ADVERTISEMENT

‘ದೇವರು ರುಜು ಮಾಡಿದನು’: ಸಿಂಪಲ್‌ ಸುನಿಯ ಹೊಸ ಪಯಣ!

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 23:30 IST
Last Updated 15 ಡಿಸೆಂಬರ್ 2025, 23:30 IST
ವೀರಾಜ್‌, ದಿವಿತಾ ರೈ 
ವೀರಾಜ್‌, ದಿವಿತಾ ರೈ    

‘ಗತವೈಭವ’ ಸಿನಿಮಾದ ಬಿಡುಗಡೆ ಬೆನ್ನಲ್ಲೇ ತಮ್ಮ ಮುಂದಿನ ಸಿನಿಮಾಗಳ ಬಿಡುಗಡೆಗೆ ನಿರ್ದೇಶಕ ಸಿಂಪಲ್‌ ಸುನಿ ತಯಾರಿ ಆರಂಭಿಸಿದ್ದಾರೆ. ಶೀರ್ಷಿಕೆ ಮೂಲಕವೇ ಕುತೂಹಲ ಹುಟ್ಟಿಸಿರುವ ಸುನಿ ನಿರ್ದೇಶನದ ‘ದೇವರು ರುಜು ಮಾಡಿದನು’ ಸಿನಿಮಾದ ಮೊದಲ ಹಾಡು ‘ಹ್ಯಾಪಿ ಬರ್ತ್‌ಡೇ’ ಇತ್ತೀಚೆಗೆ ಬಿಡುಗಡೆಯಾಗಿದೆ. 

ತಮ್ಮ ಸಿನಿಮಾಗಳ ಮೂಲಕ ಚಂದನವನಕ್ಕೆ ಹೊಸ ಕಲಾವಿದರನ್ನು ಪರಿಚಯಿಸುತ್ತಾ ಬಂದಿರುವ ಸುನಿ, ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದ ವೀರಾಜ್‌, ಅವರಿಗೆ ಜೋಡಿಯಾಗಿ ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ಅವರನ್ನು ತೆರೆಗೆ ತರುತ್ತಿದ್ದಾರೆ. ಇವರೆಲ್ಲರಿಗೂ ಇದು ಚೊಚ್ಚಲ ಸಿನಿಮಾ. ಜೊತೆಗೆ ತಮ್ಮ ಸಿನಿಮಾಗಳಲ್ಲಿ ಕಥೆಯ ಜೊತೆಗೆ ಹಾಡಿಗೂ ಪ್ರಾಮುಖ್ಯತೆ ನೀಡುವ ಸುನಿ, ಮೊದಲ ಬಾರಿಗೆ ಮ್ಯೂಸಿಕಲ್‌ ಜರ್ನಿ ಕಥೆ ಹೊಂದಿರುವ ಸಿನಿಮಾ ಬರೆದಿದ್ದಾರೆ. ಅವರ ಈ ಹೊಸ ಸಿನಿಮಾದಲ್ಲಿ 12 ಹಾಡುಗಳಿವೆ.    

ಸಿನಿಮಾ ಕುರಿತು ಮಾಹಿತಿ ನೀಡಿದ ಸುನಿ, ‘ನನ್ನ ಅಥವಾ ನಾಯಕ ವೀರಾಜ್‌ ಜನ್ಮದಿನದಂದು ಈ ಹಾಡು ಬಿಡುಗಡೆಗೆ ಯೋಚಿಸಿದ್ದೆವು. ಆದರೆ ಆಗಲಿಲ್ಲ. ಈಗ ಚಿತ್ರತಂಡದ ಯಾರ ಜನ್ಮದಿನವೂ ಇಲ್ಲದ ಸಂದರ್ಭದಲ್ಲಿ ‘ಹ್ಯಾಪಿ ಬರ್ತ್‌ಡೇ’ ಹಾಡು ಬಿಡುಗಡೆಯಾಗಿದೆ. ನಾಯಕನ ಮ್ಯೂಸಿಕಲ್‌ ಪಯಣವೇ ಈ ಸಿನಿಮಾ. ಇದರಲ್ಲಿ ಒಟ್ಟು 12 ಹಾಡುಗಳಿವೆ. ಇಷ್ಟೊಂದು ಹಾಡುಗಳಿರುವ ನನ್ನ ಮೊದಲ ಸಿನಿಮಾವಿದು. ಈ ಹಾಡನ್ನೇ ಮೊದಲು ಬಿಡುಗಡೆ ಮಾಡಿರುವುದಕ್ಕೆ ಕಾರಣವಿದೆ. ಐಪಿಎಲ್‌ ಸೇರಿದಂತೆ ನಾನಾ ಕಾರಣಗಳಿಂದ ಈ ಸಿನಿಮಾ ಮುಂದಕ್ಕೆ ಹೋದರೂ, ಯಾರದೇ ಜನ್ಮದಿನ ಬಂದರೂ ಈ ಹಾಡು ಓಡುತ್ತಿರುತ್ತದೆ. ಸಿನಿಮಾದೊಳಗೆ ಈ ಹಾಡು ಬೇರೆ ರೀತಿಯಲ್ಲಿ ಬರಲಿದೆ. ಚಿತ್ರದ ನಾಯಕ ವೀರಾಜ್‌ ಅದ್ಭುತ ನೃತ್ಯಗಾರ. ಸಿನಿಮಾವೇ ಒಂದು ಭಾಷೆ. ಇದಕ್ಕೆ ಸ್ಫೂರ್ತಿ ಎಂಬಂತೆ ಈ ಹಾಡನ್ನು ಹಾಡಿದ ಆಂಥೋನಿ ದಾಸ್‌ ಅವರು ಹಾಡು ಬಿಡುಗಡೆಗೂ ಬಂದಿದ್ದಾರೆ’ ಎಂದರು.  

ADVERTISEMENT

ಈ ಹಾಡನ್ನು ನಾಗಾರ್ಜುನ ಶರ್ಮಾ ಬರೆದಿದ್ದು, ಖ್ಯಾತ ಗಾಯಕ ಆಂಥೋನಿ ದಾಸ್ ಹಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡಿನಲ್ಲಿ ವೀರಾಜ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನೂ ಸುನಿ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಚಿತ್ರಗ್ರಹಣ ಚಿತ್ರಕ್ಕಿದ್ದು, ಗ್ರೀನ್ ಹೌಸ್ ಮೂವೀಸ್ ಬ್ಯಾನರ್‌ನಡಿ ಗೋವಿಂದ್ ರಾಜ್ ಸಿಟಿ  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾದ ಶೇ 65ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಐಪಿಎಲ್‌ ಬಳಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ.
–ವೀರಾಜ್‌ ನಟ  
ನನ್ನ ಸಿನಿಪಯಣದಲ್ಲೊಂದು ವಿಶೇಷ ಸಿನಿಮಾವಿದು. ಚಿತ್ರದ ಫೈಟ್ಸ್‌ ಮತ್ತು ಹಾಡಿನ ಚಿತ್ರೀಕರಣ ಬಾಕಿ ಇದೆ. ಒಂದು ಪ್ಯಾಥೋ ಹಾಡಿನ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ. ಮುಂದಿನ ಹಂತದ ಶೂಟಿಂಗ್‌ಗಾಗಿ ವೀರಾಜ್‌ ವಿದ್ಯಾರ್ಥಿಯ ಪಾತ್ರ ಮಾಡಬೇಕಿದ್ದು ಇದಕ್ಕಾಗಿ ತೂಕ ಇಳಿಸಿಕೊಳ್ಳಲಿದ್ದಾರೆ.
–ಸಿಂಪಲ್‌ ಸುನಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.