ADVERTISEMENT

ಸಿನೆಮಾ ಪ್ರದರ್ಶನಕ್ಕೆ ಒಪ್ಪಿಗೆ: ಬರುತ್ತಿವೆ ಬಿಗ್‌ಬಜೆಟ್‌ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 19:30 IST
Last Updated 22 ಜುಲೈ 2021, 19:30 IST
‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್‌
‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್‌   

ರಾಜ್ಯ ಸರ್ಕಾರ ಕೋವಿಡ್ ಲಾಕ್‌ಡೌನ್‌ ನಿರ್ಬಂಧಗಳನ್ನು ಮತ್ತಷ್ಟು ‌ಸಡಿಲಿಸಿ, ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಕಳೆದ ಸೋಮವಾರದಿಂದಲೇ ಚಲನಚಿತ್ರ ಪ್ರದರ್ಶನ ಆರಂಭಿಸಲು ಒಪ್ಪಿಗೆ ನೀಡಿದೆ. ಆದರೆ, ಪ್ರೇಕ್ಷಕರ ಸಂಖ್ಯೆಯನ್ನು ಶೇ 50 ನಿರ್ಬಂಧಿಸಿರುವುದು ಚಿತ್ರಮಂದಿರಗಳು ಇನ್ನೂ ‘ಲಾಕ್‌ಡೌನ್‌’ಯಲ್ಲೇ ಇರುವಂತೆ ಮಾಡಿದೆ.

ಪ್ರೇಕ್ಷಕರ ಸಂಖ್ಯೆ ನಿರ್ಬಂಧಿಸಿದ ಕಾರಣ, ನಷ್ಟದ ಭೀತಿಯಲ್ಲಿ ತಕ್ಷಣವೇ ಹೊಸ ಚಿತ್ರಗಳ ಬಿಡುಗಡೆಗೆ ನಿರ್ಮಾಪಕರು ಹಿಂದೇಟು ಹಾಕಿದ್ದರು. ಇದೀಗ ಆಗಸ್ಟ್‌ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಸರ್ಕಾರ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ 100 ಪ್ರೇಕ್ಷಕರಿಗೆ ಅವಕಾಶ ನೀಡುವ ಭರವಸೆಯೊಂದಿಗೆ ಬಿಗ್‌ಬಜೆಟ್‌ ಚಿತ್ರಗಳ ಬಿಡುಗಡೆ ದಿನಾಂಕವನ್ನು ಚಿತ್ರತಂಡಗಳು ಘೋಷಿಸಿವೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದಿಂದ ಚಿತ್ರಮಂದಿರಗಳಲ್ಲಿ ಮತ್ತದೇ ಹಿಂದಿನ ಶಿಳ್ಳೆ, ಚಪ್ಪಾಳೆ, ಜೈಕಾರ ಮಾರ್ದನಿಸಲಿದೆ.

ಆ.20ರಂದು ‘ಸಲಗ’: ನಟ ದುನಿಯಾ ವಿಜಯ್‌ ನಟನೆಯ ‘ಸಲಗ’ ಚಿತ್ರವು ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಇದೇ ಮೊದಲ ಬಾರಿಗೆ ನಟ ವಿಜಯ್‌, ಈ ಚಿತ್ರದ ಮುಖಾಂತರ ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದಾರೆ. ಈ ಚಿತ್ರವು ಏ.15ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು.

ADVERTISEMENT

ಗಣೇಶ ಚತುರ್ಥಿಗೆ ‘ಭಜರಂಗಿ–2’: ಎ.ಹರ್ಷ ನಿರ್ದೇಶನದ, ನಟ ಶಿವರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಭಜರಂಗಿ–2’ ಚಿತ್ರವು ಸೆ.10ರಂದು ಗಣೇಶ ಚತುರ್ಥಿಗೆ ತೆರೆಕಾಣಲಿದೆ. ಇದೇ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ಭಜರಂಗಿ’ ಚಂದನವನದಲ್ಲಿ ದೊಡ್ಡಮಟ್ಟದ ಹಿಟ್‌ ಆಗಿತ್ತು.

ಶೀಘ್ರದಲ್ಲೇ ‘ಕೋಟಿಗೊಬ್ಬ–3’ ತೆರೆಗೆ: ಈ ಎರಡೂ ಚಿತ್ರಗಳ ಬಿಡುಗಡೆ ಬಳಿಕ ನಟ ಸುದೀಪ್‌ ನಟನೆಯ ‘ಕೋಟಿಗೊಬ್ಬ–3’ ಬಿಡುಗಡೆಯಾಗಲಿದೆ. ಬಾಕಿ ಉಳಿದಿದ್ದ ತಮ್ಮ ಪಾತ್ರದ ಡಬ್ಬಿಂಗ್‌ ಅನ್ನೂ ಸುದೀಪ್‌ ಅವರು ಪೂರ್ಣಗೊಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಸತ್ಯ ಹಾಗೂ ಶಿವ ಶೀಘ್ರದಲ್ಲೇ ತೆರೆಯ ಮೇಲೆ ಬರಲಿದ್ದಾರೆ’ಎಂದಿದ್ದಾರೆ.

ಡಾಲಿ ಧನಂಜಯ್‌ ನಟನೆಯ ‘ಬಡವ ರಾಸ್ಕಲ್‌’ ಚಿತ್ರವು ಸೆ.24ರಂದು ತೆರೆ ಕಾಣಲಿದೆ. ಇದಾದ ನಂತರದಲ್ಲಿ ಯಶ್‌ ನಟನೆಯ ‘ಕೆಜಿಎಫ್‌–2’, ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ದಂತಹ ಬಿಗ್‌ಬಜೆಟ್‌ ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಜೊತೆಗೆ ಅಜೇಯ್ ರಾವ್‌ ನಟನೆಯ ‘ಕೃಷ್ಣಾ ಟಾಕೀಸ್‌’ ಮರುಬಿಡುಗಡೆಗೆ ಸಿದ್ಧತೆ ನಡೆಸಿದೆ. ಆಗಸ್ಟ್‌ನಲ್ಲೇ ಸೂರಜ್‌ ಗೌಡ ಹಾಗೂ ಧನ್ಯಾ ರಾಮ್‌ಕುಮಾರ್‌ ನಟನೆಯ ‘ನಿನ್ನ ಸನಿಹಕೆ’ ಚಿತ್ರವೂ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.