
ಮೈಸೂರು: ರಾಜ್ಯ ಸರ್ಕಾರದಿಂದ 2018 ಹಾಗೂ 2019ರ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.3ರಂದು ಸಂಜೆ 5ಕ್ಕೆ ಇಲ್ಲಿನ ಹುಣಸೂರು ರಸ್ತೆಯ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಬರ್ಫಿ’ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ವರ್ಣರಂಜಿತ ವೇದಿಕೆಯನ್ನು ಸಜ್ಜುಗೊಳಿಸುವ ಕಾರ್ಯ ಭಾನುವಾರ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂ ವರ್ಷಗಳ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಯುಕ್ತ ಹೇಮಂತ್ ಎ. ನಿಂಬಾಳ್ಕರ್ ತಿಳಿಸಿದ್ದಾರೆ.
ಈ ಕ್ಯಾಲೆಂಡರ್ ವರ್ಷಗಳಲ್ಲಿನ ಅತ್ಯುತ್ತಮ ಚಲನಚಿತ್ರಗಳು, ಜನಪ್ರಿಯ ಮನರಂಜನಾ ಚಿತ್ರ, ವಿಶೇಷ ಸಾಮಾಜಿಕ ಕಾಳಜಿಯ ಚಿತ್ರಗಳು ಸೇರಿದಂತೆ ಅತ್ಯುತ್ತಮ ನಟ, ನಟಿ ಸೇರಿದಂತೆ ಚಿತ್ರರಂದ ವಿವಿಧ ಪ್ರಕಾರಗಳಲ್ಲಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಸುಮಾರು 85 ಪ್ರತಿಭಾವಂತರಿಗೆ ಮುಖ್ಯಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಉಮಾಶ್ರೀ, ಸುದೀಪ್, ಅನುಪಮಾಗೌಡ, ತಬಲಾ ನಾಣಿ, ರಿಷಬ್ ಶೆಟ್ಟಿ, ಡಾರ್ಲಿಂಗ್ ಕೃಷ್ಣ, ಮೇಘನಾರಾಜ್, ವೀಣಾ ಸುಂದರ್, ರವಿ ಬಸ್ರೂರ್, ಜಯಂತ್ ಕಾಯ್ಕಿಣಿ, ಹರಿಕೃಷ್ಣ, ರಘು ದೀಕ್ಷಿತ್, ಬರಗೂರು ರಾಮಚಂದ್ರಪ್ಪ, ಪಿ.ಶೇಷಾದ್ರಿ ಸೇರಿದಂತೆ ಚಲನಚಿತ್ರ ರಂಗದವರು, ಹಿರಿಯ–ಕಿರಿಯ ನಟ–ನಟಿಯರು, ತಂತ್ರಜ್ಞರು, ನಿರ್ದೇಶಕರು ಹಾಗೂ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಜನಪ್ರತಿನಿಧಿಗಳು, ನಿಗಮ–ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಮತ್ತು ಆಹ್ವಾನಿತರು ಭಾಗವಹಿಸಲಿದ್ದಾರೆ.
ಕಡ್ಡಾಯವಾಗಿ ಪ್ರವೇಶಪತ್ರ ಹೊಂದಿರುವವರಿಗೆ ಮಾತ್ರ ಸಭಾಂಗಣಕ್ಕೆ ಪ್ರವೇಶವಿದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.