ADVERTISEMENT

ಸೋನು ನಿಗಮ್‌ ಕ್ಷಮೆ ಕೇಳಿದರೆ ಸಾಲದು, ಪರಿಣಾಮ ಎದುರಿಸಲಿ: ರಾಮ್‌ ನಾರಾಯಣ್‌

ಪಿಟಿಐ
Published 8 ಮೇ 2025, 12:37 IST
Last Updated 8 ಮೇ 2025, 12:37 IST
<div class="paragraphs"><p>ಸೋನು ನಿಗಮ್</p></div>

ಸೋನು ನಿಗಮ್

   

ಬೆಂಗಳೂರು: ‘ಗಾಯಕ ಸೋನು ನಿಗಮ್‌ ಅವರು ಕ್ಷಮೆಯಾಚಿಸದರೆ ಸಾಲದು, ಇಂತಹ ಕಟುವಾದ ಮಾತುಗಳನ್ನು ಹೇಳಿದ್ದಕ್ಕಾಗಿ ಅವರು ಅದರ ಪರಿಣಾಮವನ್ನು ಎದುರಿಸಬೇಕು’ ಎಂದು ಕನ್ನಡ ನಿರ್ದೇಶಕ ಕೆ.ರಾಮ್‌ ನಾರಾಯಣ ಹೇಳಿದ್ದಾರೆ.

ತಮ್ಮ ನಿರ್ದೇಶನದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಿಂದ ಸೋನು ನಿಗಮ್‌ ಅವರು ಹಾಡಿದ್ದ ಎರಡು ಹಾಡುಗಳನ್ನು ತೆಗೆದು ಹಾಕಿರುವ ಬಗ್ಗೆ ರಾಮ್‌ ನಾರಾಯಣ್‌ ಅವರು ಸುದ್ದಿ ಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ್ದಾರೆ.

ADVERTISEMENT

‘ಕ್ಷಮಿಸಿ ಎಂದು ಹೇಳಿದಾಕ್ಷಣ ಎಲ್ಲವೂ ಮುಗಿಯುವುದಿಲ್ಲ. ಪಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ಕನ್ನಡಕ್ಕೆ ತಳುಕು ಹಾಕುವುದು ಗಂಭೀರವಾದ ವಿಷಯವಾಗಿದೆ. ಅದಕ್ಕಾಗಿ ಅವರು ಬೆಲೆ ತೆರಲೇಬೇಕು’ ಎಂದು ಹೇಳಿದರು.

‘ಈ ಚಿತ್ರದ ಶೀರ್ಷಿಕೆ ಗೀತೆಯನ್ನು ಸೋನು ನಿಗಮ್‌ ಅವರೇ ಹಾಡಿದ್ದರು. 1965ರಲ್ಲಿ ಬಿಡುಗಡೆಯಾದ ಮೇರು ನಟ ರಾಜ್‌ಕುಮಾರ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ಕುಲದಲ್ಲಿ ಕೀಳ್ಯಾವುದೋ’ ಹಾಡಿಗೆ ಕನ್ನಡ ಚಿತ್ರರಂಗದಲ್ಲಿ ಒಂದು ಬೆಲೆಯಿದೆ. ನಮ್ಮನ್ನು ಕೀಳಾಗಿ ನೋಡುವ ಸೋನು ನಿಗಮ್‌ ಅವರಂತಹ ವ್ಯಕ್ತಿಗಳಿಂದ ಈ ಹಾಡನ್ನು ಹಾಡಿಸುವುದು ಎಷ್ಟು ಸರಿ?’ ಎಂದು ಕೇಳಿದ್ದಾರೆ.

‘ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಸೋನು ನಿಗಮ್ ಅವರೊಂದಿಗೆ ನನಗೆ ಬಹಳ ಹಿಂದಿನಿಂದಲೂ ಒಡನಾಟವಿದೆ. ನಟ ಕಿಚ್ಚ ಸುದೀಪ್ ಅಭಿನಯದ 'ಮುಸ್ಸಂಜೆ ಮಾತು' ಚಿತ್ರಕ್ಕಾಗಿ ನಾನು ಬರೆದ 'ನಿನ್ನ ನೋಡಲೆಂತೋ' ಹಾಡನ್ನು ಸೋನು ನಿಗಮ್‌ ಸುಮಾರು 12 ವರ್ಷಗಳ ಹಿಂದೆ ಹಾಡಿದ್ದರು’ ಎಂದು ನೆನಪಿಸಿಕೊಂಡರು.

‘ಆ ಹಾಡು ಸೋನು ನಿಗಮ್‌ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತ್ತು. ಆಗ ನಾವೆಲ್ಲರೂ ತುಂಬಾ ಖುಷಿಪಟ್ಟಿದ್ದೇವು. ಆಗ ಅವರು ಪ್ರಶಸ್ತಿಗೆ ಅರ್ಹರಾದಂತೆ ಈಗ ಕನ್ನಡ ಚಿತ್ರರಂಗದಿಂದ ನಿಷೇಧಕ್ಕೂ ಅರ್ಹರು. ಅವರಂತಹ ಉನ್ನತ ಸ್ಥಾನದಲ್ಲಿರುವ ಯಾರೇ ಆದರೂ ಇತರರ ಬಗ್ಗೆ ನೋವುಂಟುಮಾಡುವ ಮಾತುಗಳನ್ನು ಆಡುವ ಮೊದಲು ಯೋಚಿಸಬೇಕು’ ಎಂದರು.

ಘಟನೆ ಏನು?

ಬೆಂಗಳೂರಿನಲ್ಲಿ ನಡೆದ ಖಾಸಗಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸೋನು ನಿಗಮ್‌ ಅವರು, ಕನ್ನಡ ಹಾಡಿಗೆ ಒತ್ತಾಯ ಮಾಡಿದ್ದನ್ನು ಪಹಲ್ಗಾಮ್‌ ಭಯೋತ್ಪಾದನ ದಾಳಿಗೆ ತಳುಕು ಹಾಕಿದ್ದರು. ಇದು ಕರ್ನಾಟಕದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಕೂಡ ಸೋನು ನಿಮಗ್‌ ಅವರಿಗೆ ಅಸಹಕಾರ ತೋರಲು ನಿರ್ಧರಿಸಿತ್ತು.

ವಿರೋಧ ಹೆಚ್ಚಾಗುತ್ತಲೇ ಎಚ್ಚೆತ್ತ ಗಾಯಕ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಕನ್ನಡಿಗರ ಕ್ಷಮೆಯಾಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.