ADVERTISEMENT

The Bengal Files | ಸತ್ಯ ಹೇಳಿದರೆ ಅಪಪ್ರಚಾರ ಎನ್ನುತ್ತಾರೆ: ಮಿಥುನ್ ಚಕ್ರವರ್ತಿ

ಪಿಟಿಐ
Published 20 ಆಗಸ್ಟ್ 2025, 15:58 IST
Last Updated 20 ಆಗಸ್ಟ್ 2025, 15:58 IST
<div class="paragraphs"><p>ನಟ ಮಿಥುನ್‌ ಚಕ್ರವರ್ತಿ</p></div>

ನಟ ಮಿಥುನ್‌ ಚಕ್ರವರ್ತಿ

   

ಮುಂಬೈ: ಬಂಗಾಳದಲ್ಲಿ 1946ರಲ್ಲಿ ಏನಾಯಿತು ಎಂಬುದರ ಬಗ್ಗೆ 'ದಿ ಬೆಂಗಾಲ್‌ ಫೈಲ್ಸ್‌' ಸಿನಿಮಾ ವಿವರಿಸುತ್ತದೆ. ಆದರೆ, ಸತ್ಯ ಹೇಳಿದರೆ ಅಪಪ್ರಚಾರವೆಂದು ಆರೋಪಿಸಲಾಗುತ್ತಿದೆ ಎಂದು ನಟ ಹಾಗೂ ಬಿಜೆಪಿ ನಾಯಕ ಮಿಥುನ್‌ ಚಕ್ರವರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

1946ರ ಆಗಸ್ಟ್‌ 16ರಂದು ಕೋಲ್ಕತ್ತದಲ್ಲಿ ನಡೆದ ದಂಗೆಯ ಕುರಿತ ನೈಜ ಘಟನೆಯಾಧಾರಿತ 'ದಿ ಬೆಂಗಾಲ್ ಫೈಲ್ಸ್‌' ಸಿನಿಮಾ, ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ 'ಫೈಲ್ಸ್‌' ಸರಣಿಯ ಮೂರನೇ ಚಲನಚಿತ್ರವಾಗಿದೆ.

ADVERTISEMENT

'ಆಲ್‌ ಇಂಡಿಯಾ ಮುಸ್ಲಿಂ ಲೀಗ್‌' ಪ್ರತ್ಯೇಕ ರಾಜ್ಯಕ್ಕೆ ಕರೆ ನೀಡಿದ ನಂತರ ಕೋಲ್ಕತ್ತದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅದನ್ನೇ ಆಧರಿಸಿ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್‌ 5ರಂದು ಬಿಡುಗಡೆಗೆ ಸಜ್ಜಾಗಿದೆ. ಆದರೆ, ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಪೊಲೀಸರು ತಡೆಯೊಡ್ಡಿದ್ದರು. ಹಾಗಾಗಿ, ಕೊನೇ ಕ್ಷಣದಲ್ಲಿ ಕಾರ್ಯಕ್ರಮದ ಸ್ಥಳ ಬದಲಿಸಲಾಗಿತ್ತು.

ಸಿನಿಮಾ ಕುರಿತು ಚಕ್ರವರ್ತಿ ಮಾತನಾಡಿದ್ದಾರೆ. ಅವರು, ಅಗ್ನಿಹೋತ್ರಿ ಅವರ ಹಿಂದಿನ 'ದಿ ತಾಷ್ಕೆಂಟ್‌ ಫೈಲ್ಸ್‌', 'ದಿ ಕಾಶ್ಮೀರ ಫೈಲ್ಸ್‌'ನಲ್ಲೂ ನಟಿಸಿದ್ದರು.

'ನಾವು ಸತ್ಯ ಹೇಳಿದರೆ, ಅದನ್ನು ಅಪಪ್ರಚಾರ ಎನ್ನಲಾಗುತ್ತದೆ. ನೌಖಾಲಿಯಲ್ಲಿ (ಸದ್ಯ ಬಾಂಗ್ಲಾದೇಶದಲ್ಲಿರುವ ಪಟ್ಟಣ) ಏನಾಗಿತ್ತು ಎಂಬುದನ್ನು ಹಾಗೂ ಕೋಲ್ಕತ್ತ ಹತ್ಯಾಕಾಂಡವನ್ನು ನಮ್ಮ ಮುಂದಿನ ತಲೆಮಾರು ತಿಳಿಯಬಾರದೇ? ಅವುಗಳ ಬಗ್ಗೆ ಅವರಿಗೆ ಗೊತ್ತಾಗಬೇಕಲ್ಲವೇ? ಇದು ಬಂಗಾಳ ಮತ್ತು ನೌಖಾಲಿಯಲ್ಲಿ ಏನಾಯಿತು ಎಂಬ ಸತ್ಯ ಮತ್ತು ಇತಿಹಾಸದ ಕುರಿತಾದ ಸಿನಿಮಾ. ನಾವು 'ದಿ ಕಾಶ್ಮೀರ ಫೈಲ್ಸ್‌' ಸಿನಿಮಾವನ್ನೂ ಮಾಡಿದ್ದೇವೆ. ಅದರಲ್ಲೂ ಸತ್ಯ ತೋರಿಸಿದ್ದೇವೆ' ಎಂದು ಹೇಳಿದ್ದಾರೆ.

'ನೀವು ಏನೇ ಮಾಡಿದರೂ ಕೆಲವರು ಇಂತಹ ವಿಚಾರಗಳನ್ನು ಗುರಿಯಾಗಿಸುತ್ತಾರೆ. 'ದಿ ತಾಷ್ಕೆಂಟ್‌ ಫೈಲ್ಸ್‌' ಮೂಲಕ ನಮ್ಮ ಮಹಾನ್‌ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರಿಗೆ ಏನಾಯಿತು ಎಂಬುದನ್ನು, 'ದಿ ಕಾಶ್ಮೀರ ಫೈಲ್ಸ್‌' ಮೂಲಕ ಕಾಶ್ಮೀರಿ ಪಂಡಿತರಿಗೆ ಏನಾಯಿತು ಎಂಬುದನ್ನು ತಿಳಿಯಬೇಕೆನ್ನುವ ಬಯಕೆ ನಿಮಗೆ ಇಲ್ಲವೇ?' ಎಂದು ಪ್ರಶ್ನಿಸಿರುವ ಚಕ್ರವರ್ತಿ, ಬಂಗಾಳದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು 'ದಿ ಬೆಂಗಾಲ್‌ ಫೈಲ್ಸ್‌' ತೋರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.