ADVERTISEMENT

ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ‘ವಿಕ್ರಾಂತ್‌ ರೋಣ’: ಜಾಕ್‌ ಮಂಜು

ಪಾಕಿಸ್ತಾನದಲ್ಲೂ ಶೋ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 8:02 IST
Last Updated 25 ಜುಲೈ 2022, 8:02 IST
ಸುದೀಪ್‌ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್‌
ಸುದೀಪ್‌ ಹಾಗೂ ಜಾಕ್ವೆಲಿನ್‌ ಫರ್ನಾಂಡಿಸ್‌   

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆ ಹೊಸ್ತಿಲಲ್ಲಿದೆ. ಜುಲೈ 28ಕ್ಕೆ ವಿಶ್ವದಾದ್ಯಂತದ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ಮಾಹಿತಿ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಸದ್ಯ 390 ಚಿತ್ರಮಂದಿರಗಳು ಬುಕ್‌ ಆಗಿವೆ. ಜುಲೈ 28ರ ವೇಳೆಗೆ 400–425 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ವಿಕ್ರಾಂತ್‌ ರೋಣ ತೆರೆಕಾಣಲಿದ್ದು, ಹಿಂದಿಯಲ್ಲೇ ಇಲ್ಲಿಯವರೆಗೆ 900 ಪರದೆಗಳು ಬ್ಲಾಕ್‌ ಆಗಿವೆ. ಈ ಪೈಕಿ ಶೇ 90ರಷ್ಟು 3ಡಿ ಚಿತ್ರಮಂದಿರಗಳೇ ಇವೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುವ ಸಾಧ್ಯತೆ ಇದೆ. ದಕ್ಷಿಣ ಭಾರತದಲ್ಲೇ ಈ ರಾಜ್ಯಗಳಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ’ ಎಂದರು.

ಊರ್ವಶಿಯಲ್ಲಿ ಸದ್ಯಕ್ಕಿಲ್ಲ 3ಡಿ
‘ಎಲ್ಲೆಲ್ಲಿ 3ಡಿ ಸೌಲಭ್ಯವಿದೆಯೋ ಅಲ್ಲಲ್ಲಿ 3ಡಿಯಲ್ಲೇ ‘ವಿಕ್ರಾಂತ್‌ ರೋಣ’ ಸಿನಿಮಾ ತೆರೆಕಾಣಲಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸದ್ಯಕ್ಕೆ 3ಡಿ ಸೌಲಭ್ಯವಿಲ್ಲ. ಅವರು ಆ್ಯಕ್ಟಿವ್‌ ಗ್ಲಾಸ್‌ಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಅವುಗಳು ತಲುಪಲು ತಡವಾಗುತ್ತದೆ ಎನ್ನುವ ಮಾಹಿತಿಯಿದ್ದು, ಹೀಗಾಗಿ ಮೊದಲ ಕೆಲವು ದಿನ ಊರ್ವಶಿ ಚಿತ್ರಮಂದಿರಗಳಲ್ಲಿ 3ಡಿ ಇರುವುದಿಲ್ಲ. ಬದಲಾಗಿ 2ಡಿಯಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ’ ಎಂದು ಮಂಜು ಅವರು ಸ್ಪಷ್ಟನೆ ನೀಡಿದರು.

ADVERTISEMENT
ನಿರ್ಮಾಪಕ ಜಾಕ್‌ ಮಂಜು

‘ಸರ್ಕಾರ ನಿಗದಿಪಡಿಸಿದಂತೆಯೇ ಗುರುವಾರ, ಶುಕ್ರವಾರ ಟಿಕೆಟ್‌ ದರ ₹236 ಇರಲಿದ್ದು, ವಾರಾಂತ್ಯದಲ್ಲಿ ಕೊಂಚ ಹೆಚ್ಚಾಗಬಹುದು. 3ಡಿಗೆ ಟಿಕೆಟ್‌ನ ಮೇಲೆ ದರ ಕೊಂಚ ಹೆಚ್ಚಿರಲಿದೆ. ಅದು ಚಿತ್ರಮಂದಿರಗಳ ಮಾಲೀಕರ ಕೈಯಲ್ಲಿದೆ. ಸೋಮವಾರ(ಜುಲೈ 25) ಸಂಜೆ ಮುಂಬೈನಲ್ಲಿ ಪ್ರಿರಿಲೀಸ್‌ ಕಾರ್ಯಕ್ರಮವಿದ್ದು, ಸಲ್ಮಾನ್‌ ಖಾನ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳವಾರ(ಜುಲೈ 26) ಬೆಳಗ್ಗೆ ಹೈದರಾಬಾದ್‌ನಲ್ಲಿ ಪ್ರಿರಿಲೀಸ್‌ ಕಾರ್ಯಕ್ರಮವಿದ್ದು, ನಾಗಾರ್ಜುನ ಮುಖ್ಯ ಅತಿಥಿಯಾಗಿರಲಿದ್ದಾರೆ. ಮಂಗಳವಾರ ಸಂಜೆ ಬೆಂಗಳೂರಿನ ಲುಲು ಮಾಲ್‌ನಲ್ಲಿ ಪ್ರಿರಿಲೀಸ್‌ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ, ಉಪೇಂದ್ರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ’ ಎಂದರು.

ಪಾಕಿಸ್ತಾನದಲ್ಲೂ ‘ವಿಕ್ರಾಂತ್‌ ರೋಣ’ ಶೋ
‘ದುಬೈನಲ್ಲಿ ಜುಲೈ 27ಕ್ಕೆ 5 ಪರದೆಗಳಲ್ಲಿ 5 ಭಾಷೆಗಳಲ್ಲಿ ಪ್ರೀಮಿಯರ್‌ ಶೋ ನಡೆಯಲಿದೆ. ಒಟ್ಟು 27 ದೇಶಗಳಲ್ಲಿ ಜುಲೈ 27ಕ್ಕೆ ಪ್ರೀಮಿಯರ್‌ ಶೋ ನಡೆಯಲಿದ್ದು, ಸುಮಾರು 30–31 ದೇಶಗಳಲ್ಲಿ ವಿಕ್ರಾಂತ್‌ ರೋಣ ತೆರೆಕಾಣಲಿದೆ. ಪಾಕಿಸ್ತಾನದಲ್ಲಿ ಕಳೆದ ಮೂರು ತಿಂಗಳಿಂದ ಭಾರತದ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದು, ಇಲ್ಲೂ ಸಿನಿಮಾ ರಿಲೀಸ್‌ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಜಾಕ್‌ ಮಂಜು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.