ADVERTISEMENT

‘ಅಂತ’ ನೆನಪುಗಳು ಅನಂತ...

ಕೆ.ಎಂ.ಸಂತೋಷ್‌ ಕುಮಾರ್‌
Published 7 ಜೂನ್ 2019, 9:14 IST
Last Updated 7 ಜೂನ್ 2019, 9:14 IST
ಅಂತ
ಅಂತ   

ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು. ಪುಟ್ಟಣ್ಣ ಕಣಗಾಲ್‌, ಸಿದ್ಧಲಿಂಗಯ್ಯ,ದೊರೈ ಭಗವಾನ್ ಅವರಂತೆ ಕನ್ನಡದ ಪ್ರಸಿದ್ಧ ಕಾದಂಬರಿಗಳನ್ನು ಒಳ್ಳೆಯ ಸಿನಿಮಾಗಳಾಗಿ ತೆರೆಗೆ ತಂದಂತಹ ಸೃಜನಶೀಲ ನಿರ್ದೇಶಕ ಅವರು. ನಿರ್ಮಾಪಕರಾಗಿಯೂ ಹಲವು ಸಿನಿಮಾಗಳನ್ನು ಕನ್ನಡ,ಹಿಂದಿ,ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ಸಿನಿ ಉದ್ಯಮದಲ್ಲಿ ಸೋಲು–ಗೆಲುವು, ಲಾಭ– ನಷ್ಟ ಎರಡನ್ನೂ ಕಂಡವರು. ತಮ್ಮ ತಂದೆ, ನಿರ್ಮಾಪಕ ಡಿ.ಶಂಕರ್‌ ಸಿಂಗ್‌ ಅವರೊಂದಿಗೆ ‘ನಾಗಕನ್ಯೆ’ ಸಿನಿಮಾ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಿಂಗ್‌ ಬಾಬು ಪ್ರವೇಶಿಸಿದರು. ಅವರ ಕುಟುಂಬ ಹುಟ್ಟುಹಾಕಿದ ‘ಮಹಾತ್ಮ ಪಿಕ್ಚರ್ಸ್‌’ ಸಂಸ್ಥೆ ಇಂದಿಗೂ ಸಿನಿಮಾ ನಿರ್ಮಾಣ ಕಾಯಕದಲ್ಲಿ ತೊಡಗಿದೆ.

80ರ ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲೇ ಭಾರಿ ಸದ್ದು ಮಾಡಿದ ಹೆಗ್ಗಳಿಕೆ ರಾಜೇಂದ್ರ ಸಿಂಗ್‌ ಬಾಬು ಅವರ ನಿರ್ದೇಶನದ ‘ಅಂತ’ ಸಿನಿಮಾದ್ದು. ಸಿನಿ ಪರಿಣತರು, ಸಿನಿರಸಿಕರನ್ನು ಕನ್ನಡ ಚಿತ್ರರಂಗದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು. ‘ಅಂತ’ ಈಗ ಆಧುನಿಕ ತಂತ್ರಜ್ಞಾನದ ಸ್ಪರ್ಶ ಪಡೆದು ಈ ಶುಕ್ರವಾರ ರಾಜ್ಯದಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಕಾಣುತ್ತಿದೆ. ಈ ಹೊತ್ತಿನಲ್ಲಿ ‘ಅಂತ’ ಸಿನಿಮಾದ ಮಧುರ ನೆನಪುಗಳನ್ನು ಬಾಬು ಅವರು, ಸಿನಿಮಾ ಪುರವಣಿ ನಡೆಸಿದ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ.

‘ಅಂತ’ವನ್ನು ಯಾಕೆ ಮರು ಬಿಡುಗಡೆ ಮಾಡ್ತಾ ಇದ್ದೀರಿ?

ADVERTISEMENT

ಕೆಲವು ಹಳೆಯ ಸಿನಿಮಾಗಳನ್ನು ಈಗ ಮತ್ತೆ ಪ್ರೇಕ್ಷಕರಿಗೆ ತೋರಿಸಬೇಕಾದ ಅವಶ್ಯಕತೆ ಇದೆ. ಹಳೆಯ ಸಿನಿಮಾಗಳನ್ನು ನೋಡಲು ಜನರಲ್ಲೂ ಒಂದು ಬಗೆಯ ಕ್ರೇಜ್‌ ಕಾಣಿಸುತ್ತಿದೆ. 1981ರಲ್ಲಿ ಬಿಡುಗಡೆಯಾದ ಅಂತಕ್ಕೆ ಈಗ 38ರ ಹರೆಯ. ಜನರೇಷನ್ ಗ್ಯಾಪ್‌ ಆಗಿದೆ. ಈಗ ಬರುತ್ತಿರುವ ಸಿನಿಮಾಗಳಿಗೆ ಹೋಲಿಸಿದರೆ ಹಳೆಯ ಸಿನಿಮಾಗಳೇ ಎಷ್ಟೋ ವಾಸಿ. ವಸ್ತು ವಿಷಯದಲ್ಲೂ ಹಳೆಯ ಸಿನಿಮಾಗಳು ತುಂಬಾಚೆನ್ನಾಗಿವೆ. ರಾಜ್‌ಕುಮಾರ್‌,ವಿಷ್ಣುವರ್ಧನ್,ಶಂಕರ್‌ನಾಗ್‌ ಅವರಂತಹ ನಟರೂ ಇಲ್ಲ ಎನ್ನುವ ಮಾತಿದೆ. ಇಂತಹ ಸನ್ನಿವೇಶದಲ್ಲಿ ಮೂರೂವರೆ ದಶಕದ ಹಿಂದಿನ ಸಿನಿಮಾ ಮತ್ತೆ ಪ್ರಸ್ತುತವಾಗುತ್ತಿದೆ. ಹಾಗಾಗಿ ‘ಅಂತ’ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ.

‘ಅಂತ’ದಲ್ಲಿ ಅಂಥದ್ದೇನಿದೆ?

ಕನ್ನಡ ಚಿತ್ರರಂಗಕ್ಕೆಹೊಸ ಮಾರುಕಟ್ಟೆಯ ಆಯಾಮ ತಂದುಕೊಟ್ಟ ಸಿನಿಮಾ ಕೂಡ ಹೌದು. ಇದು ಅಂಬರೀಷ್‌ಗೂ ಲೈಫ್‌ ನೀಡಿದ ಸಿನಿಮಾ. ಬೋಲ್ಡೆಸ್ಟ್‌ ಥೀಮ್‌ ಹೊಂದಿರುವ ಈ ಸಿನಿಮಾ ಮಾಡಿದ್ದು ಒಂದು ದೊಡ್ಡ ಸಾಹಸ. ಸೌಂಡ್‌ ವಿಷಯದಲ್ಲೂ ವಿಶೇಷತೆ ಇದೆ. ಅದು ಮಾನೊ ಸೌಂಡ್‌. ಸ್ಟೀರಿಯೊ ಕೂಡ ಇರಲಿಲ್ಲ. ಅಂಥದರಲ್ಲೇ ಅದು ಅಷ್ಟೊಂದು ಇಂಪ್ಯಾಕ್ಟ್‌ ಮಾಡಿತ್ತು. ಜನರು ನಡುಗಿ ಹೋಗಿದ್ದರು. ಗರ್ಭಿಣಿಯರು ಈ ಸಿನಿಮಾ ನೋಡುವಂತಿರಲಿಲ್ಲ. ಮುನ್ನೆಚ್ಚರಿಕೆಯಾಗಿ ಕೆಲವು ಚಿತ್ರಮಂದಿರಗಳ ಬಳಿ ಆಂಬುಲೆನ್ಸ್‌ ಸಜ್ಜುಗೊಳಿಸಿಡಲಾಗಿತ್ತು.

ಈ ಸಿನಿಮಾದ ನಿಮ್ಮ ಮಧುರ ನೆನಪುಗಳ ಬಗ್ಗೆ ಹೇಳಿ...

ಇದರ ಬಗ್ಗೆ ನನಗೆ ಮೊದಲು ನೆನಪಾಗುವುದು ಸಿನಿಮಾದ ಕಥೆ. ಆ ಕಥೆ ಆಯ್ದುಕೊಂಡಿದ್ದೇ ಒಂದು ದೊಡ್ಡ ಸಾಹಸ. ಸುಧಾ ವಾರಪತ್ರಿಕೆಯಲ್ಲಿ ಅಂತದಕಥೆ ಬರುತ್ತಿತ್ತು.ನನ್ನ ಸಹೋದರ ಸಂಗ್ರಾಮ್‌ ಸಿಂಗ್‌ ಆ ಬಗ್ಗೆ ಹೇಳಿದ್ದ. ಗುರುವಾರ ಸುಧಾ ಮಾರುಕಟ್ಟೆಗೆ ಬರುತ್ತದೆ ಎಂದರೆ,ಓದುಗರು ಬುಧವಾರದಿಂದಲೇ ಕಾಯುತ್ತಿದ್ದರು. ಅಂತದ ಕಥೆಗೆ ಸಿನಿಮಾ ಮಾಡಲು ಬಹಳಷ್ಟು ಬೇಡಿಕೆ ಉಂಟಾಗಿತ್ತು. ರಾಜ್‌ಕುಮಾರ್‌ ಕಂಪನಿಯರು,ದೊರೈ ಭಗವಾನ್‌,ವಿಷ್ಣುವರ್ಧನ್ ಸಹ ಈ ಕಥೆಯನ್ನು ಕೊಡುವಂತೆ ಕೇಳಿಕೊಂಡು ಹೋಗಿದ್ದರು. ಆಗ ಸುಧಾದಲ್ಲಿ ಎಂ.ಬಿ. ಸಿಂಗ್‌ ಇದ್ದರು. ಅವರು ನನಗೆ ದೂರದ ಸಂಬಂಧಿಯೂ ಹೌದು. ನಾನು ಆಗಷ್ಟೇ ನಾಗರಹೊಳೆ,ಕಿಲಾಡಿ ಜೋಡಿ ಸಿನಿಮಾ ಮಾಡಿದ್ದೆ. ಅಂತ ಬರೆಯುತ್ತಿದ್ದ ಲೇಖಕ,ಈ ಕಥೆಯನ್ನು ಸ್ಟಾರ್‌ಗಳಿಗೆ ಕೊಡಬೇಡಿ, ಯಾರಾದರೂ ಒಬ್ಬ ನಿರ್ದೇಶಕನಿಗೆ ಕೊಡಿ ಎಂದಿದ್ದರಂತೆ. ಆಗ ನಾನು ಕಥೆ ಕೊಡುವಂತೆ ಕೇಳಿದೆ. ಅವರು ಆ ಕಥೆಯನ್ನುನನಗೆ ನೀಡಿದರು.

ನಟರ ಆಯ್ಕೆ ನಡೆಸುವಾಗ ರಜನಿಕಾಂತ್‌ ಫೋಟೊಶೂಟ್‌ಗೆ ಬಂದುಹೋದರು! ಆದರೆ,ಅವರು ಆಯ್ಕೆಯಾಗಲಿಲ್ಲ. ರಾಜ್‌ಕುಮಾರ್ ಅಭಿನಯಿಸುವುದಾಗಿ ಹೇಳಿಕಳುಹಿಸಿದ್ದರು. ಆದರೆ,ನನಗೆ ರಾಜ್‌ಕುಮಾರ್‌ ಜತೆ ಸಿನಿಮಾ ಮಾಡಲು ಭಯ. ಕಾರಣ;ಆಗ ರಾಜ್‌ಕುಮಾರ್‌ ಮೆಗಾ ಸ್ಟಾರ್‌. ಸಿನಿಮಾದಲ್ಲಿದ್ದ ಗರ್ಭಪಾತದ ದೃಶ್ಯ ಸೇರಿ ಕೆಲವು ಥೀಮ್‌ಗಳು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತವೋ ಇಲ್ಲವೊ ಎನ್ನುವ ಅಳುಕು ನನಗೆ. ನನ್ನ ಆಪ್ತ ಗೆಳೆಯ ವಿಷ್ಣುವರ್ಧನ್‌ ಹೆಸರು ಪ್ರಸ್ತಾಪವಾದಾಗಲೂ ಅದೇ ರೀತಿಯ ಸಮಸ್ಯೆ ಕಾಡಿತು. ಆಗ ಅಂಬರೀಷ್‌ ಹೆಸರು ತಲೆಯಲ್ಲಿ ಬಂತು.ಆದರೆ, ಆಗಿನ್ನು ಅಂಬರೀಷ್‌ಗೆ ಹೆಚ್ಚು ಅವಕಾಶಗಳಿರಲಿಲ್ಲ. ಅವರು ಯಾವುದೇ ಲೀಡ್‌ ರೋಲ್‌ ಮಾಡಿರಲಿಲ್ಲ. ಪುಟ್ಟಣ್ಣ ಕಣಗಾಲ್‌ಅವರು ಅಮರನಾಥ್‌ಗೆ ಅಂಬರೀಷ್‌ ಎಂಬ ಹೆಸರಿಟ್ಟು ‘ನಾಗರಹಾವು‘ ಸಿನಿಮಾದಲ್ಲಿ ಜಲೀಲನ ಚಿಕ್ಕ ಪಾತ್ರ ನೀಡಿದ್ದರು. ಆಗಿನ ಕಾಲಕ್ಕೆ ‘ಅಂತ’ ಅತಿ ದೊಡ್ಡ ಬಜೆಟ್ಟಿನ ಸಿನಿಮಾ. 80ರ ದಶಕದಲ್ಲಿ ₹19 ಲಕ್ಷ ವೆಚ್ಚ ಎಂದರೆ, ಇಂದು ಅದು ಎಷ್ಟು ಕೋಟಿಗೆ ಸಮ ಇರಬಹುದು ಊಹಿಸಿ.

ಒಂದು ಕಡೆ ಕನ್ವರ್‌ ಲಾಲ್‌ ಮತ್ತೊಂದು ಕಡೆ ಇನ್‌ಸ್ಪೆಕ್ಟರ್‌ ಸುಶೀಲ್‌ ಕುಮಾರ್‌ ಪಾತ್ರ. ದ್ವಿಪಾತ್ರಕ್ಕೆ ಅಂಬರೀಷ್‌ ಅವರನ್ನು ಹಾಕಿಕೊಂಡು ದೊಡ್ಡ ಸಿನಿಮಾ ಹೇಗೆ ಮಾಡುವುದೆಂಬ ಅಳುಕು, ಕೊನೆಗೆ ಧೈರ್ಯ ಮಾಡಿದೆ. ಆದರೆ,ಕೆಸಿಎನ್‌ ಚಂದ್ರು, ಅಂಬರೀಷ್‌ನ ಯಾರು ನೋಡ್ತಾರ್‍ರಿ ಅಂಥ ಒಪ್ಪಲಿಲ್ಲ,ಆಗ ಮಾರುತಿ ನನ್ನ ನಿರ್ಧಾರವನ್ನು ಬೆಂಬಲಿಸಿದರು.

ಈ ಸಿನಿಮಾ ಮಾಡುವಾಗ ನೀವು ನಿಜಕ್ಕೂ ಎದುರಿಸಿದ ಸವಾಲುಗಳು ಏನು?

ಹೀರೋ ಇಲ್ಲ,ಹೀರೊಯಿನ್‌ ಇಲ್ಲ. ಲವ್‌ ಸೀನ್‌ ಇಲ್ಲ. ಯಾರ‍್ರೀ ಈ ಸಿನಿಮಾ ನೋಡ್ತಾರೆ ಎನ್ನುವ ಮಾತು ಕೆಸಿಎನ್‌ ಅವರಿಂದ ಕೇಳಿ ಬಂದಿತ್ತು. ಕಥೆಯಲ್ಲಿ ಕ್ಲೈಮ್ಯಾಕ್ಸ್‌ ಇರಲಿಲ್ಲ. ಅದನ್ನು ನಾವು ರೂಪಿಸಿದೆವು. ಕನ್ವರ್ ಲಾಲ್‌ ಕ್ಯಾರೆಕ್ಟರ್‌ ನೇಮ್‌ ಅಷ್ಟೇ ಇತ್ತು. ಪಾತ್ರದ ಸ್ವರೂಪ ಇರಲಿಲ್ಲ.ತಂಗಿಯ ಪಾತ್ರವೇ ಇರಲಿಲ್ಲ. ಅದನ್ನು ನಾವೇ ಸೃಷ್ಟಿಸಿದೆವು.

ಇನ್ನೂ ಸಿನಿಮಾ ಬಿಡುಗಡೆ ವೇಳೆಗೆ ಇಂಡಸ್ಟ್ರಿ ಕಡೆಯಿಂದಲೂ ಬಹಳ ತೊಂದರೆಯಾಯಿತು. ಕೆಲವರಿಗೆ ಸಿನಿಮಾ ದೊಡ್ಡ ಹೆಸರು ಮಾಡುತ್ತದೆ ಎನ್ನುವ ಹೊಟ್ಟೆಕಿಚ್ಚು ಇತ್ತು.ಈ ಸಿನಿಮಾ ಸೆನ್ಸಾರ್‌ ಆಗಬಾರದೆಂದು ಬಹಳ ಜನರು ಅಭಿಯಾನ ನಡೆಸಿದರು. ಸೆನ್ಸಾರ್‌ ಮಂಡಳಿಯಲ್ಲಿದ್ದ ಪತ್ರಕರ್ತರೊಬ್ಬರು ಸಮಿತಿಯ ಸಭೆ ಮುಗಿಸಿ ಹೊರ ಬಂದಾಗ ಇಂತಹ 150 ಸಿನಿಮಾಗಳು ಬರಬೇಕೆಂದು ಪ್ರಶಂಸಿಸಿದರು. ನಮಗೆ ಹೋದ ಜೀವ ಮರಳಿ ಬಂದ ಅನುಭವ ಆಯಿತು ಎಂದು ಹಳೆಯ ನೆನಪುಗಳಿಗೆ ಅವರು ಜಾರಿದರು.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಿನಿಮಾ ಹಿಟ್‌ ಆಗುತ್ತೆ ಅನಿಸಿತ್ತಾ?

ನಾವು ಆ ಮಟ್ಟದ ಸಕ್ಸಸ್‌ ನಿರೀಕ್ಷೆ ಮಾಡಿರಲಿಲ್ಲ. ನಿರೀಕ್ಷೆ ಮಾಡಿದ್ದಕ್ಕಿಂತಲೂ ಸಿನಿಮಾ ಹತ್ತುಪಟ್ಟು ಹೆಚ್ಚು ಯಶಸ್ಸು ಕಂಡಿತು.

ಹೊಸ ಅವತಾರದಲ್ಲಿ ‘ಅಂತ’ ಹೇಗೆ ಬಂದಿದೆ?

‘ಅಂತ’ ಸಿನಿಮಾಕ್ಕೆ ಈಗಎಲ್ಲ ಆಧುನಿಕ ತಂತ್ರಜ್ಞಾನಗಳ ಸ್ಪರ್ಶವನ್ನು ಲಹರಿ ಸಂಸ್ಥೆ ನೀಡಿದೆ. 35 ಎಂಎಂನಲ್ಲಿದ್ದ ಸ್ಕ್ರೀನ್‌ ಅನ್ನು ಸಿನಿಮಾ ಸ್ಕೋಪ್‌ಗೆ ಏರಿಸಲಾಗಿದೆ.ನಟರ ಮುಖಗಳನ್ನು ರೀಮೋಲ್ಡ್‌ ಮಾಡಿ,ಗ್ರಾಫಿಕ್‌ ಟಚ್‌ ಕೊಡ
ಲಾಗಿದೆ. ಒಟ್ಟಾರೆಕಲರ್‌ಫುಲ್‌ ಆಗಿದೆ. ಮರು ಬಿಡುಗಡೆಯ ಅವತರಣಿಕೆ ನೋಡಿದ್ದೇನೆ. ತುಂಬಾ ಚೆನ್ನಾಗಿದೆ.

ಅಂಬರೀಷ್‌ಇಲ್ಲದಿರುವಾಗ ಈ ಸಿನಿಮಾ ಮತ್ತೆ ತೆರೆ ಮೇಲೆ ಬರುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

‘ಅಂತ’ದಲ್ಲಿ ನಟಿಸಿದ್ದ ವಜ್ರಮುನಿ,ಪ್ರಭಾಕರ್‌, ಸುಂದರ್‌ ಕೃಷ್ಣ ಅರಸ್‌, ಮುಸರಿ ಕೃಷ್ಣಮೂರ್ತಿ,ಡಿಕ್ಕಿ ಮಾಧವರಾವ್‌, ಸಂಕಲನಕಾರ ಬಾಲು, ಛಾಯಾಗ್ರಾಹಕಪಿ.ಎಸ್‌.ಪ್ರಕಾಶ್‌, ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್‌, ಸಂಭಾಷಣೆಕಾರ ಎಚ್‌.ವಿ.ಸುಬ್ಬರಾವ್, ಕತೆಗಾರ ಎಚ್.ಕೆ.ಅನಂತರಾವ್‌ ಇಲ್ಲ. ಇಷ್ಟು ದಿನ ಇದ್ದ ಅಂಬರೀಷ್‌ ಕೂಡ ಇಂದು ನಮ್ಮೊಂದಿಗೆ ಇಲ್ಲ. ಏನು ಮಾಡುವುದು ಹೇಳಿ, ನಮಗೆ ಏನೇ ಆಸೆಗಳಿರಬಹುದು, ಕಾಲನ ಕರೆಯನ್ನು ಯಾರೂ ಮೀರುವಂತಿಲ್ಲ.

ನಿಮ್ಮ ಮುಂದಿರುವ ಹೊಸ ಯೋಜನೆಗಳು

ಭಾರತೀಯ ಚಿತ್ರರಂಗದಲ್ಲೆ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಎನಿಸಲಿರುವ ವೀರ ಮದಕರಿ ನಾಯಕ ಸಿನಿಮಾ ನಿರ್ದೇಶಿಸುತ್ತಿದ್ದೇನೆ. ದರ್ಶನ್ ನಾಯಕನಾಗಿ ನಟಿಸಲಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಲಿದ್ದಾರೆ. ಇದು ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿತ ಸಿನಿಮಾ.ಅಲ್ಲದೆ ಕಲಬುರ್ಗಿಯ ಹೊಸ ಬರಹಗಾರರೊಬ್ಬರ ಅಪ್ರಕಟಿತ ಕಾದಂಬರಿಯೊಂದನ್ನು ಆಧರಿಸಿ,ನನ್ನ ಮಗ ಆದಿತ್ಯನಿಗಾಗಿ ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ. ಆದಿತ್ಯ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾನೆ. ಇದೊಂದು ಕ್ರೈಂ ಥ್ರಿಲ್ಲರ್‌ ಕಥೆಯ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.