ADVERTISEMENT

ತರ್ಲೆ ಚಾರ್ಲಿ ಜೊತೆ ರಕ್ಷಿತ್ ಶೆಟ್ಟಿ

ತಿಂಗಳಾಂತ್ಯಕ್ಕೆ ಗುಜರಾತ್‌ಗೆ ಚಿತ್ರತಂಡ ಪಯಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:30 IST
Last Updated 24 ಫೆಬ್ರುವರಿ 2020, 19:30 IST
‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ
‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ   

ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಸುತ್ತ ಹೆಣೆದಿರುವುದೇ ‘777 ಚಾರ್ಲಿ’ ಚಿತ್ರದ ಕಥನ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಬಳಿಕ ರಕ್ಷಿತ್‌ ಶೆಟ್ಟಿ ನಟಿಸುತ್ತಿರುವ ಈ ಸಿನಿಮಾದ ಮೇಲೆ ಕುತೂಹಲ ಇಮ್ಮಡಿಗೊಂಡಿದೆ. ಇದನ್ನು ಕಿರಣ್‌ರಾಜ್‌ ಕೆ. ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ, ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಈ ತಿಂಗಳ ಅಂತ್ಯಕ್ಕೆ ಗುಜರಾತ್‌, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ ಚಾರ್ಲಿಯ ಪಯಣದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ. ರಕ್ಷಿತ್‌ ಶೆಟ್ಟಿ, ಚಾರ್ಲಿ(ನಾಯಿ) ಮತ್ತು ನಾಯಕಿ ಸಂಗೀತಾ ಶೃಂಗೇರಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಹದಿನೈದು ದಿನಗಳ ಕಾಲ ಈ ಮೂವರ ಟ್ರಾವೆಲ್‌ನ ಶೂಟಿಂಗ್‌ ನಡೆಯಲಿದೆ. ಶಿಮ್ಲಾ, ಕಾಶ್ಮೀರದಲ್ಲಿ ಉಳಿದ ಹಂತದ ಚಿತ್ರೀಕರಣ ನಡೆಯಲಿದೆ. ಇಲ್ಲಿಯವರೆಗೆ ನಡೆದಿರುವ ಶೂಟಿಂಗ್‌ನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಕಿರಣ್‌ರಾಜ್‌.

ADVERTISEMENT

‘ಇದು ಪ್ಯಾನ್‌ ಇಂಡಿಯಾ ಕಾನ್ಟೆಪ್ಟ್‌ನಡಿ ನಿರ್ಮಾಣವಾಗುತ್ತಿರುವ ಸಿನಿಮಾ. ಇನ್ನೆರಡು ತಿಂಗಳಲ್ಲಿ ಉಳಿದ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗುವುದು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. ಹಾಗಾಗಿ, ಶೂಟಿಂಗ್‌ ‍ಪೂರ್ಣಗೊಂಡ ಬಳಿಕ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಾಗುವುದು’ ಎಂದು ವಿವರಿಸುತ್ತಾರೆ.

ಚಿತ್ರದಲ್ಲಿ 20 ನಿಮಿಷಗಳ ಅವಧಿಯ ವಿಎಫ್ಎಕ್ಸ್ ಇದೆ. ಎಂಟು ಹಾಡುಗಳಿದ್ದು, ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಇವೆಯಂತೆ. ಇಲ್ಲಿಯವರೆಗೂ ನಾಲ್ಕು ಹಾಡುಗಳ ಚಿತ್ರೀಕರಣ ಪೂರ್ಣಗೊಂಡಿದೆ. ಅಂದಹಾಗೆ ಚಿತ್ರದಲ್ಲಿ ಚಾರ್ಲಿ ಪಾತ್ರ ನಿರ್ವಹಿಸಿರುವ ನಾಯಿಗೆ ಒಂದು ವರ್ಷ ತರಬೇತಿ ನೀಡಿದ ನಂತರವೇ ಅದನ್ನು ಶೂಟಿಂಗ್‌ ಸೆಟ್‌ಗೆ ಕರೆತರಲಾಯಿತು ಎನ್ನುವುದು ಚಿತ್ರತಂಡದ ವಿವರಣೆ.

ಚಿತ್ರದ ನಾಯಕ ಏಕಾಂಗಿ. ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾನೆ. ಜೊತೆಗೆ, ಮುಂಗೋಪಿ. ಸಮಾಜದಲ್ಲಿ ಯಾರೊಬ್ಬರ ಜೊತೆಗೂ ಬೆರೆಯುವುದಿಲ್ಲ. ಚಾರ್ಲಿಯದು ಈತನಿಗೆ ತದ್ವಿರುದ್ಧವಾದ ಮನಸ್ಥಿತಿ. ಹೈಪರ್‌ ಆಕ್ಟಿವ್‌ ಆಗಿರುತ್ತದೆ; ಸಿಕ್ಕಾಪಟ್ಟೆ ತರ್ಲೆ ನಾಯಿ. ಇದು ತನ್ನ ಮೂಲ ಪ್ರದೇಶದಿಂದ ಎಸ್ಕೇಪ್‌ ಆಗಿ ಕಥಾನಾಯಕ ಇರುವ ಜಾಗಕ್ಕೆ ಎಂಟ್ರಿಯಾಗುತ್ತದೆ. ಅಚಾನಕ್‌ ಆಗಿ ಆತನ ಬದುಕನ್ನೂ ಪ್ರವೇಶಿಸುತ್ತದೆ. ಇದರಿಂದ ನಾಯಕನ ಜೀವನ ಹೇಗೆ ಬದಲಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

ನಟ ರಾಜ್‌ ಬಿ. ಶೆಟ್ಟಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅರವಿಂದ್ ಕಶ್ಯಪ್‌ ಅವರ ಛಾಯಾಗ್ರಹಣವಿದೆ. ನೊಬಿಲ್‌‍ಪಾಲ್‌ ಸಂಗೀತ ನೀಡಿದ್ದಾರೆ. ಜಿ.ಎಸ್‌. ಗುಪ್ತ ಮತ್ತು ರಕ್ಷಿತ್‌ ಶೆಟ್ಟಿ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.