ADVERTISEMENT

ಖಾಕಿ ತೊಟ್ಟ ನಟಿ ಸ್ವರ ಭಾಸ್ಕರ್

ಪ್ರಜಾವಾಣಿ ವಿಶೇಷ
Published 20 ಆಗಸ್ಟ್ 2020, 7:48 IST
Last Updated 20 ಆಗಸ್ಟ್ 2020, 7:48 IST
ಸ್ವರ ಭಾಸ್ಕರ್
ಸ್ವರ ಭಾಸ್ಕರ್   

ಬಾಲಿವುಡ್‌ ನಟಿ ಸ್ವರ ಭಾಸ್ಕರ್ ಹುಟ್ಟಿದ್ದು ದೆಹಲಿಯಲ್ಲಿ. ಅಲ್ಲಿಯೇ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ಪೂರೈಸಿದರು. ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪೂರೈಸಿದ ಬಳಿಕ ಆಕೆ ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯಕ್ಕೆ ಪ್ರವೇಶಾತಿ ಪಡೆದರು. ಅಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಅದಾದ ಬಳಿಕ ಬಣ್ಣದಲೋಕದ ಸೆಳೆತಕ್ಕೆ ಸಿಲುಕಿದ ಆಕೆ ಬಿಟೌನ್‌ಗೆ ಕಾಲಿಟ್ಟರು. ಆಕೆ ನಟಿಸಿದ ಮೊದಲ ಚಿತ್ರ ‘ಮಾಧೋಲಾಲ್ ಕೀಪ್‌ ವಾಕಿಂಗ್‌’. 2009ರಲ್ಲಿ ತೆರೆಕಂಡ ಇದು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತು.

ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ಸ್ವರ ಈಗ ‘ಫ್ಲೆಸ್‌’ ಹೆಸರಿನ ವೆಬ್‌ ಸರಣಿ ಮೂಲಕ ಡಿಜಿಟಲ್‌ ಲೋಕಕ್ಕೆ ಕಾಲಿಟ್ಟಿದ್ದಾರೆ. ಕ್ರೈಮ್‌ ಥ್ರಿಲ್ಲರ್ ಕಥನ ಇದು. ಇದರಲ್ಲಿ ಅವರದು ಪೊಲೀಸ್‌ ಅಧಿಕಾರಿಯ ಪಾತ್ರವಂತೆ. ವೃತ್ತಿಬದುಕಿನಲ್ಲಿ ಮೊದಲ ಬಾರಿಗೆ ಅವರು ಇಂತಹ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದಕ್ಕೆ ಡ್ಯಾನಿಶ್ ಅಸ್ಲಾಂ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಪೂಜಾ ಲಾಧಾ ಸುರ್ತಿ ಇದರ ಕಥೆ ಬರೆದಿದ್ದಾರೆ. ಅಕ್ಷಯ್ ಒಬೆರಾಯ್, ವಿದ್ಯಾ ಮಾಲ್ವಾಡೆ ಹಾಗೂ ಮಹಿಮಾ ಮಕ್ವಾನಾ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ADVERTISEMENT

ಮಾನವ ಕಳ್ಳಸಾಗಣೆಯ ಸುತ್ತ ಇದರ ಕಥೆ ಹೆಣೆಯಲಾಗಿದೆ. ಎಂಟು ಎಪಿಸೋಡ್‌ಗಳಲ್ಲಿ ಇದು ನಿರ್ಮಾಣವಾಗಲಿದೆ. ವಿಶ್ವದಲ್ಲಿ ಮಕ್ಕಳ ಕಳ್ಳಸಾಗಣೆಯು ಹವ್ಯಾಹತವಾಗಿದೆ. ಇದರ ಕಥನವನ್ನು ಈ ವೆಬ್‌ ಸರಣಿ ಕಟ್ಟಿಕೊಡಲಿದೆಯಂತೆ. ‘ಇಂತಹ ಸರಣಿ ಮತ್ತು ತಂಡದೊಟ್ಟಿಗೆ ಕೆಲಸ ಮಾಡಲು ನನಗೆ ಖುಷಿಯಾಗುತ್ತಿದೆ. ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವೆ. ಭರ್ಜರಿಯಾದ ಆ್ಯಕ್ಷನ್ ದೃಶ್ಯಗಳು ನನ್ನ ಅಭಿಮಾನಿಗಳನ್ನು ರಂಜಿಸಲಿವೆ’ ಎಂದಿದ್ದಾರೆ ಸ್ವರ ಭಾಸ್ಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.