ADVERTISEMENT

ದಶಕದ ನಂತರಸುಚಿತ್ರಾ ಪ್ರತ್ಯಕ್ಷ!

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
ಸುಚಿತ್ರಾ ಕೃಷ್ಣಮೂರ್ತಿ
ಸುಚಿತ್ರಾ ಕೃಷ್ಣಮೂರ್ತಿ   

90ರ ದಶಕದಲ್ಲಿ ಬಿಡುಗಡೆಯಾದ ‘ಕಬೀ ಹ್ಞಾಂ, ಕಬೀ ನಾ’ ಚಿತ್ರದಲ್ಲಿ ಶಾರುಕ್‌ ಖಾನ್‌ ಎದುರು ಮುದ್ದು ಮುಖದ ನಾಯಕಿಯಾಗಿದ್ದ ಸುಚಿತ್ರಾ ಬಹಳ ಜನರಿಗೆ ನೆನಪಿನಲ್ಲಿ ಉಳಿದಿರಲು ಸಾಧ್ಯವಿಲ್ಲ. ಏಕೆಂದರೆ 2005ರಲ್ಲಿ ‘ಮೈ ವೈಫ್ಸ್‌ ಮರ್ಡರ್‌’ ಸುಚಿತ್ರಾ ನಟಿಸಿದ ಕೊನೆಯ ಚಿತ್ರ.

ಸುಚಿತ್ರಾ ಕೇವಲ ನಟಿಯಲ್ಲ. ಲೇಖಕಿ, ಪೇಂಟರ್‌, ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.90ರ ದಶಕದಲ್ಲಿ ಅನೇಕ ವಿಡಿಯೊ ಅಲ್ಬಂಗಳಲ್ಲಿ ನಟಿಸಿದ್ದರು. ಲೇಖಕಿಯಾಗಿ ಡ್ರಾಮಾ ಕ್ವೀನ್‌ ಮತ್ತು ಸ್ವಪ್ನಲೋಕ ಸೊಸೈಟಿ ಸರಣಿ ಮೂಲಕ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ‘ಏಕ್‌ ಹ್ಞಾಂ’ ನಾಟಕದಲ್ಲಿ ಕಾಶ್ಮೀರಿ ಜರ್ನಲಿಸ್ಟ್‌ ವಜಿರಾ ಪಾತ್ರದಲ್ಲಿ ಮನೋಜ್ಞವಾಗಿ ನಟಿಸುವ ಮೂಲಕ ಅಭಿಯನವನ್ನು ತಾನಿನ್ನೂ ಮರೆತಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ದೇಶ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ಉರ್ದು ಕವಿ, ಕತೆಗಾರ ಸಾದತ್‌ ಹಸನ್‌ ಮಾಂಟೋ ಸಂದರ್ಶನಕ್ಕಾಗಿ ನೆರೆಯ ರಾಷ್ಟ್ರಕ್ಕೆ ತೆರಳುವ ಪತ್ರಕರ್ತೆಯ ಪಾತ್ರವದು.

ಬಹುತೇಕ ದಶಕದ ಬ್ರೇಕ್‌ ನಂತರ ‘ರೋಮಿಯೊ ಅಕ್ಬರ್‌ ವೇಟರ್‌’ ಮೂಲಕ ಬಣ್ಣ ಹಚ್ಚಿದ್ದೀರಿ. ಬಣ್ಣದ ಲೋಕಕ್ಕೆ ಮರಳಲು ಕಾರಣವೇನು?

ADVERTISEMENT

ಮದುವೆ ನಂತರ ನಾನು ಅಭಿನಯಿಸುವುದು ಗಂಡನಿಗೆ ಇಷ್ಟವಿರಲಿಲ್ಲ. ಹಾಗಾಗಿ ಸುಮ್ಮನಾಗಿದ್ದೆ. ಮಗಳು ಕಾವೇರಿ ಬೆಳೆದು ದೊಡ್ಡವಳಾಗಿದ್ದು, ಈ ವರ್ಷ ಕಾಲೇಜು ಮೆಟ್ಟಿಲು ಹತ್ತಿದ್ದಾಳೆ. ಅಭಿನಯದ ತುಡಿತ ಇದ್ದೇ ಇತ್ತು. ಸಮಯ ಕಳೆಯಲು ಮತ್ತೆ ಬಣ್ಣ ಹಚ್ಚಲು ನಿರ್ಧರಿಸಿದೆ. ಇದಕ್ಕೂ ಮೊದಲು ‘ಆಡ್‌ ಕಪಲ್‌’ ಎಂಬ ನಾಟಕದಲ್ಲೂ ಅಭಿನಯಿಸಿದ್ದೆ. ಆ ನಾಟಕ ಎಲ್ಲರ ಮನ ಗೆದ್ದಿತ್ತು.

ಕಾಲೇಜು ಸೇರಿದ ಮಗಳಿದ್ದಾಳೆ ಎಂದರೆ ನಂಬಲು ಆಗುವುದಿಲ್ಲ. ಮಗಳೊಂದಿಗೆ ನಿಮ್ಮ ಸಂಬಂಧ ಹೇಗಿದೆ?

ನನ್ನ ಪಾಲಿಗೆ ಅವಳು ಇನ್ನೂ ಪುಟ್ಟ ಮಗುವೇ. ನಿನ್ನೆ ರಾತ್ರಿ ಅವಳು ನನ್ನ ಮೊಬೈಲ್‌ನಲ್ಲಿ ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಟ್ಟಳು. ಮತ್ತೆ ನಾನು ಡೇಟಿಂಗ್‌ ಆರಂಭಿಸಲಿ ಎಂಬ ಬಯಕೆ ಆಕೆಯದ್ದು (ನಗು). ಮೊದ, ಮೊದಲು ಆಕೆ ಕಾಲೇಜಿಗೆ ಹೋದಾಗ ತುಂಬಾ ಬೇಜಾರಾಗಿತ್ತು. ಏಕಾಂತ ಕಾಡತೊಡಗಿತ್ತು. ಅದರಿಂದ ಹೊರ ಬರಲು ಕೆಲಸದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ.

ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್‌ ಆರಂಭಿಸಲು ರಂಗಭೂಮಿಯನ್ನೇ ಆಯ್ದುಕೊಂಡಿದ್ದು ಏಕೆ?

ಮೊದಲಿನಿಂದಲೂ ಥಿಯೇಟರ್‌ (ರಂಗಭೂಮಿ) ನನ್ನ ಮೊದಲ ಆಯ್ಕೆಯಾಗಿತ್ತು. ನನ್ನ ಮೊದಲ ತುಡಿತ, ಸೆಳೆತ, ಆಯ್ಕೆ, ಆದ್ಯತೆ ಎಲ್ಲವೂ ರಂಗಭೂಮಿ. ಸ್ಟೇಜ್‌ ಮೇಲೆ ನಾನು ತುಂಬಾ ಆ್ಯಕ್ಟಿವ್‌ ಮತ್ತು ಲವಲವಿಕೆಯಿಂದ ಇರುತ್ತೇನೆ. ನಿಮ್ಮ ಆಸಕ್ತಿಯ ಕ್ಷೇತ್ರ, ಕೆಲಸದಿಂದ ಬಹಳ ಕಾಲ ದೂರ ಉಳಿದರೆ ಏನಾಗಬಹುದು ಊಹಿಸಿ...ಅದೇ ಸ್ಥಿತಿಯಲ್ಲಿ ನಾನಿದ್ದೇನೆ. ಅಭಿಯನಿಸಬೇಕು ಎಂದು ನಿರ್ಧರಿಸಿದಾಗ ನನ್ನ ಮೊದಲ ಆಯ್ಕೆ ಥಿಯೇಟರ್‌ ಸ್ಟೇಜ್‌ ಆಗಿತ್ತು.

‘ಏಕ್‌ ಹ್ಞಾಂ’ ನಾಟಕದ ಬಗ್ಗೆ ಸ್ವಲ್ಪ ಹೇಳಿ...

ಇದು ಮೂಲತಃ ಉರ್ದು ನಾಟಕ. ವೃತ್ತಿ ಜೀವನದಲ್ಲಿ ಸವಾಲು ಒಡ್ಡಿದ ಪಾತ್ರ. ಏಕೆಂದರೆ ನನಗೆ ಉರ್ದು ಗಂಧಗಾಳಿಯೂ ಗೊತ್ತಿಲ್ಲ. ಹೀಗಾಗಿ ಈ ಪಾತ್ರವನ್ನು ನಾನು ಮಾಡಬಹುದಾ ಎಂಬ ಅಳಕು ಇತ್ತು. ಮದುವೆ, ಗಂಡ, ಮನೆ, ಮಗಳು ಮತ್ತು ಸಂಸಾರದ ಜಂಜಾಟದಲ್ಲಿ ನನ್ನೊಳಗಿನ ಕಲಾವಿದೆ ಕಳೆದು ಹೋಗಿಲ್ಲ ಎನ್ನುವುದನ್ನು ನಾನು ಸಾಬೀತು ಪಡಿಸಲು ಇಂಥದೊಂದು ಅವಕಾಶ ಮತ್ತೊಮ್ಮೆ ಸಿಗುವುದಿಲ್ಲ ಎಂದುಕೊಂಡು ಸವಾಲು ಸ್ವೀಕರಿಸಿದೆ. ದೇಶವಿಭಜನೆಯ ನಂತರ ನೋವು, ಹತಾಶೆ, ಯಾತನೆಯನ್ನು ಮನಮುಟ್ಟುವಂತೆಕಟ್ಟಿಕೊಡಲಾಗಿದೆ.

ಅದರಲ್ಲಿ ನಿಮ್ಮ ಪಾತ್ರದ ಬಗ್ಗೆ ವಿವರಿಸಿ

ನಾಟಕದಲ್ಲಿ ನನ್ನದು ವಜಿರಾ ಎಂಬ ಪತ್ರಕರ್ತೆಯ ಪಾತ್ರ. ತನ್ನೊಳಗಿನ ತುಮಲುಗಳಿಗೆ ಉತ್ತರ ಕಂಡುಕೊಳ್ಳಲು ಸಾದತ್‌ ಹಸನ್‌ ಮಾಂಟೋ ಅವರಿಂದ ಮಾತ್ರ ಸಾಧ್ಯ ಎಂದು ಅವರನ್ನು ಹುಡುಕಿಕೊಂಡು ಪಾಕಿಸ್ತಾನಕ್ಕೆ ಹೋಗುವ ಪತ್ರಕರ್ತೆಯ ಪಾತ್ರವಿದು.

ಶೇಖರ್‌ ಸುಮನ್‌ ಮತ್ತು ರಣದೀರ್‌ ರಾಯ್‌ ಜತೆ ಕೆಲಸ ಮಾಡುವ ಅನುಭವ ಹೇಗಿತ್ತು?

ಒಂದೇ ವೃತ್ತಿ ಮತ್ತು ಅಭಿರುಚಿಯವರಾದ ಕಾರಣ ನಾವೆಲ್ಲರೂ ಮೊದಲಿನಿಂದಲೂ ಚಿರಪರಿಚಿತರು. ಹಾಗಾಗಿ ಅವರೊಂದಿಗೆ ಕೆಲಸ ಮಾಡುವುದು ಅತ್ಯಂತ ಖುಷಿಯ ವಿಚಾರ.

ರಂಗಭೂಮಿ ಮತ್ತು ನಟನೆ ಬಿಟ್ಟರೆ ಮತ್ತೇನು ಮಾಡುತ್ತಿದ್ದೀರಿ?

ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅಮೇಜಾನ್‌ ಪ್ರೈಮ್‌ನಲ್ಲಿ ಮಾರ್ಚ್‌ನಿಂದ ಪ್ರಸಾರವಾಗಲಿರುವ ಸೀರಿಸ್‌ಗಾಗಿ ಸ್ಕ್ರಿಪ್ಟ್‌ ಸಿದ್ಧಪಡಿಸುತ್ತಿದ್ದೇನೆ.

ಬೆಂಗಳೂರು ನಗರದ ಅನುಭವ ಹೇಗನ್ನಿಸುತ್ತದೆ?

ಬೆಂಗಳೂರು ನನ್ನ ಎರಡನೇಯ ಮನೆ ಇದ್ದಂತೆ. ನನ್ನ ಅಪ್ಪ ಮತ್ತು ಅಮ್ಮ ಇಲ್ಲಿಯೇ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಅವರು ವಾಸಿಸುತ್ತಿರುವ ಮೂಲೆಯ ಮನೆ ಇಂದಿಗೂ ನನ್ನ ಅಚ್ಚುಮೆಚ್ಚಿನ ಸ್ಥಳ.

ಒಂಬತ್ತು ವರ್ಷಗಳ ಸುದೀರ್ಘ ಬ್ರೇಕ್‌ ನಂತರ ನಟಿ ಸುಚಿತ್ರಾ ಕೃಷ್ಣಮೂರ್ತಿ ಮತ್ತೆ ಬಣ್ಣ ಹಚ್ಚಿದ್ದಾರೆ. 1987ರಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ‘ಚುನೌತಿ’ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಸುಚಿತ್ರಾ ಮದುವೆಯ ನಂತರ ನಟನೆಯಿಂದ ದೂರ ಉಳಿದಿದ್ದರು. ನಗರದಲ್ಲಿ ಈಚೆಗೆ ಪ್ರದರ್ಶನಗೊಂಡ ‘ಏಕ್‌ ಹ್ಞಾಂ’ ನಾಟಕಕ್ಕಾಗಿ ಮುಖಕ್ಕೆ ಮತ್ತೆ ಬಣ್ಣ ಹಚ್ಚಿದ ಅವರು ‘ಮೆಟ್ರೊ’ ಜತೆ ಮಾತಿಗೆ ಸಿಕ್ಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.