದ ಅವರಿಗೆ ಹಲವು ಬಾರಿ ಬೆದರಿಗೆ ಹಾಕಲಾಗಿತ್ತು.

ADVERTISEMENT

20018ರಲ್ಲಿ ನ್ಯಾಯಾಲಯದ ಹೊರಗೆ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಅವರನ್ನು ಕೊಲ್ಲುತ್ತೇವೆ ಎಂದು ಹೇಳಿದ್ದರು.

ಬಿಷ್ಣೋಯಿಅವರ ನಿಕಟವರ್ತಿ ರಾಹುಲ್ ಅಲಿಯಾಸ್ ಸುನ್ನಿಯನ್ನು 2020ರಲ್ಲಿ ಕೊಲೆ ಆರೋಪದಲ್ಲಿ ಬಂಧಿಸಲಾಯಿತ್ತು. ಅವರು ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಐವರು ಆರೋಪಿಗಳ ಬಂಧನ: ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಸೋಮವಾರ ಐವರನ್ನು ಡೆಹ್ರಾಡೂನ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.