ADVERTISEMENT

ಮೂಕಿಚಿತ್ರ ‘ಪುಷ್ಪಕ್’ ಇಂದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 19:30 IST
Last Updated 3 ಡಿಸೆಂಬರ್ 2020, 19:30 IST
ಪುಷ್ಪಕ್‌ ಚಿತ್ರದಲ್ಲಿ ಕೃತಿಕಾ, ಓಂ ಪ್ರಕಾಶ್‌ ನಾಯಕ್‌
ಪುಷ್ಪಕ್‌ ಚಿತ್ರದಲ್ಲಿ ಕೃತಿಕಾ, ಓಂ ಪ್ರಕಾಶ್‌ ನಾಯಕ್‌   

ಬಹಳ ಸಮಯದ ನಂತರ ಮೂಕಿ ಚಿತ್ರ ‘ಪುಷ್ಪಕ್’ ಒಟಿಟಿಯಲ್ಲಿ ಇಂದು (ಡಿ.4) ‘ಓಂ ಸಿನಿಮಾ ವರ್ಲ್ಡ್‌’ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಮಾತಿನ ಸಹಾಯವೇ ಇಲ್ಲದೆ ಕಥೆ ಅರ್ಥವಾಗುವಂತೆ ನಿರ್ದೇಶಕ ಓಂ ಪ್ರಕಾಶ್‍ ನಾಯಕ್ ನಿರೂಪಿಸಿದ್ದಾರಂತೆ. ಚಿತ್ರದ ಕಥೆ, ಚಿತ್ರಕಥೆ ಇವರದ್ದೇ. ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಇವರು ಲೇಖಕಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌ ಪುತ್ರ.

ಚಿತ್ರದ ನಾಯಕ ಫೋಟೋಗ್ರಾಫರ್, ಶ್ರೀಮಂತ ಕುಟುಂಬದ ಯುವತಿಯನ್ನು ಆತ ಮನದಲ್ಲೇ ಪ್ರೀತಿಸುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಮಾಣಿಯ ಮೂಲಕ ಪ್ರೇಮಪತ್ರ ಬರೆದು ಕಳುಹಿಸುತ್ತಾನೆ. ಹೋಟೆಲ್ ಮಾಣಿ ಅವರ ಪ್ರೀತಿಗೆ ರಾಯಭಾರಿ. ಆದರೆ, ಆ ಮಾಣಿಗೆ ನಾಯಕಿ ಮೇಲೆ ಪ್ರೀತಿ ಹುಟ್ಟಿಬಿಡುತ್ತದೆ. ಕಥೆ ಸಾಗುತ್ತಾ ಕ್ಲೈಮ್ಯಾಕ್ಸ್‌ ಏನಾಗುತ್ತದೆ ಎನ್ನುವುದು ಚಿತ್ರದ ಕುತೂಹಲ.

ADVERTISEMENT

ಮಹದೇಶ್ವರ ಎಂಟರ್‌ಟೈನರ‍್ಸ್‌ ಬ್ಯಾನರ್‌ನಡಿ ಓಂ ಪ್ರಕಾಶ್‍ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೃತಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತಾರಾಗಣದಲ್ಲಿ ಚಂದ್ರು, ಅವಿನಾಶ್ ಭಾರದ್ವಜ್‌,ಆರ್.ಎಂ. ನಾಗೇಂದ್ರರಾವ್, ಸವಿತಾ ಇದ್ದಾರೆ. ವಿಶ್ವನಾಥ್ ಛಾಯಾಗ್ರಹಣ, ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.