ADVERTISEMENT

ಐಶಾನಿ ಹೇಳಿದ ಥ್ರಿಲ್ಲರ್‌ ಕಥೆ

ಪ್ರಜಾವಾಣಿ ವಿಶೇಷ
Published 1 ಅಕ್ಟೋಬರ್ 2020, 19:30 IST
Last Updated 1 ಅಕ್ಟೋಬರ್ 2020, 19:30 IST
ಐಶಾನಿ ಶೆಟ್ಟಿ
ಐಶಾನಿ ಶೆಟ್ಟಿ   

ಸಿನಿಮಾ ಒಪ್ಪಿಕೊಳ್ಳುವಾಗ ಬಹುತೇಕರು ಕಥೆಗೆ ಮೊದಲ ಪ್ರಾಧಾನ್ಯ ನೀಡುತ್ತಾರೆ. ನಾನು ಕೂಡ ಕಥೆಗೆ ಆದ್ಯತೆ ನೀಡುತ್ತೇನೆ. ಆ ನಂತರವಷ್ಟೇ ನನ್ನ ಪಾತ್ರದತ್ತ ಗಮನ ಹರಿಸುತ್ತೇನೆ. ಆ ಪಾತ್ರಕ್ಕೆ ತೂಕವೂ ಇರಬೇಕು. ಜೊತೆಗೆ, ಕಥೆ ಜನರಿಗೆ ಕನೆಕ್ಟ್ ಆಗುವಂತಿರಬೇಕು. ಒಳ್ಳೆಯ ನಿರ್ದೇಶಕರು ಮತ್ತು ಚಿತ್ರತಂಡ ಚೆನ್ನಾಗಿದ್ದರೆ ನಟಿಸಲು ಸಿದ್ಧ.

ಲಾಕ್‌ಡೌನ್‌ ಅವಧಿಯಲ್ಲಿ ಐದಾರು ಕಥೆಗಳನ್ನು ಕೇಳಿರುವೆ. ಆದರೆ, ಯಾವುದನ್ನೂ ಒಪ್ಪಿಕೊಂಡಿಲ್ಲ. ಹಾಗೆಂದು ಕಥೆ, ಪಾತ್ರಗಳು ಚೆನ್ನಾಗಿಲ್ಲ ಎಂದರ್ಥವಲ್ಲ. ಈಗ ‘ಧರಣಿ ಮಂಡಲ ಮಧ್ಯದೊಳಗೆ’ ಮತ್ತು ‘ಹೊಂದಿಸಿ ಬರೆಯಿರಿ’ ಸಿನಿಮಾಗಳಲ್ಲಿ ನಟಿಸುತ್ತಿರುವೆ. ಈ ಪ್ರಾಜೆಕ್ಟ್‌ ಪೂರ್ಣಗೊಳ್ಳಲು ವರ್ಷಾಂತ್ಯವಾಗಲಿದೆ. ಆ ನಂತರವಷ್ಟೇ ನಾನು ಹೊಸ ಯೋಜನೆಗಳ ಬಗ್ಗೆ ನಿರ್ಧರಿಸಲು ಸಾಧ್ಯ.

‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದಲ್ಲಿ ನನ್ನದು ಸವಾಲಿನ ಪಾತ್ರ. ಆಕೆ ಆರ್ಟಿಸ್ಟ್‌ ಆಗಿರುತ್ತಾಳೆ. ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿರುವ ಹುಡುಗಿ. ಆಕೆಯದು ನೇರ ನಡೆ–ನುಡಿಯ ವ್ಯಕ್ತಿತ್ವ. ತಂದೆ– ತಾಯಿ ನಡುವಿನ ಜಗಳವೇ ಇದಕ್ಕೆ ಕಾರಣ. ಕ್ರೈಮ್‌, ಥ್ರಿಲ್ಲರ್‌ ಕಥೆ ಇದಾಗಿದೆ. ಶ್ರೀಧರ್‌ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದರಲ್ಲಿ ಚಿತ್ರಕಥೆಯೇ ಹೀರೊ. ಈ ಸವಾಲಿನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ನನ್ನ ನಂಬಿಕೆ.

ADVERTISEMENT

ಈಗಾಗಲೇ, ಇದರ ಶೇಕಡ 80ರಷ್ಟು ಶೂಟಿಂಗ್ ಮುಗಿದಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ. ಇದಾದ ಬಳಿಕ ಮಂಗಳೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಬಾಕಿ ಇರುವ ಚಿತ್ರೀಕರಣ ಪೂರ್ಣಗೊಳಿಸುವುದು ಚಿತ್ರತಂಡದ ಇರಾದೆ.

ಇದಾದ ಬಳಿಕ ‘ಹೊಂದಿಸಿ ಬರೆಯಿರಿ’ ಸಿನಿಮಾದ ಶೂಟಿಂಗ್‌ ಶುರುವಾಗಲಿದೆ. ಇದನ್ನು ನಿರ್ದೇಶಿಸುತ್ತಿರುವುದು ಜಗನ್ನಾಥ್‌ ರಾಮೃನಹಳ್ಳಿ. ಈಗಾಗಲೇ, ಇದರ ಮೊದಲ ಹಂತದ ಶೂಟಿಂಗ್‌ ಮುಗಿದಿದೆ. ಈ ತಿಂಗಳ ಅಂತ್ಯದಿಂದ ಸಕಲೇಶಪುರ, ದಾವಣಗೆರೆಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಚೆನ್ನೈನಲ್ಲೂ ಶೂಟಿಂಗ್‌ಗೆ ಸಿದ್ಧತೆ ನಡೆದಿದೆ.

ಈ ಚಿತ್ರದಲ್ಲಿಯೂ ನನ್ನದು ವಿಭಿನ್ನವಾದ ಪಾತ್ರ. ವಿಜ್ಞಾನಿಯಾಗಬೇಕು ಎಂಬುದು ಅವಳ ಕನಸು. ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಆಕೆಯದು. ಆ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತಿರುತ್ತಾಳೆ. ಕಾಲೇಜು ಜೀವನ ಮತ್ತು ಆ ಹಂತ ಮುಗಿದ ನಂತರದ ಬದುಕಿನ ಚಿತ್ರಣ ಇದರಲ್ಲಿದೆ.

ಇನ್ನೂ ಸಿನಿಮಾ ನಿರ್ದೇಶಿಸುವುದು ನನ್ನ ಬಹುದಿನದ ಕನಸು. ಅದಕ್ಕೆ ತಯಾರಿಯೂ ನಡೆಯುತ್ತಿದೆ. ಒಂದು ಕಥೆ ಸಿದ್ಧವಾಗಿದೆ. ಮತ್ತೊಂದನ್ನು ಈಗಷ್ಟೇ ಬರೆಯಲು ಆರಂಭಿಸಿರುವೆ. ನಾನು ಒಪ್ಪಿಕೊಂಡಿರುವ ಸಿನಿಮಾಗಳು ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕು. ಜೊತೆಗೆ, ನನಗಿನ್ನೂ ಹೆಚ್ಚಿನ ಅನುಭವ ಬೇಕು ಎನಿಸುತ್ತಿದೆ. ಅದರ ಹಾದಿಯಲ್ಲಿಯೇ ಸಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.