ADVERTISEMENT

Full Meals Movie | ಹತ್ತು ಸಿನಿಮಾಗಳು ಸಿಕ್ಕರೆ ದೊಡ್ಡದು: ತೇಜಸ್ವಿನಿ ಶರ್ಮ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 23:30 IST
Last Updated 20 ನವೆಂಬರ್ 2025, 23:30 IST
ತೇಜಸ್ವಿನಿ ಶರ್ಮ
ತೇಜಸ್ವಿನಿ ಶರ್ಮ   

ಲಿಖಿತ್‌ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ ಮುಖ್ಯಭೂಮಿಕೆಯಲ್ಲಿರುವ ‘ಫುಲ್‌ ಮೀಲ್ಸ್‌’ ಚಿತ್ರ ಇಂದು ತೆರೆ ಕಾಣುತ್ತಿದೆ. ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಸಿನಿಪಯಣ ಕುರಿತು ತೇಜಸ್ವಿನಿ ಶರ್ಮ ಮಾತನಾಡಿದ್ದಾರೆ. 

‘ಇದು ರಾಮ್‌ಕಾಮ್‌ ಚಿತ್ರ. ನಾಯಕ ಲಿಖಿತ್‌ ಛಾಯಾಗ್ರಾಹಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಮೇಕಪ್‌ ಕಲಾವಿದೆಯಾಗಿ ‘ಪ್ರೀತಿ’ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿರುವೆ. ಸಾಮಾನ್ಯವಾಗಿ ಮೇಕಪ್‌ ಕಲಾವಿದೆ ಹಾಗೂ ಛಾಯಾಗ್ರಾಹಕನ ನಡುವಿನ ಸಹಭಾಗಿತ್ವ ಹೇಗೆ ಇರುತ್ತದೆಯೋ ಅದೇ ರೀತಿ ಕಥೆ ಸಾಗುತ್ತದೆ. ಆನಂತರ ಒಂದು ವಧುವಿನ ಜತೆ ನಡೆಯುವ ಡ್ರಾಮಾವೇ ಚಿತ್ರ. ಈವರೆಗೆ ನಾನು ಮಾಡಿದ್ದು ಥ್ರಿಲ್ಲರ್‌, ಗಂಭೀರ ಎನ್ನುವ ರೀತಿಯ ಪಾತ್ರಗಳು. ‘ಪ್ರೀತಿ’ ರೀತಿಯ ಪಾತ್ರ ಮಾಡಿರಲಿಲ್ಲ’ ಎಂದು ಮಾತು ಪ್ರಾರಂಭಿಸಿದರು ತೇಜಸ್ವಿನಿ.

ಕೊಡಗಿನವರಾದ ಇವರು ‘ಕೊಡವರ ಸಿಪಾಯಿ’, ‘ಮೇರಿ’, ‘ಇಂಗ್ಲಿಷ್‌ ಮಂಜ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪ್ರೀತಿ’ ಪಾತ್ರ ಹೆಸರಿಗೆ ತಕ್ಕಂತೆ ಇದೆ. ತನ್ನದೇ ಒಂದು ಪ್ರಪಂಚದಲ್ಲಿ ಇರುವ ಹುಡುಗಿ. ಇಲ್ಲೊಂದು ಪ್ರೇಮಕಥೆ ಬರುತ್ತದೆ. ಈ ಸಿನಿಮಾ ಮೇಲೆ ತುಂಬ ಭರವಸೆಯಿದೆ’ ಎನ್ನುತ್ತಾರೆ ಅವರು. 

ADVERTISEMENT

‘ಕನ್ನಡ ಸಿನಿಮಾಗಳಲ್ಲಿ ಸಾಕಷ್ಟು ಅವಕಾಶ ಸಿಗಬೇಕು ಎಂಬ ಆಸೆಯಿದೆ. ಸುಮಾರು ಜನ ನನ್ನನ್ನು ನೋಡಿ, ಹೆಸರು ನೋಡಿ ಕನ್ನಡ ಬರುವುದಿಲ್ಲ, ಉತ್ತರ ಭಾರತೀಯಳು ಅಂದುಕೊಳ್ಳುತ್ತಾರೆ. ನಾನು ಕೊಡಗಿನವಳು. ಬೆಳೆದಿದ್ದೆಲ್ಲ ಮೈಸೂರಿನಲ್ಲಿ. ಈಗೀಗ ನಾನು ಕನ್ನಡದವಳೇ ಎಂದು ಹಲವರಿಗೆ ಗೊತ್ತಾಗುತ್ತಿದೆ. ನಾನು ಈತನಕ ಮಾಡಿದ ಸಿನಿಮಾಗಳು ಅಂದುಕೊಂಡಷ್ಟು ರೀಚ್‌ ಆಗಲಿಲ್ಲ. ಆದರೆ ಕಲಾವಿದೆಯಾಗಿ ನಾನು ಆ ಸಿನಿಮಾಗಳಿಗೆ ನ್ಯಾಯ ಒದಗಿಸಿದ್ದೇನೆ ಎಂಬ ತೃಪ್ತಿಯಿದೆ’ ಎಂಬ ಅಭಿಪ್ರಾಯ ಅವರದ್ದು. 

‘ಇವತ್ತು ನಟಿಯರಿಗೆ ಅವಕಾಶಗಳು ಬಹಳ ಸವಾಲಾಗಿದೆ. ಹಿಂದಿನ ನಟಿಯರಂತೆ ಈಗ ಅವಕಾಶಗಳು ಸಿಗುವುದಿಲ್ಲ. ಮಾಲಾಶ್ರೀ, ಶ್ರುತಿ ಅವರಂಥ ನಟಿಯರು ನೂರು ಸಿನಿಮಾಗಳನ್ನು ಮಾಡಿದ್ದಾರೆ. ಈಗಿನ ನಟಿಯರಿಗೆ ಹತ್ತು ಸಿನಿಮಾ ಸಿಕ್ಕರೆ ದೊಡ್ಡದು ಎಂಬಂತಾಗಿದೆ. ಒಬ್ಬಳು ನಾಯಕಿಯಾಗಿ ಕಾಲಿಟ್ಟರೆ, ಮುಂದಿನ ಸಿನಿಮಾಗೆ ಮತ್ತೊಬ್ಬ ನಾಯಕಿ ಬಂದಿರುತ್ತಾರೆ. ಅಷ್ಟು ಸ್ಪರ್ಧೆಯಿದೆ. ಸಿನಿಮಾ ಯಶಸ್ವಿಯಾದರೆ ಮಾತ್ರ ನಾಯಕಿಗೆ ಅವಕಾಶ ಎಂಬಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಕ್ಷೇತ್ರಕ್ಕೆ ಬಂದ ಮೇಲೆ ಇದರಲ್ಲಿ ಈಜಲೇಬೇಕು. ಜನರನ್ನು ಚಿತ್ರಮಂದಿರಕ್ಕೆ ಕರೆಸುವುದು ದೊಡ್ಡ ಸವಾಲಾಗಿದೆ. ಚಿತ್ರ ಗೆದ್ದರೆ ನಟಿಸಿದವರು ಕೂಡ ಪ್ರೇಕ್ಷಕರನ್ನು ತಲುಪುತ್ತಾರೆ. ಜತೆಗೆ ನಾಯಕಿಯ ಪಾತ್ರವನ್ನು ಗಟ್ಟಿಯಾಗಿ ಬರೆದರೆ ನಾಯಕಿ ಗುರುತಿಸಿಕೊಳ್ಳುತ್ತಾಳೆ. ಉದಾಹರಣೆಗೆ ‘ಸಪ್ತಸಾಗರದಾಚೇ ಎಲ್ಲೋ’ ಸಿನಿಮಾದಲ್ಲಿ ನಾಯಕಿ ಪಾತ್ರ ಎಲ್ಲರಿಗೂ ರೀಚ್‌ ಆಗಿದೆ. ನಾಯಕನಷ್ಟೇ ನಾಯಕಿಗೂ ಅಲ್ಲಿ ಪ್ರಾಶಸ್ತ್ಯವಿತ್ತು. ಅಂಥ ಪಾತ್ರಗಳು ಸಿಗಬೇಕು. ತಮಿಳಿನಲ್ಲಿ ಒಂದು ಸಿನಿಮಾ ಮಾಡುತ್ತಿರುವೆ. ತೆಲುಗು ಭಾಷೆಯಲ್ಲೊಂದು ಸಿನಿಮಾ ಮಾತುಕತೆ ನಡೆಯುತ್ತಿದೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಸಿಗಬೇಕಿದೆ’ ಎಂದು ಮಾತಿಗೆ ವಿರಾಮವಿತ್ತರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.