ADVERTISEMENT

ರಿಲೇಷನ್‌ಶಿಪ್‌ ಗುರು ಎನ್ನಿಸಿಕೊಂಡಿರುವ ಸೋನು ಸೂದ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 6:46 IST
Last Updated 10 ಜೂನ್ 2020, 6:46 IST
ಸೋನು ಸೂದ್‌
ಸೋನು ಸೂದ್‌   

ನಟ ಸೋನು ಸೂದ್ ಇತ್ತೀಚೆಗೆ ಅನೇಕ ವಿಷಯಗಳ ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಮೊದಲೆಲ್ಲಾ ಸಿನಿಮಾಗಳ ವಿಷಯಕ್ಕೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋನು ಇತ್ತೀಚೆಗೆ ವಲಸಿಗರಿಗೆ ನೆರವು ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ನೂರಾರು ವಲಸಿಗರಿಗೆ ಬಸ್‌, ವಿಮಾನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಲಸಿಗರನ್ನು ಅವರವರ ಊರುಗಳಿಗೆ ಕಳುಹಿಸಿದ್ದಾರೆ. ಇವರ ಈ ಕೆಲಸವು ಪ್ರಪಂಚದಾದ್ಯಂತ ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದೆ. ವಲಸಿಗರಿಂದ ‘ಬಡವರು ಬಂಧು’ ಎಂದು ಕರೆಸಿಕೊಂಡಿರುವ ಸೋನು ಸೂದ್‌ಗೆ ಈಗ ‘ರಿಲೇಷನ್‌ಶಿಪ್‌ ಗುರು‘ ಎಂಬ ಹೊಸ ಹೆಸರು ಬಂದಿದೆ.

ಇದೇನಪ್ಪಾ ಇದು, ಅವರು ಹೇಗೆ ರಿಲೇಷನ್‌ಶಿಪ್‌ ಗುರು ಆಗಿದ್ದಾರೆ? ಇದೇನು ಅವರ ಹೊಸ ಸಿನಿಮಾನಾ? ಅಂತೆಲ್ಲಾ ಯೋಚಿಸಬೇಡಿ. ಇದು ಹರಿಯಾಣದ ಮೂಲದ ವ್ಯಕ್ತಿಯೊಬ್ಬರು ಸೋನು ಸೂದ್‌ಗೆ ನೀಡಿರುವ ಹೊಸ ಬಿರುದು. ಆ ವ್ಯಕ್ತಿ ವೈವಾಹಿಕ ಜೀವನದಲ್ಲಿ ತೊಂದರೆ ಎದುರಿಸುತ್ತಿದ್ದು, ತನ್ನ ಹೆಂಡತಿಯೊಂದಿಗೆ ಜೀವನ ನಡೆಸುವ ವಿಷಯದಲ್ಲಿ ಗೊಂದಲಗೊಂಡಿದ್ದರು. ಅಲ್ಲದೇ ಪ್ರತ್ಯೇಕತೆ ಹಾಗೂ ಲಾಕ್‌ಡೌನ್‌ನಿಂದಾಗಿ ನಿರಾಶೆಗೊಂಡಿದ್ದರು. ಅವರ ವೈವಾಹಿಕ ಜೀವನದ ರಿಪೇರಿಗೆ ಗುರುವಾಗುವ ಮೂಲಕ ರಿಲೇಷನ್‌ ಗುರು ಎನ್ನಿಸಿಕೊಂಡಿದ್ದಾರೆ ಸೋನು.

ಹರಿಯಾಣದ ಆ ವ್ಯಕ್ತಿ ಸದ್ಯಕ್ಕೆ ಗುವಾಹಟಿಯಲ್ಲಿ ನೆಲೆಸಿದ್ದಾರೆ. ಟಿಟ್ವರ್‌ ಮೂಲಕ ಸೋನು ಸೂದ್‌ ಅವರ ಬಳಿ ವೈವಾಹಿಕ ಸಂಬಂಧದ ಕುರಿತಂತೆ ಸಲಹೆಗಳನ್ನು ಕೇಳಿದ್ದರು. ‘ಡಿಯರ್ ಸರ್‌, ನಾನು ಸದ್ಯ ಅಸ್ಸಾಂನ ಗುವಾಹಟಿಯಲ್ಲಿದ್ದೇನೆ. ನಾನು ನನ್ನ ಸ್ವಂತ ಊರಾದ ಹರಿಯಾಣಕ್ಕೆ ಹೋಗಬೇಕು. ಲಾಕ್‌ಡೌನ್ ಕಾರಣದಿಂದ ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದೇನೆ. ಅಲ್ಲದೇ ನನ್ನ ಹೆಂಡತಿಯೊಂದಿಗೆ ಈ ವಿಷಯವಾಗಿ ಜಗಳವಾಗಿದೆ. ನಾವಿಬ್ಬರೂ ಈಗ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದೇವೆ. ದಯವಿಟ್ಟು ನನ್ನನ್ನು ಗುವಾಹಟಿಯಿಂದ ದೆಹಲಿಗೆ ಕಳುಹಿಸಿಕೊಡಿ. ನಾನು ನಿಮಗೆ ಜೀವನಪರ್ಯಂತ ಋಣಿಯಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಆದರೆ ಸೋನು ಸೂದ್ ಆ ವ್ಯಕ್ತಿಗೆ ಈ ವಿಷಯವಾಗಿ ಯಾವುದೇ ಸಲಹೆ ನೀಡಲಿಲ್ಲ. ಬದಲಾಗಿ ಆ ವ್ಯಕ್ತಿಯ ಜೊತೆ ‘ನೀವಿಬ್ಬರು ಜಗಳವಾಡಬೇಡಿ’ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ದಂಪತಿಗಳ ಜೊತೆ ವಿಡಿಯೊ ಕರೆಯ ಮೂಲಕ ಮಾತನಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಊಟಕ್ಕೆ ಹೊರಗೆ ಕರೆದುಕೊಂಡು ಹೋಗುವುದಾಗಿ ಕೂಡ ಹೇಳಿದ್ದಾರೆ. ಆದರೆ ‘ನಾನು ಇದನ್ನೆಲ್ಲಾ ಮಾಡಬೇಕು ಎಂದರೆ ಆ ದಂಪತಿಗಳು ಇನ್ನು ಮುಂದೆ ಒಂದಾಗಿ ಬಾಳುತ್ತೇವೆ ಎಂದು ಪ್ರಮಾಣ ಮಾಡಬೇಕು. ಆಗ ಮಾತ್ರ ನಾನು ಹೇಳಿದ ಹಾಗೇ ನಡೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.