ADVERTISEMENT

ಸೋನು ನಿಗಮ್‌ ಹಾಡಿಗಿಲ್ಲ ನಿರ್ಬಂಧ: ಕೆಎಫ್‌ಸಿಸಿ ಅಧ್ಯಕ್ಷ ಎಂ.ನರಸಿಂಹಲು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 23:30 IST
Last Updated 25 ಆಗಸ್ಟ್ 2025, 23:30 IST
   

ಗಾಯಕ ಸೋನು ನಿಗಮ್‌ಗೆ ಅಸಹಕಾರ ತೋರಲು ನಿರ್ಧರಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್‌ಸಿಸಿ) ತನ್ನ ನಿರ್ಧಾರವನ್ನು ಸಡಿಲಿಸಿದೆ. ‘ಸೋನು ನಿಗಮ್‌ ಅವರು ಸಾರ್ವಜನಿಕವಾಗಿ ಬೇಷರತ್‌ ಕ್ಷಮೆಯಾಚಿಸಿದ ಕಾರಣ ಅವರ ಹಾಡು ಬಳಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ’ ಎಂದು ಮಂಡಳಿಯ ಅಧ್ಯಕ್ಷರಾದ ಎಂ.ನರಸಿಂಹಲು ಸೋಮವಾರ(ಆ.25) ಹೇಳಿದರು.

ಸುರಾಗ್‌ ಸಾಗರ್‌ ನಿರ್ದೇಶನದ ‘ನಿದ್ರಾದೇವಿ ನೆಕ್ಸ್ಟ್‌ ಡೋರ್‌’ ಸಿನಿಮಾದಲ್ಲಿನ ‘ನೀ ನನ್ನ ಹೊಸತನ’ ಹಾಡನ್ನು ಸೋನು ನಿಗಮ್‌ ಹಾಡಿದ್ದು, ಈ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳಬೇಕೇ ಬೇಡವೇ ಎನ್ನುವ ಗೊಂದಲವನ್ನು ಚಿತ್ರದ ನಿರ್ಮಾಪಕ ಜಯರಾಮ ದೇವಸಮುದ್ರ ಕೆಎಫ್‌ಸಿಸಿ ಮುಂದೆ ಇಟ್ಟಿದ್ದರು.    

ಇದಕ್ಕೆ ಪ್ರತಿಕ್ರಿಯೆ ನೀಡಿದ ನರಸಿಂಹಲು, ‘ನಮ್ಮದೇ ನಿರ್ಮಾಪಕರು ಹಾಡು ಮಾಡಿಸಿರುವ ಕಾರಣ, ಅವರಿಗೆ ತೊಂದರೆ ಆಗಬಾರದು. ಕ್ಷಮೆ ಕೇಳಿದ ಬೆನ್ನಲ್ಲೇ ವಿವಾದವನ್ನು ಅಲ್ಲಿಗೇ ನಾವು ಕೈಬಿಟ್ಟಿದ್ದೇವೆ. ಸೋನು ನಿಗಮ್‌ ಹಾಡಿರುವ ಹಾಡನ್ನು ಬಳಸಿಕೊಳ್ಳಬಹುದು. ಪ್ರಸ್ತುತ ಸೋನು ನಿಗಮ್‌ ಮೇಲೆ ಯಾವುದೇ ನಿರ್ಬಂಧವಿಲ್ಲ. ಕ್ಷಮೆ ಕೇಳಿರುವುದಕ್ಕಿಂತ ದೊಡ್ಡದು ಬೇರೆ ಯಾವುದೂ ಇಲ್ಲ. ಹೀಗಾಗಿ ಅಸಹಕಾರ ಹಿಂಪಡೆದಿದ್ದೇವೆ’ ಎಂದರು.   

ADVERTISEMENT

‘ನಿದ್ರಾದೇವಿ ನೆಕ್ಸ್ಟ್‌ ಡೋರ್‌’ ಸೆ.12ರಂದು ತೆರೆಕಾಣುತ್ತಿದ್ದು, ಪ್ರವೀರ್ ಶೆಟ್ಟಿ, ರಿಷಿಕಾ ನಾಯಕ್ ಜೋಡಿಯಾಗಿ ನಟಿಸಿದ್ದಾರೆ. ‘ಬಿಗ್‌ಬಾಸ್’ ಖ್ಯಾತಿಯ ನಟ ಶೈನ್ ಶೆಟ್ಟಿ, ಶೃತಿ ಹರಿಹರನ್, ಕೆ.ಎಸ್.ಶ್ರೀಧರ್, ಸುಧಾರಾಣಿ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.