ADVERTISEMENT

‘ಮನೆ ಮನೆ ಮಹಾಲಕ್ಷ್ಮಿ’ಯಾಗಿ ಮನೆ ಮನೆಗೆ ಬರಲಿದ್ದಾರೆ ಸುಷ್ಮಾ ರಾವ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 0:34 IST
Last Updated 21 ಫೆಬ್ರುವರಿ 2021, 0:34 IST
ಸುಷ್ಮಾ ರಾವ್‌
ಸುಷ್ಮಾ ರಾವ್‌   

ಡಾನ್ಸ್ ಕರ್ನಾಟಕ ಡಾನ್ಸ್‌, ಸರಿಗಮಪ, ಕಾಮಿಡಿ ಕಿಲಾಡಿಗಳಂತಹ ರಿಯಾಲಿಟಿ ಷೋಗಳ ಮೂಲಕ ಜನರನ್ನು ರಂಜಿಸುತ್ತಿರುವ ಜೀ ಕನ್ನಡ ವಾಹಿನಿ ಈಗ ಹೊಸದೊಂದು ರಿಯಾಲಿಟಿ ಷೋ ಆರಂಭಿಸುತ್ತಿದೆ. ಹೆಣ್ಣುಮಕ್ಕಳಿಗೆ ಮನೆಯಲ್ಲೇ ಮನರಂಜನೆ ನೀಡಬೇಕು ಎಂಬ ಉದ್ದೇಶದಿಂದ ಆರಂಭವಾಗಿರುವ ಈ ರಿಯಾಲಿಟಿ ಷೋಗೆ ‘ಮನೆ ಮನೆ ಮಹಾಲಕ್ಷ್ಮಿ’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮವನ್ನು ಕರುನಾಡಿನ ಖ್ಯಾತ ನಿರೂಪಕಿ ಹಾಗೂ ನಟಿ ಸುಷ್ಮಾ ರಾವ್ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ ಸುಷ್ಮಾ.

‘ಮನೆ ಮನೆ ಮಹಾಲಕ್ಷ್ಮೀ’ ಕಾರ್ಯಕ್ರಮದ ಸ್ವರೂಪ

ಪ್ರತಿಮನೆಯಲ್ಲಿ ಹೆಣ್ಣುಮಕ್ಕಳು ಬೆಳಗಿನಿಂದ ಸಂಜೆವರೆಗೆ ಮನೆಗೆಲಸ, ಗಂಡ–ಮಕ್ಕಳ ಚಾಕರಿ, ಅಡುಗೆ ಕೆಲಸ ಹೀಗೆ ದಿನವಿಡೀ ಬ್ಯುಸಿಯಾಗಿರುತ್ತಾರೆ. ಹೀಗೆ ದುಡಿಯುವ ಹೆಣ್ಣುಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಮನೆ ಮನೆ ಮಹಾಲಕ್ಷ್ಮೀ ಕಾರ್ಯಕ್ರಮ ಮಾಡುತ್ತಿದ್ದೇವೆ. ಅತ್ತೆ–ಸೊಸೆ, ಅಮ್ಮ–ಮಗಳು ಹೀಗೆ ಹೆಣ್ಣುಮಕ್ಕಳಿರುವ ಮನೆಗೇ ಹೋಗಿ ಮನರಂಜನೆ ಕೊಡುವ ಕಾರ್ಯಕ್ರಮವಿದು. ಈ ಕಾರ್ಯಕ್ರಮದ ಪ್ಲಸ್ ಪಾಯಿಂಟ್ ಎಂದರೆ ನಾನು ಸ್ವತಃ ಪ್ರತಿ ಮನೆಗೂ ಹೋಗಿ ಅವರೊಂದಿಗೆ ಬೆರೆತು ಮನರಂಜನೆ ನೀಡುತ್ತೇನೆ. ಅತ್ತೆ, ಸೊಸೆ, ಮಗ, ಅಳಿಯ ಹೀಗೆ ಎಲ್ಲರೂ ಸೇರಿ ಆಡುವ ಈ ಷೋನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಮನೆಗೆ ಹೋಗಿ ಅತ್ತೆ, ಸೊಸೆಯರಿಗೆ ನೀಡಿದ ಮನರಂಜನೆಯನ್ನು ಟಿವಿಯಲ್ಲಿ ಪ್ರಸಾರವಾಗುವಂತೆ ಮಾಡಿ ಅದನ್ನು ಬೇರೆ ಅತ್ತೆ, ಸೊಸೆಯರು ನೋಡಿ ಎಂಜಾಯ್ ಮಾಡಲಿ ಎಂಬುದು ನಮ್ಮ ಕಾರ್ಯಕ್ರಮದ ಉದ್ದೇಶ ಎಂದು ಕಾರ್ಯಕ್ರಮದ ಬಗ್ಗೆ ವಿವರಣೆ ನೀಡುತ್ತಾರೆ ಸುಷ್ಮಾ ರಾವ್.

ADVERTISEMENT

ಜನರಿಗಾಗಿಯೇ ಇರುವ ಷೋ

ನನಗೆ ಎಷ್ಟೋ ಬಾರಿ ಹೊರಗಡೆ ಅಭಿಮಾನಿಗಳು ಸಿಕ್ಕಾಗ ‘ಮೇಡಂ ಯಾವಾಗ್ಲೂ ಸೆಲೆಬ್ರಿಟಿಗಳ ಜೊತೆಗೆ ಕಾರ್ಯಕ್ರಮ ಮಾಡುತ್ತೀರಿ, ನಮ್ಮಂತಹ ಸಾಮಾನ್ಯ ಜನರಿಗೆ ಕಾರ್ಯಕ್ರಮ ಮಾಡುವುದಿಲ್ಲವಾ?’ ಎಂದು ಕೇಳುತ್ತಿರುತ್ತಾರೆ. ಜೀ ವಾಹಿನಿಯವರಯ ಈ ಕಾರ್ಯಕ್ರಮವನ್ನು ಸಾಮಾನ್ಯ ಜನರಿಗಾಗಿಯೇ ನಡೆಸುತ್ತಿದ್ದಾರೆ. ಸಾಮಾನ್ಯರಿಗೆಂದೇ ಮಾಡಿರುವ ಈ ವಿಶೇಷ ಕಾರ್ಯಕ್ರಮವನ್ನು ಜನರು ಕೈ ಹಿಡಿದು ಗೆಲ್ಲಿಸಬೇಕು. ಷೋವನ್ನು ಎಂಜಾಯ್ ಮಾಡಿ, ಅಭಿಪ್ರಾಯ ತಿಳಿಸಬೇಕು ಎನ್ನುತ್ತಾರೆ.

ಪ್ರತಿ ಮನೆಗೂ ಭೇಟಿ

‘ಜನರು ವಾಟ್ಸ್‌ಆ್ಯಪ್ ಮೂಲಕ ವಾಹಿನಿಯವರನ್ನು ತಮ್ಮ ತಮ್ಮ ಮನೆಗೆ ಕಾರ್ಯಕ್ರಮದ ಶೂಟಿಂಗ್‌ಗೆ ಆಹ್ವಾನಿಸಿದ್ದಾರೆ. ಆಹ್ವಾನ ಕೊಟ್ಟ ಪ್ರತಿ ಮನೆಗೂ ಹೋಗಿ ಅವರಿಗೆ ಆಟವಾಡಿಸಿ, ಮನರಂಜನೆ ನೀಡಿ ಶೂಟಿಂಗ್ ಮಾಡಿ ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೂ ಹೋಗಿ, ಆಹ್ವಾನಿಸಿದ ಪ್ರತಿ ಮನೆಗೂ ಹೋಗಿ ಮನರಂಜನೆ ನೀಡಬೇಕು ಎಂಬುದು ನಮ್ಮ ಉದ್ದೇಶ. ಈಗಾಗಲೇ ಆಹ್ವಾನ ನೀಡಿದ 70 ರಿಂದ 80 ಮನೆಗಳಿಗೆ ಕಾರ್ಯಕ್ರಮದ ತಂಡ ಭೇಟಿ ನೀಡಿದೆ. ಆ ಮೂಲಕ ಮನೆಯವರ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಇದರಿಂದ ನಮಗೆ ಶೂಟಿಂಗ್‌ಗೆ ಹೋದಾಗ ಅವರು ಹೊಸಬರು ಎನ್ನಿಸುವುದಿಲ್ಲ. ಸುಲಭವಾಗಿ ಅವರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಸುಷ್ಮಾ.

ಕಾರ್ಯಕ್ರಮದ ಬಗ್ಗೆ ನಿರೀಕ್ಷೆಗಳು

‘ಪ್ರತಿ ಕುಟುಂಬವೂ ನಮ್ಮೊಂದಿಗೆ ಸಂತೋಷದಿಂದ ಪ್ರೀತಿಯಿಂದ ಆಟವಾಡಬೇಕು. ನಮ್ಮ ಗೇಮ್‌ ಷೋಗಳಲ್ಲಿ ಖುಷಿಯಿಂದ ಭಾಗವಹಿಸಿ ಎಂಜಾಯ್ ಮಾಡಬೇಕು ಎನ್ನುವುದಷ್ಟೇ ನಮಗೆ ಮುಖ್ಯ. ನಮ್ಮೊಂದಿಗೆ ಅವರು ಖುಷಿಯಿಂದ ಇರುವುದು ನೋಡಿ ನಮಗೆ ಖುಷಿ ಎನ್ನಿಸಬೇಕು ಇಷ್ಟೇ ನಮ್ಮ ನಿರೀಕ್ಷೆ‘ ಎಂದು ತುಂಬು ಮನಸ್ಸಿನಿಂದ ಹೇಳುತ್ತಾರೆ ಆಕೆ.

ಅಭಿಮಾನಿಗಳ ಆಸೆಗೆ ಮಣಿದೆ

‘ಮೊದಲು ಈ ಕಾರ್ಯಕ್ರಮದ ಬಗ್ಗೆ ಕೇಳಿದಾಗ ಮಾಡುವುದಿಲ್ಲ ಎಂದೇ ಹೇಳಿದ್ದೆ. ಯಾಕೆಂದರೆ ಇದು ಪ್ರತಿದಿನ ಪ್ರಸಾರವಾಗುವ ಕಾರ್ಯಕ್ರಮ. ಆ ಕಾರಣಕ್ಕೆ ಪ್ರತಿದಿನ ಶೂಟಿಂಗ್ ಮಾಡಬೇಕಾಗುತ್ತದೆ. ಒಂದೂರಿನಿಂದ ಇನ್ನೊಂದು ಊರಿಗೆ ಪಯಣ ಮಾಡುತ್ತಲೇ ಇರಬೇಕು. ಇದರಿಂದ ಸಮಯವೇ ಸಿಗುವುದಿಲ್ಲ. ಆ ಕಾರಣಕ್ಕೆ ಮಾಡುವುದಿಲ್ಲ ಎಂದಿದ್ದೆ. ಆದರೆ ವಾಹಿನಿಯವರು ಒತ್ತಾಯ ಮಾಡಿದ್ದರು. ಈ ಕಾರ್ಯಕ್ರಮ ನಿಮಗೆ ಚೆನ್ನಾಗಿ ಸೂಟ್ ಆಗುತ್ತದೆ. ಫ್ಯಾಮಿಲಿಗಳ ಜೊತೆ ಚೆನ್ನಾಗಿ ಬೆರೆಯುತ್ತೀರಾ ಎಂದಿದ್ದರು. ನನಗೂ ಪದೇ ಪದೇ ಅಭಿಮಾನಿಗಳು ಇದನ್ನೇ ಕೇಳಿದ್ದ ಕಾರಣಕ್ಕೆ ನಾನು ಈ ಕಾರ್ಯಕ್ರಮ ನಿರೂಪಣೆಗೆ ಒಪ್ಪಿಕೊಂಡೆ’ ಎನ್ನುತ್ತಾರೆ.

ಮನೆ ಮನೆ ಮಹಾಲಕ್ಷ್ಮಿ ಕಾರ್ಯಕ್ರಮ ಮಾರ್ಚ್‌ 1 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1 ರಿಂದ 2 ಗಂಟೆವರೆಗೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.