ಹೈದರಾಬಾದ್: 'ಪುಷ್ಪ-2' ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರು ಇಂದು(ಮಂಗಳವಾರ) ಚಿಕ್ಕಡಪಲ್ಲಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ತನಿಖೆಯ ಭಾಗವಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಸದ್ಯ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮನೆಯಿಂದ ವಿಚಾರಣೆಗೆ ತೆರಳುವ ಮುನ್ನ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ನಟ ಅಲ್ಲು ಅರ್ಜುನ್ ಕೈ ಬೀಸಿದರು.
ಡಿ.4ರಂದು ಪುಷ್ಪ–2 ಪ್ರೀಮಿಯರ್ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪುತ್ರ ಗಾಯಗೊಂಡಿದ್ದರು. ಹೈದರಾಬಾದ್‌ನಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ಘಟನೆ ನಡೆದಿತ್ತು. ಈ ಸಂಬಂಧ ಮೃತ ಮಹಿಳೆಯ ಕುಟುಂಬ ಸದಸ್ಯರು ಡಿ.5 ರಂದು ಚಿತ್ರಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಂ 11 ಎಂದು ಹೆಸರಿಸಲಾದ ನಟ ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13 ರಂದು ಪೊಲೀಸರು ಬಂಧಿಸಿದ್ದರು. ಬಳಿಕ ತೆಲಂಗಾಣ ಹೈಕೋರ್ಟ್ ಅದೇ ದಿನ ಸಂಜೆಯ ಹೊತ್ತಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.