ADVERTISEMENT

Siri Ravikumar: ವೆಬ್‌ ಸರಣಿಯಲ್ಲಿ ಸಿರಿ ಹೊಸ ಹೆಜ್ಜೆ

ಅಭಿಲಾಷ್ ಪಿ.ಎಸ್‌.
Published 20 ಆಗಸ್ಟ್ 2025, 4:21 IST
Last Updated 20 ಆಗಸ್ಟ್ 2025, 4:21 IST
ಸಿರಿ ರವಿಕುಮಾರ್‌ 
ಸಿರಿ ರವಿಕುಮಾರ್‌    

‘ಸಕುಟುಂಬ ಸಮೇತ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’, ‘ಬಿಸಿ ಬಿಸಿ ಐಸ್‌ಕ್ರೀಂ’, ಬ್ಯಾಚುಲರ್‌ ಪಾರ್ಟಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಭಿನ್ನವಾದ ಪಾತ್ರಗಳನ್ನು ನಿಭಾಯಿಸಿದ ನಟಿ ಸಿರಿ ರವಿಕುಮಾರ್‌ ಇದೀಗ ಮತ್ತೊಮ್ಮೆ ವೆಬ್‌ ಸರಣಿಗೆ ಹೆಜ್ಜೆ ಇಟ್ಟಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ‘ಕ್ಯಾಬ್ರೆ’ ಎಂಬ ವೆಬ್‌ ಸರಣಿಯಲ್ಲಿ ನಟಿಸಿದ್ದ ಸಿರಿ ಬಳಿಕ ‘ಬೈ ಮಿಸ್ಟೆಕ್‌’ ಎಂಬ ವೆಬ್‌ ಸರಣಿ ಮಾಡಿದ್ದರು. ಇದೀಗ ಸುನಿಲ್‌ ಮೈಸೂರು ನಿರ್ದೇಶನದ, ನಟ–ನಿರ್ದೇಶಕ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶೋಧ’ ಎಂಬ ವೆಬ್‌ ಸರಣಿಯಲ್ಲಿ ಸಿರಿ ಬಣ್ಣಹಚ್ಚಿದ್ದಾರೆ. ಈ ಸರಣಿ ಆ.29ರಂದು ಜೀ5ನಲ್ಲಿ ರಿಲೀಸ್‌ ಆಗಲಿದೆ. 

ತಮ್ಮ ಪಾತ್ರ, ವೆಬ್‌ ಸರಣಿಯ ಕುರಿತು ಮಾತಿಗಿಳಿದ ಸಿರಿ, ‘ರಂಗಭೂಮಿಯಿಂದ ಬಂದ ನನಗೆ ವೆಬ್‌ ಸರಣಿ ಎಂಬುವುದು  ಹೊಸದೇನಲ್ಲ. ಈ ಹಿಂದೆ ಎರಡು ವೆಬ್‌ ಸರಣಿಗಳಲ್ಲಿ ನಟಿಸಿದ್ದೇನೆ. ಇದರಲ್ಲಿ ‘ಕ್ಯಾಬ್ರೆ’ ಎನ್ನುವುದು ಯುಟ್ಯೂಬ್‌ನಲ್ಲಿದೆ. ಇದರಲ್ಲಿನ ನನ್ನ ‘ಅರ್ಬೀನ್‌’ ಪಾತ್ರದ ಮುಖಾಂತರವೇ ಹಲವರು ನನ್ನನ್ನು ಈಗಲೂ ಗುರುತಿಸುತ್ತಾರೆ. ಸಿನಿಮಾಗಿಂತಲೂ ಹೆಚ್ಚಿನ ಖ್ಯಾತಿಯನ್ನು ಈ ಪಾತ್ರ ನನಗೆ ನೀಡಿತ್ತು. ಇದೀಗ ಕೆಆರ್‌ಜಿ ಸ್ಟುಡಿಯೊಸ್‌, ಜೀ5ನಂತಹ ದೊಡ್ಡ ಸಂಸ್ಥೆಯ ಮೂಲಕ ಬರುತ್ತಿರುವ ‘ಶೋಧ’ ಎಂಬ ವೆಬ್‌ ಸರಣಿಯಲ್ಲಿ ನಟಿಸಿದ್ದೇನೆ. ಕನ್ನಡ ವೆಬ್‌ ಸರಣಿ ನಿರ್ಮಾಣಕ್ಕೆ ಇದೀಗ ಹೆಚ್ಚಿನ ಅವಕಾಶ ತೆರೆದುಕೊಂಡಿದೆ. ಹಿಂದಿನ ವೆಬ್‌ ಸರಣಿಗಳಿಗಿಂತ ಹೆಚ್ಚಿನ ಪ್ರಚಾರ ಈ ಸರಣಿಗೆ ದೊರಕಿದೆ. ಈ ಹಿಂದೆ ಜನರಿಗೆ ದೊರಕದ ವೇದಿಕೆಗಳಲ್ಲಿ ಕನ್ನಡದ ವೆಬ್‌ ಸರಣಿಗಳು ಬರುತ್ತಿದ್ದವು. ಕನ್ನಡದ ವೆಬ್‌ ಸರಣಿಗಳು ಇದ್ದ ವೇದಿಕೆಗಳಿಗೆ ಹೆಚ್ಚಿನ ಚಂದಾದಾರರೂ ಇರಲಿಲ್ಲ. ಜೊತೆಗೆ ದೊಡ್ಡ ಒಟಿಟಿ ಕಂಪನಿಗಳು ಕನ್ನಡ ಕಾಂಟೆಂಟ್‌ಗಳನ್ನೇ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಕನ್ನಡದಲ್ಲಿ ವೆಬ್‌ ಸರಣಿ ನಿರ್ಮಾಣ ಪ್ರಯತ್ನ ಹೆಚ್ಚು ಇರಲಿಲ್ಲ’ ಎಂದರು. 

‘ವೆಬ್‌ ಸರಣಿಗಳ ಕಥೆ ಚೆನ್ನಾಗಿದ್ದರೆ ಹಾಗೂ ಆ ಸರಣಿ ಜನರಿಗೆ ತಲುಪುವ ವೇದಿಕೆಗಳಲ್ಲಿ ಇದ್ದರೆ ಖಂಡಿತವಾಗಿಯೂ ಅವು ಯಶಸ್ವಿಯಾಗುತ್ತವೆ. ಇಂತಹ ಅವಕಾಶವನ್ನು ಜೀ5 ರೂಪಿಸುತ್ತಿದೆ. ಈ ಹಿಂದೆ ‘ಅಯ್ಯನ ಮನೆ’ಯನ್ನು ಪ್ರೇಕ್ಷಕರ ಎದುರಿಗೆ ಇಟ್ಟಿದ್ದ ಜೀ5 ಇದೀಗ ಮತ್ತೊಂದು ಆರು ಸಂಚಿಕೆಗಳ ವೆಬ್‌ ಸರಣಿಯನ್ನು ತಂದಿದೆ. ಕನ್ನಡ ವೆಬ್‌ ಸರಣಿ ಎನ್ನುವುದು ಮುಂದಿನ ಭವಿಷ್ಯ. ಎರಡು ವೆಬ್‌ ಸರಣಿಗಳ ಮೂಲಕ ಜೀ5 ಇದಕ್ಕೆ ಅಡಿಪಾಯ ಹಾಕಿದೆ. ಪ್ರತಿಯೊಂದು ಒಟಿಟಿ ಕಂಪನಿಗಳು ಧೈರ್ಯ ತೆಗೆದುಕೊಂಡು ನಿರಂತರವಾಗಿ ಕನ್ನಡ ವೆಬ್‌ ಸರಣಿಗಳ ನಿರ್ಮಾಣ ಮಾಡಿಬೇಕು’ ಎನ್ನುತ್ತಾರೆ ಸಿರಿ. 

ADVERTISEMENT

ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ 

‘ಶೋಧ ಎನ್ನುವುದು ಕೊಡಗಿನ ಮಡಿಕೇರಿಯಲ್ಲಿರುವ ಸಣ್ಣ ಕುಟುಂಬದ ಕಥೆ. ಘಟನೆಯೊಂದರ ಬಳಿಕ ಗಂಡ ತನ್ನ ಹೆಂಡತಿಯನ್ನೇ ಮರೆಯುತ್ತಾನೆ. ಅವನ ನೆನಪುಗಳನ್ನು ಪುನಃ ತರುವ ಪ್ರಯತ್ನದಲ್ಲೇ ಕಥೆ ತೆರೆದುಕೊಳ್ಳುತ್ತದೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯಾಗಿದೆ’ ಎಂದರು ಸಿರಿ. 

ರಂಗಭೂಮಿಯಲ್ಲಿ ಸಕ್ರಿಯ 

‘ಮೈಸೂರಿನಲ್ಲಿ ಆ.31ರಂದು ಹಾಗೂ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ಸೆ.13ರಂದು ‘ಲವ್‌ ಲೆಟರ್ಸ್‌’ ಪ್ರದರ್ಶನವಿದೆ. ಸೆಪ್ಟೆಂಬರ್‌ 5,6 ಮತ್ತು 7ರಂದು ಬೆಂಗಳೂರಿನ ಪ್ರೆಸ್ಟೀಜ್‌ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ನಲ್ಲಿ ‘ಪರ್ವ’ ಪ್ರದರ್ಶನವಿದೆ. ಇದು ಎಂಟು ಗಂಟೆಯ ಪ್ರದರ್ಶನ. ಹೀಗೆ ನಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಸಿರಿ. 

ಸದ್ಯಕ್ಕೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ರಂಗಭೂಮಿಯಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದೇನೆ. ಮೂರ್ನಾಲ್ಕು ಕನ್ನಡ ಸಿನಿಮಾ ಕಥೆಗಳುನ್ನು ಕೇಳಿದ್ದೇನೆ. ಇವು ಮಾತುಕತೆ ಹಂತದಲ್ಲಿವೆ.
–ಸಿರಿ ರವಿಕುಮಾರ್‌ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.