ADVERTISEMENT

Interview: ‘ಹೀರೊ’ ರಹಸ್ಯ ಹೇಳಿದ ರಿಷಬ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 2:55 IST
Last Updated 18 ಸೆಪ್ಟೆಂಬರ್ 2020, 2:55 IST
ರಿಷಬ್‌ ಶೆಟ್ಟಿ
ರಿಷಬ್‌ ಶೆಟ್ಟಿ   

ಸದಾ ವಿಭಿನ್ನಪ್ರಯೋಗಗಳಿಗೆ ಒಡ್ಡಿಕೊಂಡ ಕೆಲವೇ ಕೆಲವು ನಟರು, ನಿರ್ದೇಶಕರ ಪೈಕಿ ರಿಷಬ್ ಶೆಟ್ಟಿ ಕೂಡ ಒಬ್ಬರು. ಕೊರೊನಾ ಲಾಕ್ ಡೌನ್ 2.0 ಅವಧಿಯಲ್ಲಿ ಅವರು ಸದ್ದಿಲ್ಲದೆ ‘ಹೀರೊ’ ಸಿನಿಮಾ ಮಾಡಿ ಮುಗಿಸಿ, ಎಲ್ಲರೂ ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ. ಭರತ್‌ ರಾಜ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ನಾಯಕನಾಗಿ ನಟಿಸಿದ್ದು, ಸ್ಕ್ರಿಪ್ಟ್‌ ಕೆಲಸದಲ್ಲೂ ಭಾಗಿಯಾಗಿದ್ದಾರೆ. ರಿಷಬ್‌ ಎದುರು ನಾಯಕಿಯಾಗಿ ಕಿರುತೆರೆಯ ಜನಪ್ರಿಯ ನಟಿ ಗಾನವಿ ಲಕ್ಷ್ಮಣ್‌ ನಟಿಸಿದ್ದಾರೆ. ಸದ್ಯಸಣ್ಣಪುಟ್ಟ ಪ್ಯಾಚ್ ವರ್ಕ್ ಮಾಡುವುದರಲ್ಲಿ ಈಗ ಚಿತ್ರತಂಡತಲ್ಲೀನವಾಗಿದೆ. ಇದೇ ವರ್ಷಾಂತ್ಯದೊಳಗೆ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಇರಾದೆ. ಕೊರೊನಾದಿಂದ ಇಡೀ ಚಿತ್ರರಂಗವೇ ಬಹುತೇಕ ಸ್ತಬ್ಧವಾಗಿದ್ದ ಅವಧಿಯಲ್ಲಿ ಅನೇಕ ಸವಾಲುಗಳ ನಡುವೆ ಸಿನಿಮಾ ಮಾಡಿದ ರೋಚಕತೆಯ ಅನುಭವಗಳನ್ನು ರಿಷಬ್‌ ಶೆಟ್ಟಿ ‘ಪ್ರಜಾಪ್ಲಸ್’ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

* ನಿಮ್ಮ ‘ಹೀರೊ’ ಚಿತ್ರ ಗುಟ್ಟಾಗಿಟ್ಟ ಕಾರಣವೇನು?

ಚಿತ್ರದ ಶೂಟಿಂಗ್ ಮುಗಿಸಿಯೇ, ಫಸ್ಟ್ ಲುಕ್ ಜತೆಗೆ ‌ಟೈಟಲ್ ಮತ್ತು ಇನ್ನಷ್ಟು ವಿವರಗಳನ್ನು ರಿವೀಲ್ ಮಾಡುವ ಯೋಜನೆ ಮೊದಲೇ ಹಾಕಿಕೊಂಡಿದ್ದೆವು.
‘ರುದ್ರಪ್ರಯಾಗ’, ‘ಹರಿಕಥೆಯಲ್ಲ ಗಿರಿಕಥೆ’ ಹಾಗೂ ‘ಗರುಡ ಗಮನ ವೃಷಭ ವಾಹನ’ ಚಿತ್ರಗಳು ಶುರುವಾಗುವ ಮೊದಲೇ ಸಾಕಷ್ಟು ಸುದ್ದಿ ಮಾಡಿದ್ದವು. ಈ ಚಿತ್ರ ಕೂಡ ಅವುಗಳ ಸಾಲಿಗೆ ಸೇರದೆ, ಸಿನಿಮಾ ಪೂರ್ಣವಾದರೆ ಉತ್ತಮ ಎನಿಸಿ ಈ ನಿರ್ಧಾರ ತೆಗೆದುಕೊಂಡಿದ್ದೆವು. ಇನ್ನೊಂದು ವಿಚಾರ; ‘ಕಿರಿಕ್ ಪಾರ್ಟಿ’ ಸಿನಿಮಾ ಮಾಡಿದ ಮೇಲೆ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ನಮಗೆ ಒಂದಿಷ್ಟು ಸ್ನೇಹಿತರು, ಅಭಿಮಾನಿಗಳು ಹೆಚ್ಚೇ ಸಿಕ್ಕಿದ್ದಾರೆ. ಶೂಟಿಂಗ್ ನಡೆಯುತ್ತಿರುವ ವಿಚಾರ ಅವರ ಕಿವಿಗೆ ಬಿದ್ದರೆ ಅವರು ನಮ್ಮ ಬಳಿಗೆಬರುವುದನ್ನು ತಡೆಯುವುದು ಕಷ್ಟವಾಗುತ್ತಿತ್ತು. ಆ ಕಾರಣಕ್ಕೂ ಸೀಕ್ರೆಟ್ ಕಾಯ್ದುಕೊಂಡೆವು. ಈ ಸಿನಿಮಾ ಮಾಡುತ್ತಿರುವುದು ನಮ್ಮ ಇಂಡಸ್ಟ್ರಿಯಲ್ಲೂ ಯಾರಿಗೂ ಗೊತ್ತೇ ಇರಲಿಲ್ಲ. ಸಿನಿಮಾ ಮುಗಿಯುವ ಹಂತದಲ್ಲಷ್ಟೇ ಕೆಲವರಿಗೆ ಮಾತ್ರಗೊತ್ತಾಯಿತು.

ADVERTISEMENT


* ‘ಹೀರೊ’ ಚಿತ್ರದಲ್ಲಿ ಏನುಂಟು?

ನಾಯಕ ಮ‌ೂಲತಃ ಹೇರ್ ಸ್ಟೈಲಿಸ್ಟ್, ಅವನ ಬದುಕಿನಲ್ಲಿ ನಡೆಯುವ ಘಟನೆ ಆಧರಿಸಿ ಸಿನಿಮಾ ಕಥೆ ಸಾಗುತ್ತದೆ. ಕಾಮಿಡಿ, ಥ್ರಿಲ್ಲರ್ ಜಾನರ್‌ನಲ್ಲಿ ಸಾಗುವ ಸಂಪುರ್ಣ ಹಾಸ್ಯಮಯ ಚಿತ್ರವಿದು. ಒಂದಿಷ್ಟು ಸಾಹಸ, ಭಾವುಕತೆ... ಹೀಗೆ ಒಂದು ಚಿತ್ರಕ್ಕೆ ಏನು ಬೇಕೋ ಅದೆಲ್ಲವೂ ಇದೆ.

* ಚಿತ್ರದಲ್ಲಿ ನಿಮ್ಮಪಾತ್ರದ ಬಗ್ಗೆ ಒಂದಿಷ್ಟು ಹೇಳಿ

ಒಬ್ಬ ನಾರ್ಮಲ್ ಮನುಷ್ಯ ಸಿನಿಮಾದಲ್ಲಿ ತೋರಿಸುವಂತೆ ಹೀರೊ ಆಗಿರಬೇಕೆಂದಿಲ್ಲವಲ್ಲ. ಯಾವುದೇ ಸಂದರ್ಭ, ಸನ್ನಿವೇಶದಲ್ಲಿ ಒಬ್ಬ ಹೀರೋ ಹುಟ್ಟಿಕೊಳ್ಳಬಹುದು. ಒಬ್ಬ ಸಾಮಾನ್ಯ ಮನುಷ್ಯ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳನ್ನು ಹೇಗೆ ಎದುರಿಸುತ್ತಾನೆ ಮತ್ತು ಆತನ ಪಯಣ ಯಾವ ರೀತಿಯಲ್ಲಿ ರೋಚಕವಾಗಿರುತ್ತದೆ ಎನ್ನುವುದನ್ನು ಈ ಪಾತ್ರ ಹೇಳಲಿದೆ. ಇಮ್ಯಾಜಿನರಿ ಹೀರೋಗಿಂತ ರಿಯಲ್ ಹೀರೊ ಅಂದುಕೊಳ್ಳಬಹುದು. ಆತ ಹೀರೊ ಆಗಲೂ ಒಂದು ಪರಿಸ್ಥಿತಿ ಇರುತ್ತದೆಯಲ್ಲಾ ಅದು ಕೂಡ ಈ ಚಿತ್ರದ ಕುತೂಹಲವೇ. ತುಂಬಾ ಇಮೋಷನಲ್ ಪಾತ್ರ. ನನಗೆ ತುಂಬಾ ಚಾಲೆಂಜಿಂಗ್ ಆಗಿತ್ತು. ಮೊದಲ ಬಾರಿಗೆ ಒಂದಿಷ್ಟು ಆ್ಯಕ್ಷನ್ ಕೂಡ ಮಾಡಿರುವೆ. ಎಮೋಷನ್, ಹ್ಯೂಮರಸ್ ಎಲ್ಲವೂ ಇರುವ ಈ ಪಾತ್ರವನ್ನು ‌ಭರತ್ ರಾಜ್‌ ಅವರು ನನ್ನಿಂದ ತುಂಬಾ ಚೆನ್ನಾಗಿ ನಿರ್ವಹಿಸಿದರು.

* ಗಾನವಿ ಮತ್ತು ನಿಮ್ಮ‌ ಕಾಂಬಿನೇಷನ್ ಹೇಗಿತ್ತು.

ಗಾನವಿ ತುಂಬಾ ಒಳ್ಳೆಯ ಮತ್ತು ಅದ್ಭುತ ನಟಿ.ನಾಯಕಿ ಎನ್ನುವ ಹಮ್ಮುಬಿಮ್ಮು ಅವರಲ್ಲಿ ಕಾಣಲಿಲ್ಲ. ನಾವೆಲ್ಲರೂ ಒಂದೆ ಕಡೆ ಇದ್ದಿದ್ದರಿಂದ ಒಂದು ತಂಡವಾಗಿ ಕೆಲಸ‌ ಮಾಡಿದೆವು. ಅವರ ಜತೆ ನಟಿಸಿದ್ದು ಒಂದು ಅದ್ಭುತ ಅನುಭವ ನೀಡಿತು.

* ಚಿತ್ರೀಕರಣ ಎಲ್ಲೆಲ್ಲಿ ನಡೆಯಿತು

ಬೇಲೂರು ಮತ್ತು ಚಿಕ್ಕಮಗಳೂರು ನಡುವೆ ಇರುವ ಚೀಕನಹಳ್ಳಿಯ ಕಾಫಿ ಎಸ್ಟೇಟ್‌ವೊಂದರಲ್ಲಿ 45 ದಿನಗಳ ಚಿತ್ರೀಕರಣ ಮಾಡಿದೆವು. 200 ಎಕರೆ ಜಾಗದಲ್ಲಿ ನಮ್ಮ ಚಿತ್ರಕ್ಕೆ ಬೇಕಾದ ಅತ್ಯಂತ ಸುಂದರ ಮತ್ತುನ್ಯಾಚುರಲ್ ಸೆಟ್ ಆ ಎಸ್ಟೇಟ್‌ನಲ್ಲಿ ಸಿಕ್ಕಿಬಿಟ್ಟಿತು. ಅಲ್ಲಿ ಸುತ್ತಮುತ್ತ ಯಾವುದೇ ಊರುಗಳು ಇರಲಿಲ್ಲ. ಊರು ನೋಡಬೇಕೆಂದರೆ ಐದಾರು ಕಿಲೋಮೀಟರ್ ದೂರ ಹೋಗಬೇಕಿತ್ತು.

* ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಸಾಧ್ಯವಾಯಿತು

ಲಾಕ್ ಡೌನ್ 1.0 ಮುಗಿದು ಶೂಟಿಂಗ್ ನಡೆಸಲು ಅನುಮತಿ ಸಿಕ್ಕಾಗಲೇ, ಲಾಕ್ ಡೌನ್ ಸದ್ಯ ಮುಗಿಯದಿದ್ದರೆ ಸೀಮಿತ ಸಂಖ್ಯೆಯ ಚಿತ್ರತಂಡವಿಟ್ಟುಕೊಂಡು ಸಿನಿಮಾ ಹೇಗೆ ಮಾಡಬೇಕೆಂದು ಅಗತ್ಯ ಯೋಜನೆ ಮತ್ತುಒಂದಿಷ್ಟು ಮಾರ್ಗಸೂಚಿಗಳನ್ನು ಸ್ವಯಂ ರೂಪಿಸಿಕೊಂಡಿದ್ದೆವು.ನಾವು ಬಳಸುತ್ತಿದ್ದ ಪ್ರತಿ ವಸ್ತು ಸ್ಯಾನಿಟೈಸ್ ಮಾಡುವುದು, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದು ಚಾಚೂ ತಪ್ಪದೆ ಮಾಡಿದೆವು. ದಿನ ಬೆಳಿಗ್ಗೆ ಕಷಾಯ ಕುಡಿಯುತ್ತಿದ್ದೆವು.

ಶೂಟಿಂಗ್ ನಡೆಯುತ್ತಿರುವ ವಿಷಯ ಗೊತ್ತಾದರೆ ಜನರು ಸೇರುತ್ತಾರೆ ಅವರನ್ನು ನಿಯಂತ್ರಿಸುವುದು ಕಷ್ಟ ಆಗುತ್ತದೆ ಎನ್ನುವ ಕಾರಣಕ್ಕೆ ತುಂಬಾ ಇಂಟೀರಿಯರ್ ತಾಣವನ್ನೇ ಆಯ್ಕೆ ಮಾಡಿಕೊಂಡಿದ್ದೆವು. ಹೊರಗಿನ ಪ್ರಪಂಚದ ಸಂಪರ್ಕ ಕಡಿತಮಾಡಿಕೊಂಡು, ಅಲ್ಲಿ ನೆಲೆಯೂರಿದ್ದೆವು. ಅದೊಂದು ರೀತಿಯ ಸೆಲ್ಫ್ ಕ್ವಾರಂಟೈನ್!ಜುಲೈನಲ್ಲಿ ಶೂಟಿಂಗ್ ಶುರು ಮಾಡಿದ್ದೆವು.ಪೂರ್ತಿ ಶೂಟಿಂಗ್ ಮುಗಿದ ಮೇಲೆಯೇ ನಾವು ಆಚೆ ಬಂದಿದ್ದು.

* ಚಿತ್ರತಂಡದ ಆಯ್ಕೆ ಹೇಗೆ ನಡೆಯಿತು

ಲಾಕ್ ಡೌನ್ ಅವಧಿಯಲ್ಲಿ ಎಲ್ಲಿಯೂ ಪ್ರಯಾಣಿಸದೆ, ಜನರೊಂದಿಗೆ ಬೆರೆಯದೇ ಇದ್ದಂತಹವರನ್ನು ಚಿತ್ರ ತಂಡಕ್ಕೆ ಆಯ್ಕೆ‌ಮಾಡಿಕೊಂಡಿದ್ದೆವು. ಚಿತ್ರಕ್ಕೆ ಬಂದ ಮೇಲೆ ನನ್ನ ಕೆಲಸ ಇಷ್ಟೇ ಎನ್ನುವ ಒಂದು ವರ್ಗ ಇದ್ದರೆ, ಏನೇ ಕೆಲಸ ಕೊಟ್ಟರೂ ಮಾಡುತ್ತೇವೆ ಎನ್ನುವ ಎನ್ನೊಂದು ವರ್ಗವಿದೆ. ನಾವು ಎರಡನೇ ವರ್ಗದ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡೆವು. ಒಬ್ಬೊಬ್ಬರು ಎರಡುಮೂರು ಕೆಲಸಗಳನ್ನು ಮಾಡುತ್ತಿದ್ದರು. ನೂರು ಜನರು ಮಾಡುವ ಕೆಲಸವನ್ನು 30 ಜನರಲ್ಲಿ ಮಾಡಿ ಮುಗಿಸಿದೆವು. ಆ್ಯಕ್ಟಿಂಗ್ ಜತೆಗೆ ಪ್ರೊಡಕ್ಷನ್ ಕೆಲಸವನ್ನೂ ಕಲಾವಿದರು ಮಾಡಿದ್ದಾರೆ. ಆರಂಭಿಕ ಲಾಕ್ ಡೌನ್‌ನಲ್ಲಿ ಕೆಲಸ ಮಾಡಲು ಆಗುತ್ತಿಲ್ಲವಲ್ಲ ಎನ್ನುವ ಫೀಲ್ ಎಲ್ಲರಿಗೂ ಇತ್ತು. ಆ ಎನರ್ಜಿಯನ್ನೆಲ್ಲಾ ನಮ್ಮ ಈ ಸಿನಿಮಾಕ್ಕೆ ಅವರೆಲ್ಲರೂ ಹಾಕಿದ್ದಾರೆ.

* ಸಿನಿಮಾ ಯಾವಾಗ ಬಿಡುಗಡೆ

ಡಬ್ಬಿಂಗ್, ಎಡಿಟಿಂಗ್ ಮುಗಿದಿದೆ. ಮ್ಯೂಸಿಕ್ ಮತ್ತು ಇನ್ನಿತರ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿವೆ. ಇನ್ನು ಎರಡು ತಿಂಗಳಲ್ಲಿ ಅಂತಿಮ ಕಾಪಿ ತೆಗೆಯುತ್ತೇವೆ. 2020ರೊಳಗೆಯೇ ಈ ಸಿನಿಮಾ ಬಿಡುಗಡೆಯ ಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.