ADVERTISEMENT

ತಮನ್ನಾಗೆ ಅಮ್ಮನ ಸಿಂಧಿ ಪಾಠ

​ಪ್ರಜಾವಾಣಿ ವಾರ್ತೆ
Published 18 ಮೇ 2020, 19:30 IST
Last Updated 18 ಮೇ 2020, 19:30 IST
ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ   

ನಟಿ ತಮನ್ನಾ ಭಾಟಿಯಾ ಅವರ ಕೌಟುಂಬಿಕ ಮೂಲ ಸಿಂಧಿ. ಅಪ್ಪ ಸಂತೋಷ್‌ ಭಾಟಿಯಾ ವಜ್ರದ ವ್ಯಾಪಾರಿ. ಅಮ್ಮ ರಜನಿ ಭಾಟಿಯಾ ಗೃಹಿಣಿ. ಹದಿನೈದನೇ ವಯಸ್ಸಿಗೆ ಬಣ್ಣದಲೋಕದ ಸೆಳೆತಕ್ಕೆ ಸಿಲುಕಿದ ಆಕೆ ಮೊದಲು ನಟಿಸಿದ ಚಿತ್ರ ಹಿಂದಿಯ ‘ಚಂದ್ ಸಾ ರೋಶನ್ ಚೆಹ್ರಾ’. ಅದೇ ವರ್ಷ ತೆಲುಗಿನ ‘ಶ್ರೀ’ ಚಿತ್ರದಲ್ಲೂ ಬಣ್ಣಹಚ್ಚಿದರು. ಚಿತ್ರರಂಗ ಪ್ರವೇಶಿಸಿ ಹದಿನೈದು ವರ್ಷಗಳನ್ನು ಪೂರೈಸಿರುವ ಆಕೆ ಹಿಂದಿ, ತೆಲುಗು, ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.

ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸರಣಿ ಚಿತ್ರಗಳಲ್ಲಿನ ಆವಂತಿಕಾ ಪಾತ್ರಕ್ಕೆ ಜೀವ ತುಂಬಿದ್ದು, ಆಕೆಯ ವೃತ್ತಿಬದುಕಿನ ಹೊಸದೊಂದು ಮೈಲಿಗಲ್ಲು.ದೊಡ್ಡ ಬಜೆಟ್‌ನ ಚಿತ್ರಗಳಲ್ಲಿ ಐಟಂ ಸಾಂಗ್‌ಗೂ ಸೊಂಟ ಬಳುಕಿಸುವುದರಲ್ಲಿ ಈ ‘ಮಿಲ್ಕಿ ಬ್ಯೂಟಿ’ ಹಿಂದೇಟು ಹಾಕುವುದಿಲ್ಲ. ಪ್ರಶಾಂತ್‌ ನೀಲ್‌ ನಿರ್ದೇಶನದ ಕನ್ನಡದ ‘ಕೆಜಿಎಫ್‌ ಚಾಪ್ಟರ್‌ 1’ ಸಿನಿಮಾದಲ್ಲಿ ‘ಜೋಕೆ ನಾನು ಬಳ್ಳಿಯ ಮಿಂಚು...’ ಹಾಡಿಗೂ ನಡು ಬಳುಕಿಸಿ ಪಡ್ಡೆ ಹುಡುಗರ ನಿದ್ದೆಗೆ ಭಂಗ ತಂದಿದ್ದರು.

ಜೂನಿಯರ್‌ ಎನ್‌ಟಿಆರ್‌ ನಟನೆಯ ‘ಜೈಲವಕುಶ’ ಸಿನಿಮಾದಲ್ಲೂ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಿದ್ದರು. ಮಹೇಶ್‌ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾದಲ್ಲೂ ಐಟಂ ಸಾಂಗ್‌ಗೆ ಕುಣಿದಿದ್ದರು.

ADVERTISEMENT

ಲಾಕ್‌ಡೌನ್‌ ಪರಿಣಾಮ ತಮನ್ನಾ ಕುಟುಂಬದ ಸದಸ್ಯರೊಟ್ಟಿಗೆ ಮನೆಯಲ್ಲಿಯೇ ಕಾಲ ದೂಡುತ್ತಿದ್ದಾರೆ. ಈ ಅವಧಿಯಲ್ಲಿ ಹೊಸ ಕಲಿಕೆ ಮತ್ತು ಕೌಶಲ ವೃದ್ಧಿಗೆ ಆಕೆ ಒತ್ತು ನೀಡಿದ್ದಾರಂತೆ. ಆಕೆ ಹೊಸದೇನನ್ನು ಕಲಿಯುತ್ತಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆ. ಆಕೆ ತನ್ನ ಮಾತೃಭಾಷೆಯಾದ ‘ಸಿಂಧಿ’ ಕಲಿಯುತ್ತಿದ್ದಾರಂತೆ. ಜೊತೆಗೆ, ಸಿಂಧಿ ಅಡುಗೆ ಮಾಡುವುದನ್ನು ಕರಗತ ಮಾಡಿಕೊಳ್ಳುತ್ತಿದ್ದಾರಂತೆ. ‘ತನ್ನೆಲ್ಲಾ ಕಲಿಕೆ ಅಮ್ಮನೇ ಊರುಗೋಲಾಗಿದ್ದಾರೆ’ ಎಂದು ಇತ್ತೀಚೆಗೆ ಮಾಧ್ಯಮದವರೊಟ್ಟಿಗೆ ನಡೆದ ಸಂವಾದದಲ್ಲಿ ಆಕೆ ಹೇಳಿಕೊಂಡಿದ್ದಾರೆ.

ಸದಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಆಕೆಗೆ ಸಿಂಧಿ ಭಾಷೆ ಮತ್ತು ಸಿಂಧಿ ಅಡುಗೆ ರೆಸಿಪಿ ಕಲಿಕೆಗೆ ತೊಡಕಾಗಿತ್ತಂತೆ. ಲಾಕ್‌ಡೌನ್‌ನಿಂದಾಗಿ ಕಲಿಕೆಗೆ ಸಹಕಾರಿಯಾಗಿದೆ ಎಂಬುದು ಆಕೆಯ ಇಂಗಿತ. ಪ್ರಸ್ತುತ ಆಕೆ ‘ಬೋಲೆ ಚುಡಿಯನ್’, ‘ಸೀತಿಮಾರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.