ADVERTISEMENT

ಬಾರ್‌ ಹುಡುಗನ ಬದುಕಿನ ಪಯಣ... ನಟ ನಿಶ್ಚಿತ್‌ ಕರೋಡಿ ಸಂದರ್ಶನ

ವಿನಾಯಕ ಕೆ.ಎಸ್.
Published 1 ಫೆಬ್ರುವರಿ 2024, 23:35 IST
Last Updated 1 ಫೆಬ್ರುವರಿ 2024, 23:35 IST
ದೀಪಿಕಾ, ನಿಶ್ಚಿತ್‌
ದೀಪಿಕಾ, ನಿಶ್ಚಿತ್‌   

‘ಗಂಟುಮೂಟೆ’ ಚಿತ್ರದೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ನಿಶ್ಚಿತ್‌ ಕರೋಡಿ ಅಭಿನಯದ ‘ಸಪ್ಲಯರ್‌ ಶಂಕರ’ ಚಿತ್ರ ಇಂದು (ಫೆ.2) ತೆರೆ ಕಾಣುತ್ತಿದೆ. ಚಿತ್ರ ಹಾಗೂ ತಮ್ಮ ಸಿನಿಪಯಣದ ಕುರಿತು ನಿಶ್ಚಿತ್‌ ಮಾತನಾಡಿದ್ದಾರೆ...

ಚಿತ್ರದಲ್ಲಿ ನಿಮ್ಮ ಪಾತ್ರವೇನು?


ADVERTISEMENT

ಬಾರ್‌ ಸಪ್ಲಯರ್‌ ಪಾತ್ರ. ಆತನಿಗೂ ಅವನದ್ದೇ ಆದ ಒಂದು ಬದುಕು ಇರುತ್ತದೆ. ಆತನ ವ್ಯಕ್ತಿತ್ವ ಹೇಗಿರುತ್ತದೆ, ಬದುಕಿನಲ್ಲಿ ಏನೆಲ್ಲ ಆಗುತ್ತದೆ ಎಂಬ ವಿಷಯಗಳನ್ನು ಹೊಂದಿರುವ ಪಾತ್ರ. ಒಂದಷ್ಟು ಸಂಘರ್ಷಗಳಿಂದ ಕೂಡಿದ ಕಥೆ. ಮಾಸ್‌, ಕಮರ್ಷಿಯಲ್‌ ಅಂಶಗಳಿವೆ. ಕೊಲೆ, ರಕ್ತದ ಜೊತೆಗೆ ಸಾಗುವ ಕಲ್ಟ್‌, ಕ್ಲಾಸ್‌ ಸಿನಿಮಾ.

ನಿಮ್ಮ ಸಿನಿಪಯಣ ಪ್ರಾರಂಭವಾಗಿದ್ದು ಹೇಗೆ?

ವಿದ್ಯಾರ್ಥಿಯಾಗಿದ್ದಾಗಲೇ ಚಿತ್ರರಂಗದ ನಂಟು ದೊರೆಯಿತು. ನಾಗತಿಹಳ್ಳಿ ಚಂದ್ರಶೇಖರ ಅವರ ಟೆಂಟ್‌ ಸಿನಿಮಾದಲ್ಲಿ ನಟನೆ ಕಲಿಯುತ್ತಿದ್ದೆ. ಆಗ ರೂಪಾರಾವ್‌ ಅವರ ‘ಗಂಟುಮೂಟೆ’ ಚಿತ್ರದಲ್ಲಿ ಅವಕಾಶ ಲಭಿಸಿತು. ಆ ಚಿತ್ರದಿಂದಾಗಿ ನಂತರ ‘ಟಾಮ್‌&ಜೆರ್ರಿ’ ಚಿತ್ರದಲ್ಲಿ ಅವಕಾಶ ದೊರೆಯಿತು.

ಮುಂದಿನ ಸಿನಿಮಾಗಳು ಯಾವುವು?

ಒಂದೆರಡು ಸಿನಿಮಾಗಳು ಕಥೆಯ ಹಂತದಲ್ಲಿವೆ. ಈ ಸಿನಿಮಾದ ನಂತರ ಅವನ್ನು ಘೋಷಿಸುತ್ತೇವೆ. ಈಗಲೇ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಕಷ್ಟ.

ಈ ಸಿನಿಮಾ ಜನರನ್ನು ತಲುಪಲು ಏನೆಲ್ಲ ಯೋಜನೆ ಹಾಕಿಕೊಂಡಿದ್ದೀರಿ?

ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಹಳಬರಿಗೆ ಹೆಸರಿನ ಬಲ ಇರುತ್ತದೆ. ಆದರೆ ನಮಗೆ ‘ಹೊಸಬರು’ ಎಂಬ ಒಂದು ಟ್ಯಾಗ್‌ಲೈನ್‌ ಇರುತ್ತದೆ. ನಾನು ಹಳಬನಾದರೂ, ತಂಡ ಹೊಸತು. ಜೊತೆಗೆ ನಿಯಮಿತ ಬಜೆಟ್‌ ಇರುತ್ತದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಸಾಧ್ಯವಿಲ್ಲ. ಹಳಬರು ಒಂದು ಹಂತದಲ್ಲಿ ಹೊಸಬರಾಗಿಯೇ ಬಂದವರು. 

ಎಲ್ಲೆಲ್ಲಿ ಚಿತ್ರೀಕರಣ ನಡೆದಿದೆ? ಅದರ ಅನುಭವ ಹೇಗಿತ್ತು?

ಬಹುತೇಕ ಭಾಗ ಬೆಂಗಳೂರಿನ ಒಂದು ಬಾರ್‌ನಲ್ಲಿ ಚಿತ್ರೀಕರಣಗೊಂಡಿದೆ. ಆನೇಕಲ್‌, ಹೊಸಕೋಟೆ, ಬಂಗಾರಪೇಟೆಯಲ್ಲಿ ಕೆಲವಷ್ಟು ಭಾಗ ಚಿತ್ರೀಕರಣಗೊಂಡಿದೆ. 

ಕ್ಯಾಬ್‌ ಓಡಿಸುತ್ತಿದ್ದೆ
ಈ ಚಿತ್ರವನ್ನು ರಂಜಿತ್‌ ಸಿಂಗ್‌ ನಿರ್ದೇಶಿಸಿದ್ದಾರೆ. ‘ಎಲ್ಲರೂ ಕುಳಿತು ನೋಡುವ ಸಿನಿಮಾ. ಆ್ಯಕ್ಷನ್‌ ಜೊತೆಗೆ ಡ್ರಾಮಾ ಇದೆ. ನಾನು ಸಿನಿಮಾ ಹಿನ್ನೆಲೆ ಹೊಂದಿರುವವನಲ್ಲ. ಬೆಂಗಳೂರಿನಲ್ಲಿ ಕ್ಯಾಬ್‌ ಓಡಿಸಿಕೊಂಡಿದ್ದೆ. ಜ್ಯೂಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದೆ. ಒಂದು ಕಥೆಯಿತ್ತು.  ಸಿನಿಮಾ ಮಾಡಬೇಕು ಅನ್ನಿಸಿತು. ಎಲ್ಲ ಹೊಸಬರೇ ಸೇರಿ ತಂಡ ಕಟ್ಟಿದೆವು. ನೇತ್ರ ಫಿಲಂಸ್ ಲಾಂಛನದಲ್ಲಿ ನನ್ನ ಸಹೋದರರಾದ ಎಂ.ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ಬಂಡವಾಳ ಹೂಡಿದ್ದಾರೆ’ ಎನ್ನುತ್ತಾರೆ ರಂಜಿತ್‌. 
ಮುಗ್ಧ ಶಿಕ್ಷಕಿ ಪಾತ್ರ
ಚಿತ್ರದ ನಾಯಕಿ ದೀಪಿಕಾ ಆರಾಧ್ಯ ಈ ಚಿತ್ರದಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಎಂಜಿನಿಯರಿಂಗ್‌ ಮುಗಿಸಿ ಬೇರೆ ಭಾಷೆ ಧಾರಾವಾಹಿಗಳಲ್ಲಿ ನಟಿಸುತ್ತಿದೆ. ಕನ್ನಡದಲ್ಲಿ ‘ಬಾಡಿ ಗಾರ್’ ‘ಆರ’ ಚಿತ್ರಗಳಲ್ಲಿ ಅವಕಾಶ ಲಭಿಸಿತು. ಇದು ನನ್ನ ಮೂರನೇ ಸಿನಿಮಾ. ಪಾತ್ರದ ಹೆಸರು ಪುಣ್ಯ. ಮುಗ್ಧ ಶಿಕ್ಷಕಿ. ಮಧ್ಯಮ ವರ್ಗದ ಕುಟುಂಬದ ಹುಡುಗಿ. ನಾಯಕನ ಜೊತೆಗೆ ಪ್ರೀತಿ ಮೂಡುತ್ತದೆ’ ಎಂದು ಪಾತ್ರದ ವಿವರ ನೀಡುತ್ತಾರೆ ದೀಪಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.