ADVERTISEMENT

ಸೋಲ್ ಕಾಲ್ತುಳಿತದಲ್ಲಿ ಜನಪ್ರಿಯ ಕೊರಿಯನ್ ನಟ ಲಿ ಜಿಹಾನ್ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2022, 16:41 IST
Last Updated 31 ಅಕ್ಟೋಬರ್ 2022, 16:41 IST
ಲಿ ಜಿಹಾನ್
ಲಿ ಜಿಹಾನ್   

ಸೋಲ್: ದಕ್ಷಿಣ ಕೊರಿಯಾದ ರಾಜಧಾನಿಸೋಲ್‌ನಲ್ಲಿ ಹಾಲೋವಿನ್ ಉತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಅಲ್ಲಿನ ಜನಪ್ರಿಯ ನಟ ಹಾಗೂ ಗಾಯಕ ಲಿ ಜಿಹಾನ್ (24) ಮೃತರಾಗಿದ್ದಾರೆ.

ಲಿ ಜಿಹಾನ್ ದಕ್ಷಿಣ ಕೊರಿಯಾದ 935 ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಪ್ರಮುಖ ಪಾಲುದಾರರಾಗಿದ್ದರು. ಅವರು ನಿಧನಕ್ಕೆ ಸಂಸ್ಥೆ ತೀವ್ರ ಸಂತಾಪ ಸೂಚಿಸಿದೆ.

ಲಿ ಜಿಹಾನ್ ಕಾಲ್ತುಳಿತ ಸಂಭವಿಸುವ ಮುನ್ನ ಜನಸಂದಣಿಯಲ್ಲಿ ಸಿಲುಕಿದ್ದರು. ಅವರು ಸಂಗೀತ ನೀಡುವ ಕಾರ್ಯಕ್ರಮಕ್ಕೆ ಹೋಗುವ ತಯಾರಿಯಲ್ಲಿದ್ದರು. ಆಗ ಸಂಭವಿಸಿದ ಕಾಲ್ತುಳಿತಕ್ಕೆ ನಟ ಬಲಿಯಾಗಿದ್ದಾರೆ.

ADVERTISEMENT

ಈ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಒಟ್ಟು 151 ಎಂದು ಖಚಿತಪಟ್ಟಿದೆ.ಘಟನೆಯಲ್ಲಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು 19 ಜನರ ಸ್ಥಿತಿ ಗಂಭೀರವಾಗಿದೆ. ರಾಷ್ಟ್ರದಾದ್ಯಂತ ಒಂದು ವಾರ ಶೋಕಾಚರಣೆ ಘೋಷಿಸಲಾಗಿದೆ.

ಮೃತಪಟ್ಟವರಲ್ಲಿ ಬಹುತೇಕರು ಯುವಕ ಯುವತಿಯರೇ ಆಗಿದ್ದು, 19–20 ರ ವಯೋಮಾನದವರಾಗಿದ್ದಾರೆ.

ಆಗಿದ್ದೇನು?

ನೈಟ್ ಲೈಫ್‌ಗೆ ಹೆಸರಾದ ಸಿಯೋಲ್‌ನ ಇಟಾವನ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಹಾಲೋವಿನ್ ಆಚರಣೆ ವೇಳೆ ಸೇರಿದ್ದ ಲಕ್ಷಾಂತರ ಜನ ಸಂಭ್ರಮಾಚರಣೆಯಲ್ಲಿದ್ದರು. ಇಟಾವನ್ ಪ್ರದೇಶದ ಕೇಲವ 4 ಮೀಟರ್ ಅಗಲವಾದ ರಸ್ತೆಗಳಲ್ಲಿ ಲಕ್ಷಾಂತರ ಜನ ಜಮಾವಣೆ ಆಗಿದ್ದರು.

ಈ ವೇಳೆ ಕೆಲವರು ತಳ್ಳಾಟ ನಡೆಸಿದ್ದಾರೆ. ತಳ್ಳಾಟದಿಂದ ಭಾರಿ ನೂಕು ನುಗ್ಗಲು ಸಂಭವಿಸಿದೆ. ಈ ವೇಳೆ ಅಶಕ್ತರು ಹಾಗೂ ಯುವಕ ಯುವತಿಯರು ಕಾಲ್ತುಳಿಕ್ಕೆ ಸಿಲುಕಿದ್ದಾರೆ. ಕಾಲ್ತುಳಿತ ಸಂಭವಿಸಿದಾಗ ಉಸಿರುಗಟ್ಟಿ ಬಹುತೇಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.‌

ಉಸಿರುಗಟ್ಟಲು ಪ್ರಮುಖ ಕಾರಣ ಹಾಲೋವಿನ್ ಆಚರಣೆಗಾಗಿ ಅನೇಕರು ಭೂತದ ವೇಷಗಳನ್ನು ಹಾಕಿಕೊಂಡಿದ್ದರು. ಹೀಗೆ ಬಿಗಿಯಾದ ವೇಷಗಳನ್ನು ಹಾಕಿಕೊಂಡವರು ಕಾಲ್ತುಳಿತಕ್ಕೆ ಸಿಲುಕಿ ಉಸಿರುಟ್ಟಿ ಮೃತಪಟ್ಟಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಸಿಯೋಲ್‌ನ ಬೀದಿ ಬೀದಿಗಳಲ್ಲಿ ಮೌನ ಆವರಿಸಿದೆ. ಆಸ್ಪತ್ರೆಗಳಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ ಎಂದು ದಕ್ಷಿಣ ಕೊರಿಯಾದ ಯೊನ್‌ಹಾಫ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೋವಿಡ್ ನಂತರ ಮೂರು ವರ್ಷಗಳ ತರುವಾಯ ಸಿಯೊಲ್‌ನಲ್ಲಿ ಆಚರಿಸಲಾಗುತ್ತಿದ್ದ ಹಾಲೋವಿನ್ ಆಚರಣೆ ಇದಾಗಿತ್ತು. ಮೃತರಲ್ಲಿ 22 ಜನ ವಿದೇಶಿಗರು ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೊಲ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಇಂತಹ ದುರಂತ ಸಂಭವಿಸಬಾರದಿತ್ತು ಎಂದು ಸಂತಾಪ ಸೂಚಿಸಿದ್ದಾರೆ. ಮೃತರಿಗೆ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಸೇರಿದಂತೆ ಅನೇಕ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ.

ದೊಡ್ಡ ದುರಂತ

2014 ರಿಂದ ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಅತಿದೊಡ್ಡ ದುರಂತ ಇದಾಗಿದೆ. 2014 ರಲ್ಲಿ ಸಂಭವಿಸಿದ್ದ ದೋಣಿ ದುರಂತದಲ್ಲಿ 304 ಜನ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.