ADVERTISEMENT

ಟೀಕೆಗಳಿಗೆ ಸನ್ನಿ ಡೋಂಟ್‌ ಕೇರ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 19:48 IST
Last Updated 24 ಡಿಸೆಂಬರ್ 2018, 19:48 IST
ಸನ್ನಿ ಲಿಯೋನ್‌
ಸನ್ನಿ ಲಿಯೋನ್‌   

ಸನ್ನಿ ಲಿಯೋನ್‌ ಬ್ಲೂ ಫಿಲ್ಮ್ ಮತ್ತು ಜಾಹೀರಾತುಗಳ ಸಹವಾಸ ಬಿಟ್ಟು ವರ್ಷಗಳೇ ಕಳೆದರೂ ಅವರನ್ನು ಚಿತ್ರರಂಗ ಗುರುತಿಸುವುದು ಅದೇ ಹೆಸರಿನಿಂದ. ಅಷ್ಟು ಸಾಲದು ಎಂಬಂತೆ ಸೆಕ್ಸಿ ಎಂಬ ವಿಶೇಷಣವೂ ಬಿಟ್ಟೂ ಬಿಡದಂತೆ ಅವರಿಗೆ ಅಂಟಿಕೊಂಡಿದೆ. ಆದರೆಇದು ಸನ್ನಿಯನ್ನು ಗರಂ ಆಗುವಂತೆ ಮಾಡುತ್ತಿದೆ.

‘ನಾನು ಋಣಾತ್ಮಕ ಅಂಶಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಟೀಕೆಗಳನ್ನು ಡೋಂಟ್‌ ಕೇರ್‌ ಮಾಡಲು ಬಯಸುತ್ತೇನೆ. ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬರೆಯುತ್ತಾರೆ. ಆದರೆ ನಾನು ಹೇಗಿರಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ’ ಎಂದು ಸನ್ನಿ ಎದಿರೇಟು ನೀಡಿದ್ದಾರೆ.

‘ನಾನೂ ಒಬ್ಬ ಮನುಷ್ಯಳು. ನನಗೂ ಭಾವನೆಗಳಿವೆ. ಕೆಲವೊಮ್ಮೆ ಟೀಕೆ ಮತ್ತು ವ್ಯಂಗ್ಯದ ಮಾತುಗಳಿಂದ ತುಂಬಾ ನೋವಾಗುತ್ತದೆ. ಆಗ ಸುಮ್ಮನಿರಲು ಆಗುವುದಿಲ್ಲ. ವಿಶೇಷವಾಗಿ ಮಾಧ್ಯಮಗಳು ಅವರಿಗೆ ತೋಚಿದಂತೆ ಬರೆಯುವುದನ್ನು ನಾನು ಸಹಿಸುವುದಿಲ್ಲ.ಉಗ್ರಗಾಮಿ ಮತ್ತುಘರ್ಷಣೆಗೆ ಅವಕಾಶ ನೀಡುವ ಅಂತಹ ಜನರ ಬಗ್ಗೆ ಗಮನಹರಿಸದಿದ್ದರೆ ಜೀವಿಸಲು ಈ ಜಗತ್ತಿನಷ್ಟು ಸೂಕ್ತವಾದ ಜಾಗ ಮತ್ತೊಂದಿರಲಾರದು’ ಎಂದು ಸನ್ನಿ ಲಿಯೋನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಮಾಧ್ಯಮದವರು ಎಷ್ಟು ಬೇಕಾದರೂ ಸಂದೇಹಪಡಲಿ. ಅವರಿಗೆ ಹೇಗೆ ಪ್ರತ್ಯುತ್ತರ ನೀಡಿ ಸುಮ್ಮನಿರಿಸಬೇಕು ಎಂದು ನನಗೂ ತಿಳಿದಿದೆ. ನನಗೆ ಉಳಿದಿರುವುದು ಅದೊಂದೇ ದಾರಿ. ನನ್ನ ಕಣ್ಣೀರ ಕತೆಯನ್ನು ಎಲ್ಲಿಂದ ಶುರು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಚಿತ್ರರಂಗಕ್ಕೆ ಬರುವುದಕ್ಕೂ ಹಿಂದಿನ ದಿನಗಳ ಕತೆ ಈ ಮಟ್ಟಿಗೆ ನನ್ನನ್ನು ಘಾಸಿಗೊಳಿಸಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ. ಆ ದಾರಿಯನ್ನು ಯಾಕಾದರೂ ಆಯ್ಕೆ ಮಾಡಿಕೊಂಡೆನೋ ಎಂದು ಪ್ರತಿದಿನ ಕಣ್ಣೀರು ಹಾಕಿದ್ದೇನೆ’ ಎಂದು, ಸಂದರ್ಶನವೊಂದಲ್ಲಿ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.

ತಮ್ಮ ಫೇಸ್‌ಬುಕ್‌ ಪುಟದಲ್ಲಿಯೂ ಸನ್ನಿ ಈ ಬಗ್ಗೆ ಬರೆದುಕೊಂಡಿದ್ದರು. #judgemenot ಎಂಬ ಹ್ಯಾಶ್‌ಟ್ಯಾಗ್‌ ಹಾಕಿ ‘ನನಗೂ ಬೇಕಾದಷ್ಟು ಕೆಲಸಗಳಿವೆ. ಕೆಲವೊಮ್ಮೆ ಬಿಡುವೇ ಇಲ್ಲದಂತೆ ಕೆಲಸ ಮಾಡುತ್ತೇನೆ. ಎಷ್ಟು ಬ್ಯುಸಿ ಅಂದ್ರೆ ಪ್ಯಾಂಟ್‌ನ ಎರಡೂ ಕಾಲುಗಳನ್ನು ಒಂದೇ ಕಾಲಿಗೆ ಹಾಕಿಕೊಳ್ಳುವುದಿದೆ. ಬೇರೆಯವರ ಬಗ್ಗೆ ವಾಸ್ತವ ತಿಳಿದುಕೊಳ್ಳುವವರೆಗೂ ನೀವು ಹೀಗೇ ಮಾತಾಡುತ್ತಲೇ ಇರುತ್ತೀರಿ. ಹಾಗಾಗಿ ನನ್ನ ಬಗ್ಗೆ ತೀರ್ಪು ಕೊಡಬೇಡಿ. ಯಾಕಂದ್ರೆ ನಾನೂ ನಿಮ್ಮಂತೆಯೇ’ ಎಂದು ಬರೆದಿದ್ದರು.

ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸನ್ನಿ, ಸಂಗೀತ ನೃತ್ಯ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾರೆ. ಪತಿ ಡೇನಿಯೆಲ್‌ ವೆಬರ್‌ ಅವರ ನಿರ್ಮಾಣ ಸಂಸ್ಥೆ ಸನ್‌ಸಿಟಿ ಮೀಡಿಯಾ ಆ್ಯಂಡ್‌ ಎಂಟರ್‌ಟೇನ್‌ಮೆಂಟ್‌ ಕೆಲ ಸಮಯದ ಹಿಂದೆ ಹೊರತಂದ ‘ಲವ್ಲಿ ಆ್ಯಕ್ಸಿಡೆಂಟ್’ ಬಾಂಗ್ಲಾದೇಶಿ ಮ್ಯೂಸಿಕ್‌ ವಿಡಿಯೊ, ಅದರಲ್ಲಿನ ಸನ್ನಿ ನೃತ್ಯದಿಂದಾಗಿ ಬಿಸಿ ಸಮೋಸಾದಂತೆ ಮಾರಾಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.