ADVERTISEMENT

ಮಹಮ್ಮದ್‌ ರಫೀಕ್‌ ಕೊಟ್ಟೂರು ಅವರ ಕಥೆ | ಅಂದಿಗಾಲಪ್ಪನೆಂಬ ನೀರ್‌ ಕಾಗೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 19:30 IST
Last Updated 7 ಜನವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಂದಿಗಾಲಪ್ಪ ತನ್ನ ಕಾಲುಗಳನ್ನು ರಭಸವಾಗಿ ಹರಿಯುತ್ತಿರುವ ತುಂಗಭದ್ರೆ ಕಾಲುವೆಯಲ್ಲಿ ಇಳಿಬಿಟ್ಟು ಸೇತುವೆಯ ಅಡಿಯಲ್ಲಿ ಹಾರುತ್ತಿದ್ದ ಗುಬ್ಬಿಗಳನ್ನೇ ನೋಡುತ್ತಿದ್ದ. ಒಂದಲ್ಲ ಎರಡಲ್ಲ ಸಾವಿರ ಸಾವಿರ ಗುಬ್ಬಿಗಳು ಕಾಲುವೆ ಅಡಿ ಹಾರುತ್ತಿದ್ದವು. ಕಾಲುವೆ ತುಂಬಿ ಹರಿಯುವಾಗ ಮಾತ್ರ ಈ ದೃಶ್ಯ ನೋಡಲು ಸಿಗುತ್ತಿತ್ತು. ಬೇರೆ ಸಂದರ್ಭದಲ್ಲಿ ಅವು ಎಲ್ಲಿರುತ್ತವೆಯೋ ದೇವರಿಗೇ ಗೊತ್ತು. ಗುಂಪಾಗಿ ಹಾರುವುದು, ಕಾಲುವೆ ತುಂಬಿ ಹರಿಯುವಾಗ ನೀರ ಮೇಲಿನ ಕೀಟಗಳನ್ನು ಹಿಡಿಯುವುದು ಇಡೀ ದಿನವೂ ನೋಡಸಿಗಬಹುದಾದ ದೃಶ್ಯವಾಗಿತ್ತು. ಇದು ಅಂದಿಗಾಲಪ್ಪನಿಗೆ ಅಂತಹ ವಿಶೇಷವಲ್ಲದಿದ್ದರೂ ಹಾಗೆಯೇ ಕುಳಿತು ನೋಡುತ್ತಲೇ ಇದ್ದ.

ಆಚೆ ದಡದಲ್ಲಿ ನೀರ ಕಾಗೆಯೊಂದು ತನ್ನ ರೆಕ್ಕೆಗಳನ್ನು ಚಾಮರದಂತೆ ಹರಡಿಕೊಂಡು ಬಿಸಿಲಿಗೆ ಒಣಗಿಸಿಕೊಳ್ಳುತ್ತಿತ್ತು. ಈ ಕಾಗೆ ಊರ ಕಾಗೆಯಂತಲ್ಲ. ನೀರ ಮೇಲೆ ಈಜುತ್ತಿರುವ, ನೀರೊಳಗೆ ಈಜುತ್ತಿರುವ ಮೀನನ್ನ ಮೇಲಿನಿಂದಲೇ ಗುರುತಿಸಿ ತನ್ನ ವೇಗ ಮತ್ತು ಮೀನಿನ ವೇಗವನ್ನು ಸಮೀಕರಿಸಿ, ಪಕ್ಕ ಲೆಕ್ಕಾಚಾರದೊಂದಿಗೆ ಹಾರುತ್ತಲೇ ನೀರೊಳಗ ಸುರಂಗ ಹೊಡೆದು ಮೀನು ಹಿಡಿಯುತ್ತದೆ, ಪುನಃ ಬಾತುಕೋಳಿಯಂತೆ ಈಜುತ್ತಾ ಮೇಲೆ ಬಂದು, ಬಂದ ವೇಗದಲ್ಲಿಯೇ ನೀರಿನಿಂದ ಆಗಸಕ್ಕೆ ಚಿಮ್ಮುತ್ತದೆ. ಈ ನೀರಿನ ಮೇಲ್ಮೈಯಿಂದ ಆಕಾಶಕ್ಕೆ ನೆಗೆಯುವುದನ್ನು ನೋಡುವುದೇ ಒಂದು ಅದ್ಭುತ. ವಿಮಾನದ ಆಕಾರದ ಈ ಪಕ್ಷಿಗೆ ಅದರ ದೇಹ ಅದೆಷ್ಟು ಹಗುರವಾಗಿರಬಹುದೆಂದು ಅದನ್ನು ನೋಡಿದ ಯಾರಿಗಾದರೂ ಅಚ್ಚರಿಯಾಗದಿರದು. ಅದರ ದೇಹ ರಚನೆ ಪ್ರಕೃತಿ ಅದಕ್ಕೆ ಕೊಡಮಾಡಿದ ವರವೇ ಸರಿ. ಅಂದಿಗಾಲಪ್ಪನಿಗೆ ಆ ಪಕ್ಷಿಯನ್ನು ನೋಡಿದಾಗೊಮ್ಮೆ ತಾನು ಈ ಮನುಷ್ಯನಾಗುವ ಬದಲು ಈ ಕಾಗೆಯಾಗಿದ್ದರೆ ಚೆನ್ನಾಗಿತ್ತು ಎಂದು ಅಂದುಕೊಳ್ಳುತ್ತಿದ್ದ. ಇನ್ನು ನೀರಿನಲ್ಲಿ ಮುಳುಗಿ ಏಳುತ್ತಲೇ ದಡದಲ್ಲಿ ಕುಳಿತು ನವಿಲಿನಂತೆ ಇಡೀ ರೆಕ್ಕೆಗಳನ್ನು ಅಗಲಿಸಿಕೊಂಡು ಒಣಗಿಸಿಕೊಂಡು ತನ್ನ ಭಾರವನ್ನೆಲ್ಲಾ ಕಳೆದುಕೊಳ್ಳುವ ರೀತಿಯಂತೂ ಮನಮೋಹಕ. ಮನುಷ್ಯ ಹೀಗಾಗಲಾರ..ಕಳೆದುಕೊಳ್ಳಬೇಕೆನಿಸಿದರೂ ಕಳೆದುಕೊಳ್ಳಲಾಗದೇ ಹಿಂದಿನ ಭಾರಗಳ ಹೊತ್ತುಕೊಂಡೇ ಸಾಗಬೇಕು. ಜನರ ಬಾಯಿಯಲ್ಲಿ ಅಂದಪ್ಪನಾಗುವ ಅಂದಿಗಾಲಪ್ಪನ ಇಷ್ಟವಾದ ಪಕ್ಷಿಯಿದು. ಅದು ಅವನಿಗೆ ಕಂಡಿತೆಂದರೆ ಕೆಲಸ ಕಾರ್ಯಗಳನ್ನು ಮರೆತು ಅದು ಈಜುವುದು ಬೇಟೆಯಾಡುವುದನ್ನು ನೋಡುತ್ತಾ ನಿಂತು ಬಿಡುತ್ತಿದ್ದ. ಅದು ಬಿಸಿಲಿಗೆ ರೆಕ್ಕೆ ಹರಡಿ ಹಗುರವಾಗುವುದ ನೋಡು ನೋಡುತ್ತಾ ತನ್ನ ಮನಸಿನ ಭಾರಗಳ ಕಡಿಮೆ ಮಾಡಿಕೊಳ್ಳುತ್ತಿದ್ದ.

ಸಾಮಾನ್ಯವಾಗಿ ಆಗಸ್ಟ್‌ ಸುಮಾರಿಗೆ ತುಂಗಭದ್ರಾ ಜಲಾಶಯ ಭರ್ತಿಯಾದರೆ ಜಲಾಶಯದ ನೀರು ಖಾಲಿಯಾಗುವವರೆಗೂ ಸತತವಾಗಿ ಕಾಲುವೆ ತುಂಬಿ ಹರಿಯುತ್ತಿತ್ತು. ಈ ಕಾಲುವೆಯು ಇಕ್ಕೆಲದ ಮನೆಗಳಿಗೆ ಅವರ ಜೀವನದ ಭಾಗವಾಗಿತ್ತು. ತಮ್ಮ ಗೂಡುಗಳನ್ನು ಮನೆಯೆಂದು ಕರೆದುಕೊಳ್ಳುವ ಈ ಜನರು ತಮ್ಮ ಪಾತ್ರೆ ತೊಳೆಯಲು, ಬಟ್ಟೆ ತೊಳೆಯಲು, ಗಂಡಸರು ಸ್ನಾನ ಮಾಡಲು ನೇರವಾಗಿ ಕಾಲುವೆಯ ಮೊರೆ ಹೋಗುತ್ತಿದ್ದರು. ಕಾರಣ ಆ ಮನೆಗಳೆಂಬ ಆವಾಸದೊಳಗೆ ನೀರು ಕುಡಿಯುವುದಕ್ಕೆ ಮಾತ್ರ ಸಂಗ್ರಹವಾತ್ತಿತ್ತು. ಹಲವಾರು ಕುಟುಂಬಗಳ ವೃತ್ತಿಗಳು ಕಾಲುವೆಯ ನೀರಿನ ಪ್ರಮಾಣವನ್ನು ಅವಲಂಬಿಸಿ ಬದಲಾಗುತ್ತಿತ್ತು. ನಿರ್ಧಿಷ್ಟವಾಗಿ ಇವರ ವೃತ್ತಿ ಇದೇ ಎಂದು ಹೇಳಲಾಗದ ಬದುಕು ಇವರದು. ಕಾಲುವೆಯೊಳಗೆ ನೀರು ಹರಿಯುತ್ತಿದೆಯೆಂದರೆ ಮೀನು, ಏಡಿಗಳನ್ನು ಹಿಡಿದು ಮಾರಿ ಜೀವನ ಸಾಗಿಸುತ್ತಾರೆ. ಮಕ್ಕಳು, ಯುವಕರು ಮುದುಕರು ಮಹಿಳೆಯರಾದಿಯಾಗಿ ವಿಧ ವಿಧ ಬಲೆಗಳಿಂದ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೆ. ಕಾಲುವೆಯಿಂದ 2-3 ಕಿ.ಮೀ. ದೂರದವೆಗಿನ ಜನವಸತಿ ಪ್ರದೇಶಗಳಲ್ಲಿ ಇರುವ ಜನರ ನೋಡಿದರೆ ಇವರ ಬದುಕು ಮತ್ತು ಕಾಲುವೆಯ ನೀರು ಒಟ್ಟೊಟ್ಟಿಗೆ ಸಾಗುತ್ತಿರುವಂತೆನಿಸದೇ ಇರದು. ಕಾಲುವೆಯ ನೀರು ಕಡಿಮೆಯಾದಂತೆ ಇವರ ಮುಖದ ಮೇಲಿನ ನಗುವು ನಿಧಾನವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಬೇರೆ ವೃತ್ತಿ ಮಾಡಲು ಅಣಿಯಾಗುತ್ತಿದ್ದರು. ಕಾಲುವೆ ತುಂಬಿ ಹರಿಯುತ್ತಿದ್ದಾಗ ಇದ್ದ ಜೀವಂತಿಕೆ, ನೀರು ಕಡಿಮೆಯಾದಂತೆಲ್ಲಾ ಕಡಿಮೆಯಾಗುತ್ತಾ ಹೋಗುತ್ತದೆ.

ADVERTISEMENT

ಇವರ ಬದುಕಿನ ಭಾಗವಾದ ಈ ಕಾಲುವೆಯ ಬೆನ್ನ ಮೇಲೆ ಅಂಜನಾದ್ರಿ ಪರ್ವತಕ್ಕೆ ಹೋಗುವ ಮುಖ್ಯ ರಸ್ತೆ ಹಾದು ಹೋಗುತ್ತಿತ್ತು. ದೇಶದ ಮೂಲೆ ಮೂಲೆಗಳಿಂದ ಪ್ರಯಾಣಿಕರು ಅಂಜನೀ ಪುತ್ರನ ಜನ್ಮಸ್ಥಳ ನೋಡಲು ಬರುತ್ತಲೇ ಇರುತ್ತಾರೆ. ಇತ್ತೀಚೆಗೆ ಈ ಬೆಟ್ಟ ದೇಶದಾದ್ಯಂತ ಇರುವ ಭಕ್ತಾದಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗೆ ಹೋಗಿ ಬರುವವರು ಭಿಕ್ಷುಕರಿಗೆ ಒಂದು ಕಿಲುಬು ಕಾಸು ನೀಡದಿದ್ದರೂ ಕಾಲುವೆಗೆ ನಾಣ್ಯಗಳನ್ನು ಎಸೆಯುತ್ತಲೇ ಇರುತ್ತಾರೆ. ಹೀಗೆ ತಳ ಸೇರಿ ಮರಳಿನಲ್ಲಿ ಹುದುಗಿದ ನಾಣ್ಯಗಳನ್ನು ಕಾಲುವೆಯೊಳಗಿನ ನೀರು ಕಡಿಮೆಯಾತಿತೆಂದರೆ ಮಕ್ಕಳು ಶಾಲೆಗೆ ಚಕ್ಕರ್‌ ಹೊಡೆದು ನೀರು ಕಾಗೆಗಳಂತೇ ಮುಳುಗಿ ನಾಣ್ಯಗಳನ್ನು ಆಯುತ್ತಾರೆ. ದಣಿವಾಯಿತೆಂದರೆ ಆ ನೀರಕಾಗೆಗಳಂತೆಯೇ ಇವರೂ ದಡದಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಾರೆ. ಈ ಹಣದಲ್ಲಿ ಮನೆಯವರಿಗೆ ಪಾಲನ್ನು ಕೊಡುವುದರಿಂದ ಮಕ್ಕಳನ್ನು ಮನೆಯವರು ಬಯ್ಯುವುದೂ ಇಲ್ಲ. ನಾಣ್ಯ ಆಯುವುದಕ್ಕೆ ಬೇಡವೆನ್ನುವುದೂ ಇಲ್ಲ.

ಇನ್ನು ವಯಸ್ಸಾದವರು ಕಾಲುವೆ ಬತ್ತಿತೆಂದರೆ ಅಂಗಡಿಯಿಂದ ನೈಲಾನ್‌ ಎಳೆಗಳನ್ನು ತಂದು ಮೀನು ಬಲೆಯನ್ನು ತಯಾರಿಸಿದ್ದೇ ತಯಾರಿಸಿದ್ದು. ಕಾಲುವೆ ತುಂಬಿ ಹರಿಯುವವರೆಗೆ ಬಲೆ ತಯಾರಿ ನಡೆದೇ ಇರುತ್ತದೆ. ಈ ಬಲೆ ಯಾರಿಗೆ ಎಂದು ಕೇಳಿದರೆ, ಯಾರಾದರೂ ಗಿರಾಕಿಗಳು ಕೇಳಿದರೆ ಕೊಡುತ್ತೇವೆ, ಕೆಲವೊಮ್ಮೆ ಮುಂಚೆಯೇ ಹೇಳಿ ಮಾಡಿಸಿಕೊಂಡು ಹೋಗುತ್ತಾರೆ, ಕೊನೆಗೆ ನಮಗಾದರೂ ಬಳಕೆಗೆ ಬರುತ್ತದೆ ಎನ್ನುತ್ತಾರೆ. ಕಾಲುವೆ ತುಂಬಿತೆಂದರೆ ಮತ್ತೆ ಬದುಕಿನ ಹೋರಾಟ ಶುರು.

ವಯಸ್ಕ ನಿರುದ್ಯೋಗಿಗಳಿಗೋ, ನೀರು ಖಾಲಿಯಾತೋ ಕಾಲುವೆಯ ಹರಿವಿನ ಜೊತೆ ನೆಲಮಟ್ಟದಲ್ಲಿ ಮರಳು ನೆಲಹಾಸಿನಂತೆ ತುಂಗಭದ್ರೆ ಹೊತ್ತು ಇವರಿಗಾಗಿಯೇ ತಂದಿರುತ್ತಾಳೆ. ಈ ಮರಳನ್ನು ಬಳಿದು ಮಾರುವುದ ವೃತ್ತಿಯಾಗಿಸಿಕೊಂಡು ಬದುಕಿನ ಮತ್ತೊಂದು ಮಜಲನ್ನು ಕಾಲುವೆಯಂತೆ ಬದಲಿಸುತ್ತಾರೆ. ಮರಳಿನ ದಂಧೆ ರಾತ್ರಿಯಿಡೀ ನಡೆಯುತ್ತದೆ. ಹೀಗೆ ಈ ಕಾಲುವೆಯ ವಿವಿಧ ಜೀವಪರ ಮುಖಗಳನ್ನು ಅಂದಪ್ಪನಂಥವರು ಮಾತ್ರ ಅನುಭವಿಸುತ್ತಿದ್ದರು.

ಹಕ್ಕಿಗಳು ಸ್ಪರ್ಧೆಗೆ ಬಿದ್ದಂತೆ ಚಿಂವ್ ಗುಟ್ಟುತ್ತಿದ್ದವು. ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಹೊಟ್ಟೆ ಚುರುಗುಟ್ಟುತ್ತಿತ್ತು. ಆದರೂ ಇನ್ನೂ ತಿನ್ನಲು ಮನಸ್ಸು ಬರುತ್ತಿಲ್ಲದ್ದರಿಂದ ಅಂದಪ್ಪ ಮೇಲೇಳದೇ ಅಲ್ಲಿಯೇ ಕುಳಿತಿದ್ದ. ಬಿಸಿಲ ಝಳ ಇತ್ತಾದರೂ ನೀರಿನೊಳಗೆ ಕಾಲು ಇಳಿಬಿಟ್ಟಿದ್ದರಿಂದ ಅಷ್ಟಾಗಿ ಬಿಸಿಲು ಅನುಭವಕ್ಕೆ ಬರುತ್ತಿರಲಿಲ್ಲ.

ಸೇತುವೆಯ ಮೇಲಿನ ಜಗಳವಾಡುತ್ತಿರುವ ದನಿಗೆ, ಅಂದಪ್ಪ ತಲೆ ಎತ್ತಿ ನೋಡಿದ. 16ರಿಂದ18 ವಯಸ್ಸಿನ ಹುಡುಗಿ, ಕಣ್ಣಲ್ಲಿ ನೀರು ತುಂಬಿಕೊಂಡು 22-23 ವಯಸ್ಸಿನ ಹುಡುಗನೊಡನೆ ಜಗಳವಾಡುತ್ತಿದ್ದಳು. ನೀರಿನ ಶಬ್ದಕ್ಕೆ ಮಾತುಗಳು ಕೇಳದಿದ್ದರೂ, ಕಿರುಚುವಿಕೆ ಕೇಳುತ್ತಿತ್ತು. ಮುಖ್ಯವಾದ ಯಾವುದೋ ವಿಷಯಕ್ಕೆ ಈ ಜಗಳ ನಡೆಯುತ್ತಿದೆ ಎಂದು ದೂರದಿಂದ ನೋಡಿದರೂ ಗೊತ್ತಾಗುವಂತಿತ್ತು.

ಹುಡುಗಿಯ ಅಳು, ಅವನ ಕೈ ಸನ್ನೆಗಳನ್ನೇ ನೋಡುತ್ತಾ ಅಂದಪ್ಪ ನೀರು ಕಾಗೆಯ ಬಿಟ್ಟು ಹಾಗೆಯೇ ಕುಳಿತೇ ಇದ್ದ. ಹುಡುಗ ಹುಡುಗಿಯ ಕೈಯನ್ನು ಹಿಡಿದುಕೊಂಡಿದ್ದ. ಕೈಯನ್ನು ಅವನ ಕೈಯಿಂದ ಕೋಪದಿಂದ ಕೊಸರಿಕೊಂಡು ವೇಗವಾಗಿ ಸೇತುವೆ ತಡೆಗೋಡೆಯ ಬಳಿ ಬಂದು ನಿಂತಳು. ಹುಡುಗ ಮುಂದೆ ಬರದೇ ಅಲ್ಲಿಯೇ ನಿಂತಿದ್ದ. ಕೆಲ ಸಮಯ ಅಳುತ್ತಾ ಕಾಲುವೆಯ ನೀರನ್ನೇ ನೋಡುತ್ತಾ ನಿಂತಳು. ಅವಳ ನಿರೀಕ್ಷೆ ಬೇರೆಯೇ ಇತ್ತು. ಹುಡುಗ ಬರಬಹುದು ಸಮಾಧಾನಿಸಬಹುದು ಎಂದು. ಆದರೆ ಅವನು ಬಾರದೇ ಇದ್ದಾಗ ನಿರಾಶೆಯಿಂದ ಹುಡುಗಿ ತನ್ನ ಕೈಯಲ್ಲಿನ ಪರ್ಸ್‌, ಮೊಬೈಲ್‌ ಅನ್ನು ನೀರಿಗೆ ಎಸೆದಳು. ಅಂದಪ್ಪನಿಗೆ ಈಗ ಅನುಮಾನ ಶುರು ಆಯಿತು. ಜಗಳ ತನ್ನ ತಾರ್ಕಿಕ ಅಂತ್ಯ ಕಾಣುತ್ತಿದೆ ಎಂದು ಅವನಿಗೆ ಅನಿಸತೊಡಗಿತು.

ಕಾಲುವೆಯೊಂದಿಗಿನ ಅವನ ಜೀವನಾನುಭವ ಅವನಿಗೆ ಮುಂದಾಗುವ ಘಟನೆಯ ಮುನ್ಸೂಚನೆ ನೀಡುತ್ತಿತ್ತು. ಹಾಗಾಗಿಯೇ ಎಲ್ಲಿ ಈ ಹುಡುಗಿ ಕಾಲುವೆಗೆ ಹಾರುತ್ತಾಳೋ, ನೀರು ನೋಡಿದರೆ ಕಾಲುವೆಯ ತುಂಬಾ ರಭಸವಾಗಿ ಹರಿಯುತ್ತಿದೆ. ತುಂಗಭದ್ರೆಯ ಎಡದಂಡೆ ಕಾಲುವೆಯಾದ್ದರಿಂದ ನೀರಿನ ಹರಿವೂ ಜೋರಾಗಿತ್ತು. ಮತ್ತೆ ಅಂದಪ್ಪ ಹುಡುಗಿಯ ಕಡೆ ನೋಡಿದ. ಅವಳು ಕೈಯಿಂದ ನೀರಿನೆಡೆ ತೋರಿಸಿ ಏನೋ ಹೇಳಿದಂತೆ ಅನಿಸಿತು. ಹುಡುಗ ಇಲ್ಲವೆನ್ನುವ ಸಂಕೇತ ತೋರಿಸುತ್ತಾ ಅವಳಿಗೆ ಬೆನ್ನು ಮಾಡಿ ಹೊರಟು ನಿಂತ. ಹುಡುಗಿ ಸಿಟ್ಟಿನಿಂದ ಏದುಸಿರು ಬಿಡುತ್ತಿರುವುದು ದೂರದಿಂದ ಅಂದಪ್ಪನಿಗೆ ಕಾಣುತ್ತಿತ್ತು. ಕಾಲುವೆಯ ತಡೆಗೋಡೆ ಏರಿದಾಗ ಅಂದಪ್ಪನಿಗೆ ಗ್ಯಾರಂಟಿಯಾಯ್ತು ಇವಳು ಹಾರುತ್ತಾಳೆ... ಗ್ಯಾರಂಟಿ ಹಾರುತ್ತಾಳೆ ಎಂದು. ಕೈಯಿಂದ ಬೇಡ ಬೇಡ ಎಂದು ಹೇಳುತ್ತಾ ಅವಳೆಡೆಗೆ ಓಡಬೇಕೆನ್ನುವಷ್ಟರಲ್ಲಿಯೇ ಹಾರಿಯೇ ಬಿಟ್ಟಳು. ಧಡಲ್‌ ಎಂಬ ಸದ್ದು ಅಂದಪ್ಪನಿಗೆ ಕೇಳಿಸಿದ್ದೇ ತಡ ಛೇ...ಎಂದ. ಅಂದುಕೊಂಡೆ.. ಇವಳು ಹಾರುವಳು ಎಂದು.. ಅಂದಂತೆಯೇ ಆಯಿತು.

ಅಂದಪ್ಪ ತಡಮಾಡಲಿಲ್ಲ. ಅವಳು ಹಾರಿದ ಜಾಗವನ್ನು ನೋಡಿ ಅವಳು ಮೇಲೇಳಬಹುದಾದ ದೂರವನ್ನು ಲೆಕ್ಕಿಸಿ ಕಾಲುವೆಯ ಕಾಲು ದಾರಿ ಗುಂಟ ಸ್ವಲ್ಪ ಮುಂದೆ ಹೋಗಿ ಕಾಲುವೆಗೆ ತಾನೂ ಹಾರಿದ. ಹುಡುಗಿ ಮೇಲೇಳಬಹುದಾದ ಜಾಗದ ಆಸು ಪಾಸು ತಲುಪುವಂತೆ ಈಜಿದ. ಕೆಲ ನಿಮಿಷಗಳಲ್ಲಿ ಅವನ ಪಕ್ಕದಲ್ಲಿ ಅವಳು ಮೇಲೇ ಕೆಳಗೆ ಏಳುವುದು ಕಂಡೊಡನೆ ಅವಳ ಜಡೆ ಹಿಡಿದು ದಂಡೆಗೆ ಒಂದೇ ಕೈಯಲ್ಲಿ ಈಜತೊಡಗಿದ. ದಡಕ್ಕೆ ಅವಳನ್ನು ಎಳೆದುಕೊಂಡು ಸೇರುವಷ್ಟರಲ್ಲಿ ಅಂದಪ್ಪ ಏದುಸಿರು ಬಿಡುತ್ತಿದ್ದ. ದಡದಲ್ಲಿಯೇ ನಿಂತಿದ್ದ ಕೆಲ ಜನ ಅಂದಪ್ಪನನ್ನು, ಹುಡುಗಿಯನ್ನು ದಡಕ್ಕೆ ಎಳೆದುಕೊಂಡರು. ಹುಡುಗಿ ಆರೋಗ್ಯವಾಗಿಯೇ ಇದ್ದಳು. ಕೆಲ ನಿಮಿಷಗಳಲ್ಲಿ ಸಾವರಿಸಿಕೊಂಡ ನಂತರ ಜನ ಅವಳನ್ನು ಹುಡುಗನ ಬಳಿ ಕರೆದುಕೊಂಡು ಹೋದರು. ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದ ದಂಡೆಯ ಮೇಲಿನ ಜನ ಆ ಹುಡುಗನನ್ನು ಕಾಲುವೆಯ ಪಕ್ಕದ ಆಂಜನೇಯ ಗುಡಿಯಲ್ಲಿ ವಿಚಾರಿಸಲಾರಭಿಸಿದ್ದರು.

ಕೆಲವು ಜನ ಘಟನೆಗೆ ಸಂಬಂಧಿಸಿದಂತೆ ವಿಚಾರಿಸುತ್ತಿದ್ದರೆ ಕೆಲವರು ಹುಡುಗನನ್ನು ಹಿಗ್ಗಾ-ಮುಗ್ಗಾ ಬಾರಿಸುತ್ತಿದ್ದರು. ಕೊನೆಗೆ ಹುಡುಗ ತಾವು ಯಲಬುರ್ಗಾ ತಾಲೂಕಿನ ಕುದುರೆ ಮೋತಿಯವರು ಎಂದೂ ಹೇಳಿದ. ಮದುವೆಯಾಗುತ್ತೇನೆಂದು ಹುಡುಗಿಯನ್ನು ಹುಲಿಗೆಗೆ ಕರೆದುಕೊಂಡು ಬಂದಿದ್ದಾಗಿ ಹುಡುಗ ಒಪ್ಪಿಕೊಂಡ. ಜಗಳಕ್ಕೆ ಕಾರಣ ಕೇಳಿದಾಗ ಹುಡುಗಿ ಎಸ್ಸಿ ಆಗಿದ್ದು ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಕತೆ ಹೇಳಿದ್ದನ್ನು ಕೇಳಿ ಅಂದಪ್ಪ ಹಾಗೆಯೇ ಗುಂಪಿನಿಂದ ದೂರ ಚಲಿಸಿ ಅದೇ ಜಾಗದಲ್ಲಿ ಕುಳಿತ. ಇಂತಹ ಕೇಸುಗಳು ವಾರಕ್ಕೆರಡು ಮೂರು ಕಾಲುವೆಗುಂಟ ಇದ್ದೇ ಇರುತ್ತವೆಯಾದ್ದರಿಂದ ಅಂದಪ್ಪನಿಗೆ ಅಚ್ಚರಿಯಾಗಲಿ, ನೋವಾಗಲಿ ಆಗಲಿಲ್ಲ. ಜನ ಇರುವೆಡೆ ಬಿದ್ದರೆ ಕೆಲವೊಮ್ಮೆ ಯಾರಾದರೂ ಬದುಕಿಸುವ ಪ್ರಯತ್ನ ಮಾಡುತ್ತಾರೆ. ಇಲ್ಲದಿದ್ದರೆ ಹೆಣವಾಗುತ್ತಾರೆ. ವಯಸ್ಸಿಗೆ ಮೀರಿದ ಪ್ರೌಢತೆ ಅಂದಪ್ಪನದು. ನೋಡಿ ನೋಡಿ ಸ್ಥಿತಪ್ರಜ್ಞನಂತಾಗಿದ್ದ. ಮತ್ತೆ ತನ್ನ ಜಾಗಕ್ಕೆ ಮರಳಿ ಅಲ್ಲಿಯೇ ಅದೇ ಸ್ಥಿತಿಯಲ್ಲಿಯೇ ಕುಳಿತ. ಅವನಿಗೆ ತನ್ನದೇ ಬದುಕಿನ ಚಿತ್ರಗಳು ಸ್ಮೃತಿಪಟಲದಲ್ಲಿ ಹಾದುಹೋದವು ಅಂದಪ್ಪನ ಕಣ್ಣು ಹನಿಗೂಡಿತು. ಕಾಲುವೆಯ ಮೇಲಿನಿಂದ ಯಾರೋ ಕೂಗಿದ್ದನ್ನು ನೋಡಿ ತಲೆಯೆತ್ತಿ ನೋಡಿದರೆ ಅಲ್ತಾಫ್‌. ತನ್ನ ಮನೆಯ ಪಕ್ಕದ ಜಾಹೇದಾ ಅತ್ತೆಯ ಮಗ. ತನಗೆ ತಾಯಿಯಂತೆಯೇ ಕಾಳಜಿ ಮಾಡುವ ಈ ಭೂಮಿಯ ಮೇಲಿನ ಒಂದೇ ಒಂದು ಜೀವ. ಇವನು ಅಂದಪ್ಪ ಬಾರದ್ದನ್ನು ನೋಡಿ ಅವನೇ ಇವನೆಡೆಗೆ ಬಂದು ಇವನ ಪಕ್ಕ ಕುಳಿತ.

‘ಯಾಕೋ’ ಅಂದ..‘ಮುಂಜಾನೇನು ಉಣ್ದೆ ಹಂಗೇ ಬಂದೀಯಂತಲ್ಲ ಏನಾತೋ.. ಅವ್ವಾ ಬೈಯ್ಯಾಕ್‌ ಹತ್ಯಾಳ ಎಲ್ಲಿ ಹಾಳಾಗ್‌ ಹೋಗ್ಯಾನಾ ಎಳ್ಕೊಂಡ್‌ ಬಾ ಅಂದಾಳ ನಡೀ ಹೋಗಾನು’
‘ಯಾಕೋ ಬ್ಯಾಸ್ರ ಆಗ್ಯಾದಾ ಉಣ್ಣಂಗ್‌ ಆಗ್ವಲ್ದು’
‘ಏನಾಯ್ತು ನನಗಾದ್ರೂ ಹೇಳ್ಬರ‍್ದಾ ಊಟದ್‌ ಮ್ಯಾಲೆ ಕೋಪ ಮಾಡಿಕೊಂಡ್ರ ಹೆಂಗ್’
‘ಹೂ..’ ಎಂದು ಹಾಗೆಯೇ ಕುಳಿತ ಏನೂ ಹೇಳಲಿಲ್ಲ
ಅವನಿಗೆ ಗೊತ್ತು ಅವನಾಗಿಯೇ ಮಾತನಾಡಬೇಕು ಅಲ್ಲಿಯವರೆಗೂ ಅವನು ಏನನ್ನೂ ಹೇಳೋದಿಲ್ಲ ಎಂದು.
‘ಇಲ್ಲೇ ಕೂತ್ಗಾ ಬಂದೆ’ ಎಂದು ಅಲ್ತಾಫ್‌ ಎದ್ದು ಸೇತುವೆ ಆಚೆ ಬದಿಯಲ್ಲಿದ್ದ ಅಂಗಡಿ ಕಡೆ ನಡೆದ.


ಅಂದಿಗಾಲಪ್ಪ 17 ವರ್ಷದ ಹುಡುಗ. ಮನೆಯಲ್ಲಿ ಅಜ್ಜಿ ಮಾತ್ರ ಇದ್ದಳು ಅವನ ಪಾಲಿಗೆ. ಈಗ 3 ತಿಂಗಳಿನಿಂದ ಅವಳೂ ಇಲ್ಲ. ಬೇಸರವಾದಾಗೊಮ್ಮೆ ಕಾಲುವೆಯ ನೀರಿನಲ್ಲಿ ಕಾಲು ಚಾಚಿ ದಿನಗಟ್ಟಲೇ ಕುಳಿತು ಬಿಡುತ್ತಿದ್ದ. ತಾಯಿಯ ಬಗ್ಗೆ ಆಗಲಿ ತಂದೆ ಬಗ್ಗೆ ಆಗಲಿ ಅಜ್ಜಿ ಚಕಾರವೆತ್ತುತ್ತಿರಲಿಲ್ಲ. ಸಮಯ ಅವನಿಗೆ ಎಲ್ಲವನ್ನೂ ತಿಳಿಸುತ್ತದೆ ಎಂಬುದೇ ಅವಳ ನಂಬಿಕೆ ಆಗಿತ್ತು. ತಾಯಿ ಕುರಿತು ಕೇಳಿದರೆ ನಿನ್ನ ತಾಯಿ ಸತ್ತು ಹೋದಳು ಎನ್ನುತ್ತಾಳೆ, ತಂದೆ ಬಗ್ಗೆ ಕೇಳಿದರೆ ಅವನು ಈ ಊರಿನಲ್ಲಿ ಇಲ್ಲ ಅವನೇ ನಿನ್ನನ್ನು ನೆನೆಸದಿರುವಾಗ ನೀನೇಕೆ ಅವನ ಚಿಂತೆ ಮಾಡುತ್ತೀಯ ಎನ್ನುತ್ತಿದ್ದಳು. ಅದೂ ನಿಜವೇ ಎಂದು ಮನಸು ಒಪ್ಪಿದರೂ ಕುತೂಹಲ ಅವನನ್ನು ಸುಮ್ಮನಿರಗೊಡುತ್ತಿರಲಿಲ್ಲ. ಕೊನೆಗೆ ತಂದೆ ತಾಯಿ ಯಾರೆಂದು ತಿಳಿಸದೇ ಹಾಗೇ ಸತ್ತು ಹೋದಳು. ಅವನಿಗೆ ಗೊತ್ತಿದ್ದುದು ತನ್ನ ತಂದೆ-ತಾಯಿಯದು ಅಂತರ್ಜಾತಿ ಮದುವೆ ಎಂಬುದು ಮಾತ್ರ.

ತನ್ನದೂ ಒಂದು ಜನ್ಮನಾ? ತಂದೆ ತಾಯಿ ಯಾರೆಂದು ಗೊತ್ತಿಲ್ಲ. ಮನೆ ಮಠ ಹೊಲ ಏನೂ ಇಲ್ಲ. ಕಾಲುವೆ ಪಕ್ಕದ ಸರ್ಕಾರಿ ಜಾಗದಲ್ಲಿ ನಾಲ್ಕು ಗರಿ ಹಾಕಿದ ಗುಡಿಸಲೊಂದೇ ತನ್ನ ಆಸ್ತಿ ದೇವರೆಂಬುವವನು ತನ್ನ ಪಾಲಿಗೆ ಸತ್ತು ಹೋಗಿರಬೇಕು ಎಂದು ಅಂದು ಕೊಳುತ್ತಿದ್ದ.

ಅಷ್ಟರಲ್ಲಿ ಅಲ್ತಾಫ್‌ ಹೋಟೇಲಿನಿಂದ ಮಂಡಕ್ಕಿ-ಮಿರ್ಚಿ ಹಿಡಿದುಕೊಂಡು ಬಂದಿದ್ದ. ಅವನ ಪಕ್ಕದಲ್ಲಿಯೇ ಪೇಪರ್‌ ಬಿಡಿಸಿ ತಿನ್ನು ಎನ್ನುವಂತೆ ಮುಂದೆ ಸರಿಸಿದ. ಅಂದಪ್ಪನಿಗೆ ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಕೈ ಹಾಕಿ ನಿಧಾನವಾಗಿ ಬಾಯಾಡಲಾರಂಭಿಸಿದ.

‘ಇವತ್ತಿಗೆ ತಿಂಗಳಾಯಿತು ಅಜ್ಜಿ ಸತ್ತು’
ಅಲ್ತಾಫ್‌ ‘ಹೌದು’ ಎನ್ನುವಂತೆ ತಲೆ ಆಡಿಸಿದ
‘ಅಲ್ತಾಫ್‌ ನಿಂಗ್‌ ನನ್‌ ಅಪ್ಪಅವ್ವನ್‌ ಬಗ್ಗೆ ಏನಾರ ಗೊತ್ತಾ’
‘ಗೊತ್ತು ಆದ್ರ ಭಾಳ ಗೊತ್ತಿಲ್ಲ ಅಪ್ಪನ್‌ ಮುಂದೆ ಅವ್ವ ಹೇಳ್ಬೇಕಾದ್ರೆ ಕೇಳಿದ್ದುʼ
‘ಏನು ಹೇಳುತ್ತಾರೆ’
‘ಭಾಳ ಅಲ್ವೋ ಸ್ವಲ್ಪ ಸ್ವಲ್ಪ ಅಮ್ಮನ್ನೇ ಕೇಳಿ ನೋಡು’.
‘ಆಯ್ತು ಬಿಡು ಅತ್ತೇನ ಕೇಳ್ತೀನಿ ಅಜ್ಜಿ ಸತ್‌ ಮ್ಯಾಗ ಜೀವನಾನೆ ಬ್ಯಾಸರ ಆಗ್ಯಾದ. ‌ಅಜ್ಜಿ ಇರುವವರೆಗೆ ತಂದೆ ತಾಯಿ ಬಗ್ಗೆ ತಿಳಿದುಕೊಳ್ಳಬೇಕೆನಿಸುತ್ತಿರಲಿಲ್ಲ. ಈಗ ಸಾಯೋದಕ್‌ ಮುಂಚೆ ಈ ವಿಷಯ ತಿಳಿದುಕೋಬೇಕು ಅನಿಸುತ್ತಿದೆ’
ಅವನ ಮುಖವನ್ನೇ ನೋಡುತ್ತಿದ್ದ ಅಲ್ತಾಫನಿಗೆ ಅವನ ಸ್ಥಿತಿಯಲ್ಲಿ ತನ್ನನ್ನು ಕಲ್ಪಿಸಿಕೊಂಡು ಅವನು ಹೇಳುತ್ತಿರುವುದು ಸರಿ ಎನಿಸಿದಾಗ ಸರಿ ಹೋಗೋಣ ನಡಿ ಎಂದ.

-----------

ಮನೆ ಬಾಗಿಲು ಹಾಕಿಕೊಂಡು ಜಾಹೇದಾ ಅತ್ತೆ ಕಾಲುವೆ ಪಕ್ಕ ಬಟ್ಟೆ ತೊಳೆಯುತ್ತಿದ್ದಳು. ಅಂದಪ್ಪ, ಅಲ್ತಾಫ್‌ನನ್ನು ನೋಡುತ್ತಲೇ ‘ಯಾಕೋ .. ಮುಖ ಹೀಗ್‌ ಮಾಡಕೊಂಡಿದೀಯಾ? ರಾತ್ರಿನೂ ತಡವಾಗಿ ಮನೆಗೆ ಬಂದಂಗಾತು. ಬೆಳಿಗ್ಗೆ ರೊಟ್ಟಿ ಉಣ್ತೀಯಾಂತ ಅಲ್ತಾಫ್‌ನ ಕೈಲಿ ರೊಟ್ಟಿ ಕಳಿಸೋಣ ಅಂದ್ರೆ ಆಗ್ಲೆ ಯಾವಾಗ್ಲೋ ಎದ್ದು ಹೋಗಿದೀಯಾ. ಅಲ್ಲ ವಯಸ್ಸಾಗಿತ್ತು ಅಜ್ಜಿ ಸತ್ಲು. ಸಾಯೋರ ಹಿಂದೆ ಸಾಯೋಕಾಗಲ್ಲಾ ಎಲ್ಲಾ ಮರ್ತು ಬದುಕೋದ್‌ ನೋಡ್ಬೇಕು, ಎಂದು ಮನೆ ಒಳಕ್ಕೆ ಹೋದಳು, ಅಲ್ತಾಫ್‌, ಅಂದಪ್ಪ ಹಿಂಬಾಲಿಸಿದರು.

‘ನಿನ್ನ ಪಾಲಿನ ರೊಟ್ಟಿ ಹಂಗೇ ಅದಾವಾ’ ಎಂದು ತಟ್ಟೆಯಲ್ಲಿ ರೊಟ್ಟಿ ಹಾಕಿ ತಂದು ಕೊಟ್ಟಳು.
‘ಅತ್ತೆ ನನಗೆ ಹಸಿವಿಲ್ಲ’ ಎಂದ
‘ಬಿಟ್ಟ ಅಂದ್ರೆ ನೋಡು ಹನುಮಪ್ಪನ ಮೂತಿ ಆಗ್ತತಿ ಸುಮ್ನೆ ಬಾಯಮುಚ್ಕೊಂಡು ತಿನ್ನು’
ಅಂದಪ್ಪ ಕಣ್ಣಲ್ಲಿ ನೀರು ತುಂಬಿಕೊಂಡು ಜಾಹೇದಾ ಕಡೆ ನೋಡಿದ
‘ನೋಡು ನಂಗೆ ಅಲ್ತಾಫ ಹೆಂಗೋ ನೀನೂ ಹಂಗೆ ಅದೆಲ್ಲಾ ಬ್ಯಾಡ ನಿನ್ನ ಪಾಲಿಗೆ ನಾವಿದ್ದೀವಿ ಸುಮ್ನೆ ತಿನ್ನು’
ಅವಳ ಪ್ರೀತಿಯ ಮುಂದೆ ಇವನ ಯಾವ ಆಟವೂ ನಡೆಯಲಿಲ್ಲ. ನಿಧಾನವಾಗಿ ತಿನ್ನಲಾರಂಭಿಸಿದ.
‘ಅಮ್ಮಿ ಅಂದಪ್ಪಗ ಅವ್ನ ಅಪ್ಪ ಅವ್ವನ್‌ ಬಗ್ಗೆ ನಿಂಗೆ ಗೊತ್ತೈತಲ್ಲ ಹೇಳ್ಬೇಕಂತೆ’
ಒಳಗಿದ್ದ ಜಾಹೇದಾ ಒಮ್ಮೆಲೇ ಬೆಚ್ಚಿ ಬಿದ್ದವಳಂತೆ ‘ಅದನ್ನ ತಗೊಂಡ್‌ ಎನ್ಮಾಡ್ತೀಯಾ… ಸುಮ್ನೆ ತಿನ್ನು ನಾನ್‌ ಹೇಳೀನೋ ಇಲ್ವೋ ನಾವಿದ್ದೀವಿ ನಿನಗೆ ಅಂತ’

‘ಇಲ್ಲ ಅತ್ತೆ ನಾ ತಿಳಕೊಳ್ಳಲೇ ಬೇಕು, ನೀವ್‌ ಹೇಳ್ದಿದ್ರೆ ನಾನು ಬೇರೆಯವರನ್‌ ಕೇಳ್ತೀನಿ ನೀವೇ ಹೇಳಿದರೆ ಒಳ್ಳೇದು’.

ಜಾಹೇದಾ ಎರಡು- ಮೂರು ನಿಮಿಷ ತಲೆಮೇಲೆ ಕೈ ಹೊತ್ತು ಕುಂತಳು. ನಂತರ ನಿಟ್ಟುಸಿರು ಬಿಟ್ಟು ನನಗಿಂತ ನಿಮ್ಮಾವಗ ಈ ವಿಚಾರ ಎಲ್ಲಾ ಗೊತ್ತೈತಿ, ನಾನು ಅವರಿಗೆ ಎಲ್ಲಾ ಹೇಳಿರ‍್ತೀನಿ, ರಾತ್ರಿ ಅವರು ಬರ್ಲಿ ನೀನು ಬಂದ್‌ ಬಿಡು ಇಲ್ಲೇ ಅಂಗಳದಾಗ ಎಲ್ರೂ ಮಲಕ್ಕೋಂತೀವಲ್ಲ ಅವಾಗ ಕೇಳು’ ಎಂದಾಗ ಆಯ್ತು ಅನ್ನುವಂತೆ ಅಂದಪ್ಪ ಹೂಗುಟ್ಟಿದ.

-----

ರಾತ್ರಿ ಏಳು ಗಂಟೆ ಸುಮಾರಿಗೆ ಮನೆಯ ಅಂಗಳದಲ್ಲಿ ಜಾಹೇದಾ, ಜಾಹೇದಾಳ ಗಂಡ ಕಾಸೀಮ್‌, ಅಲ್ತಾಫ್‌, ಅಂದಪ್ಪ ಕುಳಿತಿದ್ದರು.
‘ಅಂದಪ್ಪ ನಿಮ್ಮ ಅಮ್ಮನ ಕಥೆ ಕೇಳೀದ್ರೆ ನಿನ್ನ ಎದೆ ಒಡ್ದೋಗುತ್ತೆ ಬೇಡ ಅವಳನ್ನು ಮರ್ತು ಬಿಡೋ’ ಎಂದ ಕಾಸೀಮ್‌.

‘ಇಲ್ಲ ಮಾವ ನಾನ್‌ ತಿಳ್ಕೊಳ್ಳೇಬೇಕು ಅದೇನಾದ್ರೂ ಸರಿ’ ಎಂದು ದೃಡ ನಿರ್ಧಾರದಲ್ಲಿ ಹೇಳಿದಾಗ ಕಾಸೀಮನಿಗೆ ಅನಿವಾರ್ಯವಾಗಿ ಹೇಳಬೇಕಾಯಿತು.

ಆಗಸಕ್ಕೆ ಮುಖ ಮಾಡಿ ನಕ್ಷತ್ರಗಳನ್ನು ನೋಡುತ್ತಾ ಕಾಸೀಮ ಕತೆ ಹೇಳಲಾರಂಭಿಸಿದ. ಅವನ ತಲೆಯ ಬಳಿ ಜಾಹೇದಾ, ಪಕ್ಕದಲ್ಲಿ ಅಲ್ತಾಫ್‌, ಅಂದಪ್ಪ ಅವನ ಮಾತುಗಳಿಗಾಗಿಯೇ ಕಾಯುತ್ತಿದ್ದರು. ‘ನಿನ್ನ ತಾಯಿ ರಂಗಿ, ನಿಮ್ಮ ಅಪ್ಪ ಅವ್ವಗ ಒಬ್ಳೇ ಮಗ್ಳು, ಬಹಳ ಪ್ರೀತಿಯಿಂದ ಸಾಕಿದ್ರು. ಕೂಲಿ ಮಾಡಿ ಬದುಕ್‌ ಸಾಗ್ಸಿದ್ರೂ ಮಗ್ಳಿಗೆ ಕಡ್ಮೆ ಯಾವ್ದ್ರಾಗೂ ಮಾಡಿರ‍್ಲಿಲ್ಲ. ಕತ್ಯಾಗ ಸಿನಿಮಾಗ ನೋಡ್ತಿವಲ್ಲಾ ಅಂಗೇ ಸಾಕಿದ್ರೂ ನಿಮ್ಮವ್ವನ್‌. ಅಂಥಾ ಚಂದ ಅಲ್ದಿದ್ರೂ ಪರವಾಗಿಲ್ಲ ಅನ್ನೋಂಗಿದ್ಲು. ನಂಗಿಂತ್‌ ಆರೇಳು ವರ್ಷ ಸಣ್ಣಾವಳು ಅಷ್ತೇ. ಊರಾಗಾ ಸಣ್‌ ಶಾಲಿ ದೊಡ್ಡ ಶಾಲಿ ಎರಡೂ ಇದ್ದಿದ್ರಿಂಗ 10ನೇ ಕ್ಲಾಸ್‌ ತನಾ ಓದಿದ್ಲು. ಮುಂದೆ ಓದ್ಬೇಕಾದ್ರೆ ಪಕ್ಕದ ಮುಣ್ರಾಬಾದ್‌ ಕಾಲೇಜಿಗೆ ಹೋಗ್ಬೇಕಾಗಿತ್ತು. ರಂಗಿ ಮುಂದೆ ಓದ್ತಿನಿ ಅಂದಾಗ ಬೇಡವೆನ್ನದೆ ಅವ್ಳ ಅಪ್ಪಾ ಅವ್ವ ಇಬ್ರೂ ಒಪ್ಪಿದ್ರು. ನನಗನಿಸ್ದಂಗ ಎರಡನೇ ವರ್ಷದಾಗೇ ಅವಳು ಯಾವಂದೋ ಜೊತಿ ಪ್ರೀತಿ ಪ್ರೇಮ ಅಂತೆಲ್ಲಾ ಮಾಡಾಕತ್ಯಾಳ ಅಂತ ಊರಾಗ ಮಾತ್‌ ಕೇಳಿ ಬಂದ್ವು. ಅದೂ ಮುಂದುವರಿದ ಜನಾಂಗದ ಊರಿನ ಪಾಟೀಲರ ಮಗನೊಂದಿಗೆ.

ವಿಷಯ ಊರಲ್ಲಿ ಕಾಡ್ಗಿಚ್ಚಿನಂತೆ ಎಲ್ಲೆಡೆಗೆ ಹರಡಿತು, ಪಾಟೀಲರ ಕಿವಿಯವರೆಗೂ ಮುಟ್ಟಿತು. ಪಾಟೀಲರು ಒಂದು ದಿನ ರಾತ್ರಿ ಮನೆಗೆ ಬಂದು ರಂಗಿಗೆ ವಿವರಿಸಿ ಹೇಳಿದರು ‘ನೋಡ್‌ ರಂಗಮ್ಮ ನೀನು ನನ್‌ ಮಗಳೇ.. ಈ ಜಾತಿ ಒಂದು ಅಡ್ಡ ಬರ್ಲಿಲ್ಲ ಅಂದ್ರೆ ನಿನ್ನ ಸೊಸೆ ಅಂತ ಮನೆ ತುಂಬಿಸ್ಕೊಂತಿದ್ದೆ, ಏನ್‌ ಮಾಡ್ಲಿ ಸಮಾಜದ ವಿರುದ್ಧ ಈಜೋ ಶಕ್ತಿ ನನ್ನಲ್ಲಿಲ್ಲ. ದಯಮಾಡಿ ನಿನ್‌ ಕಾಲಿಗೆ ಬೇಕಾದ್ರೂ ಬೀಳ್ತೀನಿ ನನ್ನ ಮಗನ್‌ ಬಿಟ್‌ಬಿಡು’ ಎಂದ. ರಂಗಿ ಏನೂ ಉತ್ತರಿಸದೆ ಹಾಗೇ ಕುಳಿತಿದ್ದಳು. ಪಕ್ಕದಲ್ಲೇ ಕುಳಿತಿದ್ದ ರಂಗಿಯ ಅಪ್ನನತ್ತ ನೋಡುತ್ತಾ ನೋಡು ಹುಲುಗಪ್ಪ ನೀನ್‌ ಹಿರಿಯ ಅದಿ ನನ್ನ ಪರಿಸ್ಥಿತಿ ನೀ ಅರ್ಥ ಮಾಡ್ಕೋಬಲ್ಲೆ ನಿನ್ನ ಮಗಳಿಗೆ ಒಳ್ಳೆ ವರ ನೋಡಿ ನಾನೇ ನಿಂತು ಮದುವೆ ಮಾಡ್ತೀನಿ ನಿನ್‌ ಮಗಳಿಗೆ ತಿಳಿಹೇಳು’ ಎಂದು ಬೇಡಿಕೊಂಡಾಗ ಹುಲುಗಪ್ಪನಿಗೂ ಪಾಟೀಲರು ಹೇಳಿದ್ದು ಸರಿ ಅನಿಸಿತು. ಮನಸ್‌ ಮಾಡಿದ್ರೆ ನಮ್ಮನ್ನ ಅವರು ಇಲ್ಲ ಅನ್ಸ್‌ಬಹುದಾಗಿತ್ತು. ಆದ್ರೆ ಅವರ ದೊಡ್ಡ ಗುಣ ಹೀಗೆ ಬಂದು ನಮಗೆ ಹೇಳ್ತಿದ್ದಾರಂದ್ರ ನಮ್‌ ಒಳ್ಳೇದಕ್‌ ಎಂದು ಯೋಚಿಸಿ. ‘ಪಾಟೀಲರೇ ನೀವಿನ್ನು ಹೋಗಿ ನನ್ನ ಮಗಳಿಗೆ ನಾನ್‌ ಹೇಳ್ಕೊತ್ತೀನಿ, ನೀವು ಚಿಂತಿ ಮಾಡ್ಬೇಡಿ’ ಎಂದ. ಪಾಟೀಲರನ್ನ ಕಳ್ಸಿಕೊಟ್ಟ.

ಇದಾಗಿ ಕೆಲವೇ ತಿಂಗಳಲ್ಲಿ ರಂಗಿಯ ಮದುವೆ ಗಂಗಾವತಿಯ ವರನೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಪಾಟೀಲರೇ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿದ್ದು ಹುಲಗಪ್ಪನ ಭಾರವನ್ನೇ ಇಳಿಸಿತು. ಪಾಟೀಲರೂ ತಡಮಾಡದೇ ಮಗನ ಮದುವೆಯನ್ನು ಧಾಂ-ಧೂಂ ಎನ್ನುವಂತೆ ಮಾಡಿ ಮುಗಿಸಿದರು.

5-6 ತಿಂಗಳು ಎಲ್ಲಾ ಸರಿಯಾಗಿಯೇ ನಡೆದಿತ್ತು. ಏನಾಯ್ತೋ ಗೊತ್ತಿಲ್ಲ ರಂಗಿ ಗಂಡನ ಬಿಟ್ಟು ತವರಿಗೆ ಬಂದಿದ್ದಳು. ಒಂದು ತಿಂಗಳಾಯಿತು, ಎರಡು ತಿಂಗಳಾಯಿತು ಮಗಳು ಹೋಗುವ ಮಾತೇ ತೆಗೆಯುತ್ತಿಲ್ಲ. ಜೊತೆಗೆ ಪಾಟೀಲರ ಮಗ ಮತ್ತೆ ತನ್ನ ಮಗಳನ್ನು ಗುಟ್ಟಾಗಿ ಭೇಟಿಯಾಗುತ್ತಿರುವುದು. ಹುಲಗಪ್ಪ ಮಗಳನ್ನು ಕೇಳಿದ ‘ಯಾಕವ್ವಾ ಇದು ನಿನಗೆ ಸರಿ ಅನಿಸ್ತದಾ.? ಮೊದಲು ಗಂಡನ ಮನೆಗೆ ಹೋಗು’ ಎಂದು ಹೇಳಿದ. ಆದರೆ ಮಗಳು ಮಾತು ಕೇಳದಿದ್ದಾಗ ಹುಲಗಪ್ಪ ತಲೆಮೇಲೆ ಕೈ ಹೊತ್ತು ಕೂತ. ಒಂದು ದಿನ ರಂಗಿಯ ಗಂಡ ಬಂದು ವಾಪಾಸು ಕರೆದಾಗ ಬರುವುದಿಲ್ಲವೆಂದು ಖಡಾ ಖಂಡಿತವಾಗಿ ಹೇಳಿದ್ದನ್ನು ಕೇಳಿ ಹುಲಗಪ್ಪ ನಿಂತಲ್ಲೆ ಕುಸಿದವ ಮತ್ತೆ ಏಳಲಿಲ್ಲ.

ಕತೆ ಹೇಳುತ್ತಿದ್ದ ಕಾಸೀಮ್‌ ‘ನನಗೆ ನಿದ್ದೆ ಬರುತ್ತಿದೆ ಅಂದಪ್ಪ ನಾಳೆ ಉಳಿದ ಕತೆ ಹೇಳ್ತೀನಿ’ ಎಂದಾಗ ‘ಮಾವ ನಿನ್ನ ಕಾಲಿಗೆ ಬೀಳ್ತೀನಿ ಇವತ್ತೇ ಹೇಳಿ ಬಿಡು’ ಎಂದು ಅಂಗಲಾಚುವಂತೆ ಅವನ ಕಡೆ ನೋಡಿದ.

ಜಾಹೇದಾಗೂ ಕುತೂಹಲ ‘ಹಂಗಂದ್ರ ಅಂದಪ್ಪನ ತಂದಿ ಪಾಟೀಲ್ರ ಮಗನೇ..ಅಂದ್ರೆ ಅಂದಪ್ಪ ದೊಡ್ಡಪಾಟೀಲರ ಮೊಮ್ಮಗ’ ಎಂದು ಆಶ್ಚರ್ಯಭರಿತಳಾಗಿ ಗಂಡನ ನೋಡಿದಳು.

‘ಇಲ್ಲ ಇಲ್ಲ ಹಂಗೇನೂ ಇಲ್ಲ. ಪಾಟೀಲರ ಮಗಂದೂ ರಂಗೀದೂ ಪ್ರೀತಿ ಬಹಳ ಪವಿತ್ರವಾಗಿತ್ತು. ಅಲ್ಲಿ ಯಾವುದೇ ವ್ಯಭಿಚಾರ ಇರಲಿಲ್ಲ. ಪಾಟೀಲರ ಮಗ ರಂಗೀನಾ ಮರು ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದ. ಇದೇ ಅವನ ಪ್ರಾಣಕ್ಕೇ ಕುತ್ತಾಯಿತು’

‘ಅವರಪ್ಪ ಅವನ್ನನ್ನು ಕೊಂದು ಬಿಟ್ನಾ…’ ಜಾಹೇದಾ ಸುಮ್ಮಿನಿರಲಾರದೇ ಮಧ್ಯದಲ್ಲಿ ಬಾಯಿ ಹಾಕಿದಳು.

‘ಇಲ್ಲ ಪಾಟೀಲರು ದೇವರಂತವರು..ಆದ್ರೆ ಅವರ ಬೀಗ ತನ್ನ ಮಗಳಿಗೆ ಎಲ್ಲಿ ಅನ್ಯಾಯವಾಗುತ್ತೋ ಎಂದು ಅಳಿಯನ ಕೊಲೆ ಮಾಡಿಬಿಟ್ರು, ಮುಂದೆ ಆದದ್ದೇ ಘೋರ ದುರಂತ. ರಂಗಿಗೆ ಈ ಆಘಾತದಿಂದ ಹುಚ್ಚು ಹಿಡೀತು. ನೋಡಲೂ ಸುಂದರವಾಗಿದ್ದ ರಂಗಿ ಮನೆ ಬಿಟ್ಟು ಊರಲ್ಲಿ ಎಲ್ಲಿ ಬೇಕಂದ್ರ ಅಲ್ಲಿ ತಿರುಗೋದು, ಎಚ್ರ ಇಲ್ದೇ ಮಲಗೋದು ಮಾಡತ್ತಿದ್ದಳು. ಅವಳ ತಾಯಿಗೆ ಅವಳನ್ನು ಮನೆಗೆ ಕರೆದುಕೊಂಡು ಬರುವುದೊಂದಲ್ಲದೆ ಕಾಮುಕರಿಂದ ರಕ್ಷಿಸುವುದು ಕಷ್ಟವಾಯಿತು.

ಕೊನೆ ಕೊನೆಗ ಸೋತು ಅಂದಿಗಾಲಪ್ಪನ ಮೇಲೆ ಭಾರ ಹಾಕಿ ಅವಳನ್ನು ಕೈ ಬಿಟ್ಟಳು. ಇಲ್ಲಿಂದ ಅವಳ ನರಕ ಸದೃಷ ದಿನಗಳು ಆರಂಭವಾದವು. ಊರಿನ ಕಾಮುಕರು ಇವಳನ್ನು ಎಳೆದುಕೊಂಡು ಹೋಗುವುದು ಅತ್ಯಾಚಾರ ಮಾಡುವುದು ಸಾಮಾನ್ಯವಾಗಿತ್ತು. ಅವಳನ್ನು ಎಳೆದುಕೊಂಡು ಹೋಗುವಾಗ ಕೂಗಿಕೊಳ್ಳುವುದನ್ನು ನೋಡಿ ನಾನೇ ಹಲವಾರು ಬಾರಿ ಬಿಡಿಸಿ ಮನೆಗೆ ಕರೆದುಕೊಂಡು ಬಂದಿದ್ದೇನೆ. ಇದರಿಂದ ರಂಗಿ ಗರ್ಭಿಣಿಯಾದಳು. ಆ ಮಗುವೇ ನೀನು. ನಿನ್ನ ಅಜ್ಜಿ ನಿನಗೆ ಅಂದಿಗಾಲಪ್ಪನೇ ತಂದೆಯೆಂದು ಆ ಹೆಸರನ್ನೇ ಇಟ್ಟಿದ್ದಾಳೆ ಎಂದು ನಿಟ್ಟುಸಿರುಬಿಟ್ಟ.

ಬಹುಶಃ ಆಸ್ಪತ್ರೆಯವರು ಅವ್ಳ ಸ್ಥಿತಿ ನೋಡಿ ಆಪರೇಷನ್‌ ಮಾಡಸ್ದೇ ಇದ್ದಿದ್ರೆ ಇನ್ನೂ ಎಷ್ಟು ಜನ ಅಂದಪ್ಪನಂತಹವರು ಅನಾಥರಾಗುತ್ತಿದ್ದರೋ.

ಅಂದಪ್ಪ ಹಲವಾರು ಸಾರಿ ಬಯ್ಯುತ್ತಿದ್ದ ತಾಯಿಯನ್ನು ನೆನೆದು ಕಣ್ಣೀರಿಟ್ಟ. ಕಾಸೀಮ್‌ ಅವನ ತಲೆಯ ಮೇಲೆ ಕೈಯಾಡಿಸಿ ‘ಆದದ್ದು ಆಗಿ ಹೋಗಿದೆ. ಇಲ್ಲಿ ತಪ್ಪು ಒಪ್ಪುಗಳನ್ನು ಹುಡುಕುವುದು ಬಿಟ್ಟು ಬದುಕುವುದ ರೂಢಿಸಿಕೋ’ ಎಂದಾಗ ಅಂದಪ್ಪ ಅಂಗಾತ ಮಲಗಿ ಆಗಸದ ನಕ್ಷತ್ರಗಳಲ್ಲಿ ತನ್ನ ಕಣ್ಣ ಕೀಲಿಸಿ ತನ್ನ ತಾಯಿ ಮಾಡಿದ ತಪ್ಪಾದರೂ ಯಾವುದು ಎಂದು ಯೋಚಿಸುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.