ADVERTISEMENT

‘ವಿಕ್ರಾಂತ್‌ ರೋಣ’ನನ್ನು ಮೆಚ್ಚಿದ ‘ಬಾಹುಬಲಿ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 6:34 IST
Last Updated 31 ಜುಲೈ 2022, 6:34 IST
ಎಸ್‌.ಎಸ್.ರಾಜಮೌಳಿ
ಎಸ್‌.ಎಸ್.ರಾಜಮೌಳಿ   

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಖ್ಯಾತ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಕೂಡಾ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ವಿಕ್ರಾಂತ್‌ ರೋಣ’ ನೂರು ಕೋಟಿ ಕ್ಲಬ್‌ ಸೇರುವ ಹೊಸ್ತಿಲಲ್ಲಿ ‘ಬಾಹುಬಲಿ’ ನಿರ್ದೇಶಕರ ಈ ಮಾತು ಚಿತ್ರತಂಡಕ್ಕೆ ಪ್ಲಸ್‌ಪಾಯಿಂಟ್‌ ಆಗಲಿದೆ.

ಭಾನುವಾರ ಟ್ವೀಟ್‌ ಮಾಡಿರುವ ರಾಜಮೌಳಿ, ‘ವಿಕ್ರಾಂತ್‌ ರೋಣದ ಯಶಸ್ಸಿಗೆ ಅಭಿನಂದನೆಗಳು. ಇಂಥ ಕಥಾಹಂದರ ಹೊಂದಿರುವ ಸಿನಿಮಾದ ಮೇಲೆ ಬಂಡವಾಳ ಹೂಡಲು ಧೈರ್ಯ ಹಾಗೂ ನಂಬಿಕೆ ಅಗತ್ಯ. ಸುದೀಪ್‌ ಅವರೇ ನೀವು ಇವೆರಡನ್ನೂ ಮಾಡಿದ್ದೀರಿ ಹಾಗೂ ಇದರ ಫಲ ಇದೀಗ ನಿಮ್ಮ ಮುಂದಿದೆ. ಪ್ರಿಕ್ಲೈಮ್ಯಾಕ್ಸ್‌ ಹಾಗೂ ಚಿತ್ರದ ಕಥೆ ಅದ್ಭುತವಾಗಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಗುಡ್ಡಿಯ ಸ್ನೇಹಿತ ಭಾಸ್ಕರನನ್ನು ನಾನು ಪ್ರತ್ಯೇಕವಾಗಿ ಗುರುತಿಸಲಿಚ್ಛಿಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸುದೀಪ್‌ ಅವರೂ ಟ್ವೀಟ್‌ ಮಾಡಿ ಧನ್ಯವಾದ ತಿಳಿಸಿದ್ದಾರೆ. ವಿಶ್ವದಾದ್ಯಂತ 3,200ಕ್ಕೂ ಅಧಿಕ ತೆರೆಗಳಲ್ಲಿ ತೆರೆಕಂಡಿದ್ದ ವಿಕ್ರಾಂತ್‌ ರೋಣ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು ₹30 ಕೋಟಿ ಬಾಚಿತ್ತು. ಮೊದಲ ದಿನ ಭಾರತದಲ್ಲೇ ₹20–₹22 ಕೋಟಿ ಗಳಿಕೆಯಾಗಿತ್ತು. ಈ ಪೈಕಿ ಕರ್ನಾಟಕದಲ್ಲೇ ₹13 ಕೋಟಿ ಕಲೆಕ್ಷನ್‌ ಆಗಿತ್ತು. ವೀಕೆಂಡ್‌ ಮುಗಿಯುವಷ್ಟರಲ್ಲಿ ಚಿತ್ರವು ನೂರು ಕೋಟಿ ಕ್ಲಬ್‌ಗೆ ಸೇರುವ ನಿರೀಕ್ಷೆಯಿದೆ. ಸದ್ಯ ಕರ್ನಾಟಕದಲ್ಲೇ ಬೀಡುಬಿಟ್ಟಿರುವ ಚಿತ್ರತಂಡ, ಸೋಮವಾರದಿಂದ ಹೈದರಾಬಾದ್‌ ಹಾಗೂ ಮುಂಬೈಗೆ ತೆರಳಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.