ADVERTISEMENT

ಬಂಡೀಪುರ: ಕಾನನಕ್ಕೆ ಮನಸೋತ ಸೂಪರ್‌ ಸ್ಟಾರ್‌ ರಜನಿಕಾಂತ್‌

ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನೆನಪುಗಳ ಮೆಲುಕು

ಸೂರ್ಯನಾರಾಯಣ ವಿ
Published 30 ಜನವರಿ 2020, 7:36 IST
Last Updated 30 ಜನವರಿ 2020, 7:36 IST
ಬಂಡೀಪುರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ರಜನಿಕಾಂತ್‌
ಬಂಡೀಪುರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ರಜನಿಕಾಂತ್‌   

ಚಾಮರಾಜನಗರ: ಡಿಸ್ಕವರಿ ಚಾನೆಲ್‌ನ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಖ್ಯಾತಿಯ ಬೇರ್‌ ಗ್ರಿಲ್ಸ್‌ ಅವರೊಂದಿಗೆ ಟಿವಿ ಕಾರ್ಯಕ್ರಮದ ನೆಪದಲ್ಲಿ ಎರಡು ದಿನ ಬಂಡೀಪುರದಲ್ಲಿ ತಂಗಿದ್ದ ಕನ್ನಡಿಗ, ತಮಿಳುನಾಡಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಹುಲಿ ಸಂರಕ್ಷಿತ ಪ್ರದೇಶದ ಸೌಂದರ್ಯಕ್ಕೆ ಮನಸೋತಿದ್ದಾರೆ.

ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಇಲ್ಲಿನ ಪರಿಸರದ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ, ಇಲ್ಲಿಗೆ ಹಿಂದೆ ಬಂದಿದ್ದು, ಚಲನಚಿತ್ರಗಳ ಚಿತ್ರೀಕರಣ ಮಾಡಿದ್ದ ನೆನಪುಗಳನ್ನೆಲ್ಲ ಮೆಲುಕು ಹಾಕಿದ್ದಾರೆ.

‘ಇದೇ ಮಾರ್ಗದಲ್ಲಿ ಊಟಿಗೆ ಹೋಗುವ ಸಂದರ್ಭದಲ್ಲಿ ಬಂಡೀಪುರದಲ್ಲಿ ಹಲವು ಬಾರಿ ಇಳಿದಿದ್ದೆ. ಆಗ ಯಾರೂ ತಮ್ಮನ್ನು ಗುರುತಿಸುತ್ತಿರಲಿಲ್ಲ. ಈಗ ಓಡಾಡಲು ಸಾಧ್ಯವಾಗದ ವಾತಾವರಣ ಇದೆ ಎಂದು ರಜನಿಕಾಂತ್‌ ಹೇಳಿದರು’ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿಷ್ಣು ಸ್ಮರಣೆ: ಕನ್ನಡದ ಖ್ಯಾತ ನಟ ದಿವಂಗತ ವಿಷ್ಣುವರ್ಧನ್‌ ಅವರನ್ನೂ ರಜನಿ ಸ್ಮರಿಸಿದ್ದಾರೆ.

‘ಸಹೋದರರ ಸವಾಲ್‌ ಚಿತ್ರ ಈ ಭಾಗದಲ್ಲಿ ಚಿತ್ರೀಕರಣ ನಡೆದಿತ್ತು. ಈ ಪ್ರದೇಶದಲ್ಲಿ ಆಗಲೂ ಓಡಾಡಿದ್ದೆ ಎಂದು ಹೇಳುತ್ತಾ ವಿಷ್ಣುವರ್ಧನ್‌ ಅವರೊಂದಿಗೆ ನಟಿಸಿದ್ದ ಕ್ಷಣಗಳನ್ನು ಸ್ಮರಿಸಿದರು’ ಎಂದು ಬಾಲಚಂದ್ರ ತಿಳಿಸಿದರು.

ಬುಧವಾರ ಹೋಗುವುದಕ್ಕೂ ಮುನ್ನ,ಮತ್ತೆ ಕಾಡಿನಲ್ಲಿ ಸುತ್ತಾಡಬೇಕು ಎಂದು ಅನಿಸುತ್ತಿದೆ; ಮತ್ತೊಮ್ಮೆ ಬರುತ್ತೇನೆ ಎಂದು ಹೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಹಮ್ಮು ಬಿಮ್ಮು ಇಲ್ಲದೆ ಬೆರೆತ ನಟ: ರಜನಿಕಾಂತ್‌ ಅವರು ತಾವೊಬ್ಬ ಸ್ಟಾರ್‌ ನಟ ಎಂಬುದನ್ನು ಲೆಕ್ಕಿಸದೆ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಬೆರೆತರು. ಅರಣ್ಯ ಇಲಾಖೆಯ ವಾಹನ ಚಾಲಕ ಮುರಳಿ ಎಂಬುವವರೊಂದಿಗೆ ಎರಡು ದಿನದಲ್ಲಿ ಹೆಚ್ಚು ಬೆರೆತಿದ್ದಾರೆ.

ಶುದ್ಧ ಕನ್ನಡದ ಮಾತು:‘ಅವರೊಬ್ಬ ದೊಡ್ಡ ನಟ. ಅವರು ಹೇಗೆ ಬೇಕಾದರೂ ಇರಬಹುದು. ಅದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ, ಯಾರಿಗೂ ಊಹಿಸಲು ಸಾಧ್ಯವಾಗದಷ್ಟು ಸರಳ ವ್ಯಕ್ತಿ. ನಾನು ಇದೇ ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದು. ‘ಸಾಹೆಬ್ರೆ’ ಎಂದೇ ಸಂಭೋದಿಸಿದರು. ಅವರ ಸರಳತೆ, ಇತರರನ್ನು ಗೌರವಿಸುವ ಗುಣ ನಿಜಕ್ಕೂ ಶ್ಲಾಘನಾರ್ಹ’ ಎಂದು ಬಾಲಚಂದ್ರ ಅವರು ರಜನಿಕಾಂತ್‌ ಅವರೊಂದಿಗಿನ ಭೇಟಿಯನ್ನು ವಿವರಿಸಿದರು.

‘ಅವರು ತಮಿಳುನಾಡಿನಲ್ಲಿ ನೆಲೆ ನಿಂತು ದಶಕಗಳೇ ಆಗಿರಬಹುದು. ಆದರೆ, ಅವರು ಇನ್ನೂ ಕನ್ನಡವನ್ನು, ಕನ್ನಡತನವನ್ನು ಮರೆತಿಲ್ಲ. ಎಲ್ಲ ಸಿಬ್ಬಂದಿಯೊಂದಿಗೆ ಶುದ್ಧ ಕನ್ನಡದಲ್ಲೇ ಮಾತನಾಡಿದರು. ತೆರಳುವುದಕ್ಕೂ ಮುನ್ನ ಎಲ್ಲರೊಂದಿಗೆ ನಿಂತು ಫೋಟೊ ತೆಗೆಸಿಕೊಂಡರು. ಅಷ್ಟು ಎತ್ತರದಲ್ಲಿರುವ ಮನುಷ್ಯ, ಇಷ್ಟು ಸರಳವಾಗಿರುವುದನ್ನು ನಾನು ಇದುವರೆಗೂ ನೋಡಿಲ್ಲ’ ಎಂದು ಹೇಳಿದರು.

ಕಾಡು ಸುತ್ತಾಡಿದ ಬೇರ್ ಗ್ರಿಲ್ಸ್‌
ಚಿತ್ರೀಕರಣ ಇಲ್ಲದೇ ಇದ್ದುದರಿಂದ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಖ್ಯಾತಿಯ ಬೇರ್‌ ಗ್ರಿಲ್ಸ್‌ ಅವರು ಬುಧವಾರ ಬಂಡೀಪುರ ಅರಣ್ಯ ಸುತ್ತಾಡಿದರು. ಸಫಾರಿಗೆ ತೆರಳಿದರು.

‘ಗುರುವಾರ ನಡೆಯಲಿರುವ ಚಿತ್ರೀಕರಣ ಸ್ಥಳಗಳಲ್ಲಿ ಓಡಾಡಿ, ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ತಂಡದೊಂದಿಗೆ ಚರ್ಚಿಸಿದರು. ನಂತರ ವಿಶ್ರಾಂತಿ ಪಡೆದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಂಟರಿಂದ ಹತ್ತು ಗಣ್ಯರು ಭಾಗಿ
ಡಿಸ್ಕವರಿ ಚಾನೆಲ್‌, ಬೇರ್‌ ಗ್ರಿಲ್ಸ್‌ ನಿರೂಪಣೆಯಲ್ಲಿ ರೂಪಿಸುತ್ತಿರುವ ‘ಇನ್‌ ಟು ದ ವೈಲ್ಡ್‌ ವಿದ್‌ ಬೇರ್‌ ಗ್ರಿಲ್ಸ್‌’ ದೇಶದ ಎಂಟರಿಂದ 10 ಮಂದಿ ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಹಂತದಲ್ಲಿ ಮೂವರು ಗಣ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ಪೈಕಿ ರಜನಿಕಾಂತ್‌ ಹಾಗೂ ಅಕ್ಷಯ್‌ ಕುಮಾರ್‌ ಅವರೊಂದಿಗಿನ ಚಿತ್ರೀಕರಣಕ್ಕೆ ಬಂಡೀಪುರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ರಿಕೆಟಿಗ ವಿರಾಟ್‌ ಕೊಹ್ಲಿ, ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಗಣ್ಯರ ಪಟ್ಟಿಯಲ್ಲಿದ್ದು, ದೇಶದ ಬೇರೆ ಬೇರೆ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಗೊತ್ತಾಗಿದೆ.

ಜಲ ಸಂರಕ್ಷಣೆ ಸಂದೇಶ: ಜಲ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿದೆ. ರಜನಿಕಾಂತ್‌ ಅವರು ಈ ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ಕಿರುತೆರೆ ಪ್ರವೇಶಿಸುತ್ತಿದ್ದು, ಜಲ ಸಂರಕ್ಷಣೆಯ ಸಂದೇಶವನ್ನು ಪಸರಿಸಲಿದ್ದಾರೆ ಎಂದು ಡಿಸ್ಕವರಿ ಚಾನೆಲ್‌ ಟ್ವೀಟ್‌ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.