ADVERTISEMENT

ಚಿತ್ರೋದ್ಯಮಕ್ಕೆ ವಿಶೇಷ ಪ್ಯಾಕೆಜ್ ಘೋಷಿಸುವಂತೆ ಸಿ.ಎಂಗೆ ಮನವಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಸುನೀಲ್‌ ಪುರಾಣಿಕ್‌

​ಪ್ರಜಾವಾಣಿ ವಾರ್ತೆ
Published 24 ಮೇ 2021, 12:24 IST
Last Updated 24 ಮೇ 2021, 12:24 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಸುನೀಲ್‌ ಪುರಾಣಿಕ್‌
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಸುನೀಲ್‌ ಪುರಾಣಿಕ್‌   

ಬೆಂಗಳೂರು: ಕೊವಿಡ್-19 ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸುನೀಲ್‌ ಪುರಾಣಿಕ್‌, ‘ಕೋವಿಡ್ ಲಾಕ್‌ಡೌನ್‌ಗೆ ಕನ್ನಡ ಚಿತ್ರೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರರಂಗದ ಲಕ್ಷಾಂತರ ಕಾರ್ಮಿಕರ ಕುಟುಂಬ ಇಂದು ಬೀದಿಗೆ ಬೀಳುವಂತಾಗಿದೆ. ಆದ್ದರಿಂದ ತಕ್ಷಣವೇ ಚಿತ್ರೋದ್ಯಮದ ನೆರವಿಗೆ ವಿಶೇಷ ಪ್ಯಾಕೇಜ್ ನೀಡುವಂತೆ’ ಕೋರಿದ್ದಾರೆ.

‘ಇಂದಿನ ಸಂಕಷ್ಟದ ಸಮಯದಲ್ಲಿ ತಲಾ ₹5000 ಮೌಲ್ಯದ ಆಹಾರ ಪಡಿತರ ಕೂಪನ್ ಹಾಗೂ ಇತರೆ ವಿಶೇಷ ನೆರವನ್ನು ನೀಡಿದಲ್ಲಿ ಚಿತ್ರೋದ್ಯಮಕ್ಕೆ ಆಸರೆ ಆದಂತಾಗುತ್ತದೆ’ ಎಂದಿದ್ದಾರೆ.

ADVERTISEMENT

ಚಲನಚಿತ್ರ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಅವರು, ‘ಚಿತ್ರೋದ್ಯಮದ ಸಾಕಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿರುವುದಿಲ್ಲ. ಕೆಲವರು ವಯಸ್ಸಿನ ಕಾರಣ ಸರದಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಲಸಿಕೆ ಮೊದಲು ಡೋಸ್ ಪಡೆದಿರುವುದಿಲ್ಲ. ಆದ್ದರಿಂದ ಚಿತ್ರೋದ್ಯಮವನ್ನು ಆದ್ಯತೆ ಎಂದು ಪರಿಗಣಿಸಿ ಲಸಿಕೆ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಕೋರಿದರು.

‘ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೊದಲ ಹಂತದ ಪ್ಯಾಕೆಜ್‌ನಲ್ಲಿ ಕೆಲವರು ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದ್ದು ಮುಂದಿನ ಪ್ಯಾಕೆಜ್ ಘೋಷಣೆ ಸಂದರ್ಭದಲ್ಲಿ ಚಿತ್ರೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಪುರಾಣಿಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.