ADVERTISEMENT

ಫ್ಯಾಂಟಮ್‌ನ ವಿಡಿಯೊ ಹಂಚಿಕೊಂಡ ಕಿಚ್ಚ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 8:17 IST
Last Updated 20 ಜುಲೈ 2020, 8:17 IST
'ಫ್ಯಾಂಟಮ್' ಚಿತ್ರದಲ್ಲಿ ಸುದೀಪ್
'ಫ್ಯಾಂಟಮ್' ಚಿತ್ರದಲ್ಲಿ ಸುದೀಪ್   

ಕಿಚ್ಚ ಸುದೀಪ್‌ ಮತ್ತು ನಿರ್ದೇಶಕ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಚಿತ್ರ ‘ಫ್ಯಾಂಟಮ್‌’ ಹೈದರಾಬಾದ್‌ನಲ್ಲಿ ಭರದಿಂದ ಸಾಗಿದೆ. ಚಿತ್ರೀಕರಣದ ಅ‍ಪರೂಪದ ವಿಡಿಯೊ ತುಣುಕೊಂದನ್ನು ಸುದೀಪ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ‘ಫ್ಯಾಂಟಮ್‌’ ಚಿತ್ರದ ಬಗ್ಗೆ ಸಿನಿರಸಿಕರ ಕುತೂಹಲ ದ್ವಿಗುಣಗೊಳಿಸುವಂತಿದೆ. ಸಾಮಾಜಿಕ ಜಾಲತಾಣಗಳಲ್ಲೂಈ ವಿಡಿಯೊಗೆ ಸಿನಿಮಾ ಮಂದಿಯಿಂದಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಮೊದಲ ದಿನದ ಚಿತ್ರೀಕರಣದ ದೃಶ್ಯವೊಂದನ್ನು ಹಂಚಿಕೊಂಡಿರುವ ಅವರು, ಇದು ಟೀಸರ್‌ ಅಲ್ಲ, ಮತ್ತೆ ಶೂಟಿಂಗ್‌ ಶುರುವಾಗಿರುವ ಸಂಭ್ರಮದ ಸಲುವಾಗಿ ಈ ವಿಡಿಯೊ ಅನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುವುದಾಗಿ ಕಿಚ್ಚ ಹೇಳಿದ್ದಾರೆ. ವಿಕ್ರಾಂತ್ ರೋನಾ ಎಂಬ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಕಿಚ್ಚ ಹೇಳಿಕೊಂಡಿದ್ದು, #PhantomBegins ಎಂಬ ಹ್ಯಾಶ್ ಟ್ಯಾಗ್ ನಮೂದಿಸಿದ್ದಾರೆ.

‘ಕೊರೊನಾವೆಂಬ ಭೀತಿಯಿಂದ ಬೆಳಕು ಕಾಣದೆ ಕಗ್ಗತ್ತಲ ಕಾಡಿನೊಳಗೆ ಬೆಚ್ಚಿಕೊಂಡು ಬಚ್ಚಿಕುಳಿತ ಚಿತ್ರರಂಗಕ್ಕೆ
ದೀಪವಿಡಿದು ದಾರಿಮಾಡಿ ಧೈರ್ಯ ತುಂಬಿದಂತಿರುವ ಮೆಚ್ಚುಗೆಯ ಅರ್ಥಪೂರ್ಣ ದೃಶ್ಯ....’ ಎಂದು ನಟ ರವಿಶಂಕರ್‌ಗೌಡ ಪ್ರಶಂಸಿಸಿ ರಿಟ್ವೀಟ್‌ ಮಾಡಿದ್ದಾರೆ. ನಿರ್ದೇಶಕ ಸಿಂಪಲ್‌ ಸುನಿ ಸಹ ‘ಗುಮ್ಮ ಬಂದ ಗುಮ್ಮ ಬಂದ’ ಒಕ್ಕಣೆಯೊಂದಿಗೆಈ ವಿಡಿಯೊ ಅನ್ನು ರಿಟ್ವೀಟ್‌ ಮಾಡಿದ್ದಾರೆ.

ADVERTISEMENT

ಕೊರೊನಾಗೂ ಮುಂಚೆಯೇ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿತ್ತು. ಆದರೆ, ಕೊರೊನಾ ಲಾಕ್‌ಡೌನ್ ನಂತರ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಶೂಟಿಂಗ್‌ ನಡೆಸಲು ಸರ್ಕಾರ ಅನುಮತಿ ನೀಡಿದ ನಂತರ ಫ್ಯಾಂಟಮ್ ಚಿತ್ರತಂಡ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದ್ದು, ಅನ್ನಪೂರ್ಣ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಛಾಯಾಗ್ರಹಣ ವಿಲಿಯಂ ಡೇವಿಡ್‌, ಸಂಗೀತ ಅಜನೀಶ್‌ ಬಿ. ಅವರದು. ಈ ಚಿತ್ರಕ್ಕೆ ಜಾಕ್‌ ಮಂಜು ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.