ADVERTISEMENT

ಕ್ಯಾಬ್‌ ಚಾಲಕರ ಕಥೆ– ವ್ಯಥೆಯ ‘ಯಲ್ಲೋಬೋರ್ಡ್‌’

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 13:21 IST
Last Updated 10 ಆಗಸ್ಟ್ 2020, 13:21 IST
‍ಪ್ರದೀಪ್‌ ಮತ್ತು ಅಹಲ್ಯಾ ಸುರೇಶ್‌
‍ಪ್ರದೀಪ್‌ ಮತ್ತು ಅಹಲ್ಯಾ ಸುರೇಶ್‌   

ಟ್ಯಾಕ್ಸಿ ಚಾಲಕರ ಬದುಕಿನ ಸುತ್ತ ಹೆಣೆದ ಕಥೆ– ವ್ಯಥೆಯನ್ನು ತೆರೆಯ ಮೇಲೆ ಹೇಳಲಿದೆಯಂತೆ ‘ಯಲ್ಲೋಬೋರ್ಡ್‌’ ಚಿತ್ರ. ಇದರ ಚಿತ್ರೀಕರಣ ಪೂರ್ಣಗೊಂಡಿದ್ದು,ಸದ್ಯ ಚಿತ್ರೀಕರಣೋತ್ತರ ಕೆಲಸದಲ್ಲಿ ತೊಡಗಿಕೊಂಡಿದೆ ಚಿತ್ರತಂಡ.

ಟ್ಯಾಕ್ಸಿ ಚಾಲಕರ ಬವಣೆಯನ್ನಷ್ಟೇ ಇದು ಬಿಚ್ಚಿಡುವ ಕಥಾಹಂದರ ಹೊಂದಿಲ್ಲ. ಜತೆಗೆ ಥ್ರಿಲ್ಲರ್‌ ಮತ್ತು ಸುಂದರ ಪ್ರೇಮಕಥೆಯನ್ನೂ ಒಳಗೊಂಡಿದೆ ಎನ್ನುತ್ತಾರೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವತ್ರಿಲೋಕ್‍ರೆಡ್ಡಿ. ಅವರಿಗೆ ನಿರ್ದೇಶಕನಾಗಿ ಚಂದನವನಕ್ಕೆ ಅಡಿ ಇಡುತ್ತಿರುವ ಸಂಭ್ರಮ.

ಜವಾಬ್ದಾರಿಯುತ ಚಾಲಕನೊಬ್ಬ ತನ್ನ ಪ್ರೇಯಸಿಯ ವ್ಯಾಸಾಂಗಕ್ಕೆ ಸಹಾಯಹಸ್ತ ಚಾಚುತ್ತಿರುತ್ತಾನೆ. ಇದರ ಮಧ್ಯೆ ಕೊಲೆಯೊಂದು ನಡೆಯುತ್ತದೆ. ಕೊಲೆ ಆರೋಪ ಚಾಲಕನ ಮೇಲೆ ಬರುತ್ತದೆ. ಆಗ ಸಮಾಜ, ಪೊಲೀಸ್ ಇಲಾಖೆ ಟ್ಯಾಕ್ಸಿ ಚಾಲಕ ಮತ್ತು ಆತನ ಪ್ರೇಯಸಿಯನ್ನು ಹೇಗೆ ನಡೆಸಿಕೊಳ್ಳುತ್ತದೆ? ಕೊಲೆಗೆ ಕಾರಣವೇನು ಮತ್ತು ನಿಜವಾದ ಕೊಲೆಗಾರ ಯಾರು ಎನ್ನುವ ರಹಸ್ಯವನ್ನು ಟ್ಯಾಕ್ಸಿ ಚಾಲಕ ಭೇದಿಸುವಕೂತೂಹಲ ಈ ಚಿತ್ರದಲ್ಲಿದೆ.ಬೆಂಗಳೂರು, ಮೂಡಿಗೆರೆ, ಗೋಕರ್ಣದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ ಎನ್ನುತ್ತಾರೆ ತ್ರಿಲೋಕ್‌.

ADVERTISEMENT

ನಾಯಕನಾಗಿ ಚಾಲಕನ ಪಾತ್ರದಲ್ಲಿ ಪ್ರದೀಪ್ ಮತ್ತು ಮಧ್ಯಮವರ್ಗದ ಹುಡುಗಿಯಾಗಿ ನಾಯಕಿಯ ಪಾತ್ರದಲ್ಲಿ ಅಹಲ್ಯಾ ಸುರೇಶ್ ನಟಿಸಿದ್ದಾರೆ.ತಾರಾಗಣದಲ್ಲಿ ಸ್ನೇಹಖುಷಿ, ಮೋನಿಕಾ, ಸಾಧುಕೋಕಿಲ, ಭವಾನಿಪ್ರಕಾಶ್, ಅಮಿತ್, ಶ್ರೀನಿವಾಸ್ ಇದ್ದಾರೆ.

ವಿಂಟೇಜ್ ಫಿಲಿಂಸ್ ಬ್ಯಾನರ್‌ನಡಿಮೈಸೂರಿನ ಉದ್ಯಮಿ ಗೌತಮ್ ಬಂಡವಾಳ ಹೂಡಿದ್ದಾರೆ. ಚೇತನ್‍ಕುಮಾರ್, ನಾಗೇಂದ್ರ ಪ್ರಸಾದ್, ಗೌಸ್‍ಪೀರ್ ಮತ್ತು ವಿಶ್ವಜಿತ್ ಸಾಹಿತ್ಯದ ಐದು ಹಾಡುಗಳಿಗೆ ಹೊಸ ಪ್ರತಿಭೆ ಅದ್ವಿಕ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರವೀಣ್, ಸಂಕಲನ ಗಿರಿಮಹೇಶ್, ಸಾಹಸ ಮಾಸ್‍ ಮಾದ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.