ADVERTISEMENT

ಐಸಿಯುನಿಂದಲೇ ಹೆಬ್ಬೆರಳು ತೋರಿ ಚೆನ್ನಾಗಿದ್ದೇನೆ ಎಂದ ಗಾಯಕ ಎಸ್‌ಪಿಬಿ

ಏಜೆನ್ಸೀಸ್
Published 14 ಆಗಸ್ಟ್ 2020, 18:02 IST
Last Updated 14 ಆಗಸ್ಟ್ 2020, 18:02 IST
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌.ಪಿ. ಬಾಲಸುಬ್ರಹ್ಮಣ್ಯಂ
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌.ಪಿ. ಬಾಲಸುಬ್ರಹ್ಮಣ್ಯಂ   

ಬೆಂಗಳೂರು: ಕೋವಿಡ್-19 ಸೋಂಕಿನಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಎಡಗೈ ಹೆಬ್ಬೆರಳನ್ನು ತೋರಿಸುವ ಮೂಲಕ ತಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಕಳೆದ ಆಗಸ್ಟ್ 5ರಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಸಂಜೆ ಅವರನ್ನು ಐಸಿಯುಗೆ ದಾಖಲಿಸಲಾಗಿದೆ‌ ಎಂದು ಆಸ್ಪತ್ರೆಯು ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ‌ಮಾಡಿತ್ತು. ಇದು ಅವರ ಅಭಿಮಾನಿಗಳಿಗೆ ಆತಂಕ ತರಿಸಿತ್ತು. ನಟ, ನಟಿಯರು ಎಸ್‌ಪಿಬಿ ಶೀಘ್ರ ಗುಣಮುಖರಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದರು.

ಬಾಲಸುಬ್ರಹ್ಮಣ್ಯಂ ಅವರು ಥಮ್ಸ್ ಅಪ್‌ ಮೂಲಕ ತಾನು ಆರೋಗ್ಯದಿಂದ‌ ಇರುವುದಾಗಿ ಹೇಳುತ್ತಿರುವ ಫೋಟೊ ಮತ್ತು ವಿಡಿಯೊ ತುಣುಕು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ.

ADVERTISEMENT

‘ಕಳೆದ ಎರಡು– ಮೂರು ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಶೀತ ಮತ್ತು ಜ್ವರ ಕೂಡ ಕಾಣಿಸಿಕೊಂಡಿತು. ಇದರ ಬಗ್ಗೆ ನಾನು ನಿರ್ಲಕ್ಷ್ಯವಹಿಸದೆ ವೈದ್ಯರ ಬಳಿಗೆ ಚಿಕಿತ್ಸೆ ಪಡೆಯಲು ಮುಂದಾದೆ. ಪರೀಕ್ಷೆಯ ಬಳಿಕ ಕೊರೊನಾ ಸೋಂಕು ಸಣ್ಣ ಪ್ರಮಾಣದಲ್ಲಿದೆ. ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದರು. ಇದಕ್ಕೆ ನನ್ನ ಕುಟುಂಬದ ಸದಸ್ಯರು ಒಪ್ಪಲಿಲ್ಲ. ಹಾಗಾಗಿ, ಆಸ್ಪತ್ರೆಗೆ ದಾಖಲಾದೆ. ನನ್ನ ಆರೋಗ್ಯದ ಬಗ್ಗೆ ಯಾರೊಬ್ಬರು ಚಿಂತಿಸಬೇಕಿಲ್ಲ. ನನ್ನ ಆರೋಗ್ಯ ವಿಚಾರಿಸಲು ಮೊಬೈಲ್ ಕರೆ ಮಾಡಬೇಡಿ. ಕರೆ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಶೀತದ ಹೊರತಾಗಿ ನಾನೀಗ ಚೆನ್ನಾಗಿದ್ದೇನೆ. ಜ್ವರವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗುತ್ತೇನೆ’ ಎಂದು ಅವರು ಈ ವಿಡಿಯೊದಲ್ಲಿ ತಿಳಿಸಿದ್ದರು.

ಕಳೆದ ತಿಂಗಳು ಬಾಲಸುಬ್ರಹ್ಮಣ್ಯಂ ಅವರು ಕೋವಿಡ್‌ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ರಚಿಸಿದ್ದ ಹಾಡಿಗೆ ಧ್ವನಿಯಾಗಿದ್ದರು. ಈ ಹಾಡು ಸಾರ್ವಜನಿಕರಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ನೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.